Puttappa suggests adopting the ideals of Kittur Rani Chennamma.

- ಶಿಕಾರಿಪುರದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಮಾತೃಭೂಮಿಯ ರಕ್ಷಣೆಗಾಗಿ ಬ್ರಿಟೀಷ್ ಸರ್ಕಾರದ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ದೇಶದಲ್ಲಿಯೇ ಸ್ವಾತಂತ್ರ ಸಂಗ್ರಾಮದ ಕಿಡಿಯನ್ನು ಹೊತ್ತಿಸಿದ ಕೀರ್ತಿ ಕಿತ್ತೂರು ರಾಣಿ ಚನ್ನಮ್ಮನವರಿಗೆ ಸಲ್ಲುತ್ತದೆ. ಅವರ ಧೈರ್ಯ, ಸಾಹಸ, ಸ್ವಾಭಿಮಾನ ಮತ್ತು ದೇಶಪ್ರೇಮವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ರಾಷ್ಟ್ರ ನಿರ್ಮಾಣಕ್ಕೆ ಸಂಕಲ್ಪ ಕೈಗೊಳ್ಳಬೇಕು ಎಂದು ಉಪನ್ಯಾಸಕ ಕೆ.ಎಚ್.ಪುಟ್ಟಪ್ಪ ಬಿಳವಾಣಿ ಹೇಳಿದರು.

ತಾ.ಪಂ. ಸಭಾಂಗಣದಲ್ಲಿ ತಾ.ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ವೀರರಾಣಿ ಕಿತ್ತೂರು ಚನ್ನಮ್ಮನವರ 248 ನೇ ಜಯಂತ್ಯುತ್ಸವ ಮತ್ತು 202 ನೇ ವಿಜಯೋತ್ಸವ ಹಾಗೂ ವಿಶೇಷ ಸಾಧಕರಿಗೆ ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು.

ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಬ್ರಿಟಿಷರ ವಿರುದ್ಧ ಸಾಹಸದಿಂದ ಹೋರಾಡಿ ವಿಜಯದುಂದುಬಿ ಮೊಳಗಿಸಿದ ರಾಣಿ ಚನ್ನಮ್ಮರವರ ಧೈರ್ಯ, ಶೌರ್ಯ, ಸಾಹಸ ಭಾರತದ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ ಎಂದರು.

ಸಮಾಜದ ಮುಖಂಡರು ಚನ್ನಮ್ಮರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪಾರ್ಪಣೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅತಿಥಿ ಉಪನ್ಯಾಸಕಿ ಎಂ.ಪಿ.ವೀಣಾ ಪೂಜಾರ್ ನಾಗಿಹಳ್ಳಿ, ನಿ.ಪೊಲೀಸ್ ಅಧಿಕಾರಿ ಸದಾಶಿವಪ್ಪ, ರಟ್ಟಿಹಳ್ಳಿ ತಾ.ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಪರಮೇಶಪ್ಪ ಹಲಗೇರಿ, ಸಮಾಜದ ಮುಖಂಡ ಸಿದ್ದಣ್ಣ ಚಿಕ್ಕಬಿದರಿ ಮಾತನಾಡಿದರು. ತಾ.ಸಮಾಜದ ಅಧ್ಯಕ್ಷ ಎಂ.ಎಸ್.ಶಿವರಾಜ್ ಬಗನಕಟ್ಟೆ ಅಧ್ಯಕ್ಷತೆ ವಹಿಸಿದ್ದರು.

ವಿವಿಧ ಕ್ಷೇತ್ರದಲ್ಲಿನ ಸಾಧನೆಗಾಗಿ ಕೆ.ಎಚ್ ಲಕ್ಷ್ಮಣ, ಎನ್.ವಿ.ವೀರೇಶ್, ದುರ್ಗಪ್ಪ, ಡಾ.ನಿರಂಜನ, ಡಾ.ಮಾಲತೇಶ್, ಇ.ಎಚ್ ಬಸವರಾಜ್, ರಾಜಪ್ಪ ಎಸ್, ಕುಮಾರ್ ನಾಯ್ಕ್, ಶಿವಾನಂದಪ್ಪ, ಎಂ.ಬಿ.ಶುಂಠಿ, ರವಿ ಕಪ್ಪನಹಳ್ಳಿ, ಮುರುಗೇಶ, ಗೌರಮ್ಮ, ಪಾವನಿ, ನೈದಲೆ ಮತ್ತಿತರಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ನೀಲಮ್ಮ ಸುರೇಶ್ ಉಪಸ್ಥಿತರಿದ್ದರು. ಹುಚ್ಚರಾಯಸ್ವಾಮಿ ದೇವಸ್ಥಾನದಿಂದ ಚನ್ನಮ್ಮನ ಭಾವಚಿತ್ರವನ್ನು ವಿವಿಧ ಕಲಾ ಮೇಳಗಳ ವಿಜೃಂಭಣೆಯ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

2025-26 ನೇ ಸಾಲಿನಲ್ಲಿ ಎಸ್.ಎಸ್.ಎಲ್‌.ಸಿ/ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕುಸುಮ ಪ್ರಾರ್ಥಿಸಿ, ಡಾ.ಮಾಲತೇಶ ಸ್ವಾಗತಿಸಿ, ಗಂಗಾಧರ ನಿರೂಪಿಸಿ ವಂದಿಸಿದರು.

ಫೋಟೋ

ಶಿಕಾರಿಪುರದ ತಾ.ಪಂ ಸಭಾಂಗಣದಲ್ಲಿ ನಡೆದ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತಿಯಲ್ಲಿ ಹಲವರು ಪಾಲ್ಗೊಂಡಿದ್ದರು.