ಗದಗ: ಲಿಂ .ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರು ಅಂಧ, ಅನಾಥ, ಅಂಗವಿಕಲರ ಬದುಕಿಗೆ ಬೆಳಕಾಗಿ, ಭಕ್ತರ ಹೃದಯ ಮಂದಿರದಲ್ಲಿ ದೇವರಾಗಿ ಪೂಜಿತರಾದ ಪುಣ್ಯಾತ್ಮರಾಗಿದ್ದರು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಬಸಪ್ಪ ಗುಡಿಮನಿ ತಿಳಿಸಿದರು.ನಗರದ ವೀರಶೈವ ಜನರಲ್ ಲೈಬ್ರರಿಯ ಆವರಣದಲ್ಲಿರುವ ವೀರಶೈವ ಮಹಾಸಭಾದ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಪುಟ್ಟರಾಜ ಗವಾಯಿಗಳವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗುರು ಪಂಚಾಕ್ಷರ ಗವಾಯಿಗಳವರ ನೆಚ್ಚಿನ ಶಿಷ್ಯರಾಗಿದ್ದ ಪುಟ್ಟರಾಜರು ಗುರುವನ್ನು ಮೀರಿಸಿ ಸಾಧನೆ ಮಾಡಿದರು. ಸಂಗೀತ ಕ್ಷೇತ್ರದಲ್ಲಿ ದಿಗ್ಗಜರಾಗಿದ್ದರು. ಕಣ್ಣಿಲ್ಲದಿದ್ದರೂ ಕಣ್ಣಿದ್ದವರು ಕಣ್ತೆರೆದು ಅಧ್ಯಯನ ಮಾಡುವ ಅಪೂರ್ವವಾದ ಗ್ರಂಥಗಳನ್ನು ರಚಿಸಿದ ತ್ರಿಭಾಷಾ ಸಾಹಿತಿಗಳು, ತ್ರಿಕಾಲ ಪೂಜಾನಿಷ್ಠರಾಗಿದ್ದರು ಎಂದರು.ಅಂಧ, ಅನಾಥ, ಅಂಗವಿಕಲರು ಹೆತ್ತವರಿಗೆ ಭಾರವಾಗಿ ಮಾರ್ಕೆಟ್, ಬಸ್‌ಸ್ಟ್ಯಾಂಡ್, ರೈಲ್ವೇ ಸ್ಟೇಷನ್‌ಗಳಲ್ಲಿ ಭಿಕ್ಷೆಯನ್ನು ಬೇಡಿ ಜೀವನ ನಡೆಸಬೇಕಾದ ಪರಿಸ್ಥಿತಿಯುಳ್ಳವರಿಗೆ ಬದುಕಿಗೆ ಬೆಳಕಾದವರು. ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂತಹ ವ್ಯಕ್ತಿಗಳಿಗೆ ಉಚಿತ ವಸತಿ, ಅನ್ನ, ಶಿಕ್ಷಣ ನೀಡುವ ಮೂಲಕ ಅವರು ಸಂಗೀತವನ್ನು ಕರಗತ ಮಾಡಿಕೊಂಡು ಸ್ವತಂತ್ರವಾಗಿ ಜೀವನ ನಡೆಸುವಂತೆ ಮಾಡಿದವರು. ಅಂತೆಯೇ ಇವರ ಸಾವಿರಾರು ಕಲಾವಿದರು ನಾಡಿನಲ್ಲಿ, ದೇಶ ವಿದೇಶಗಳಲ್ಲಿ ಶ್ರೇಷ್ಠ ಸಂಗೀತ ಕಲಾವಿದರಾಗಿದ್ದಾರೆ. ಉನ್ನತ ಹುದ್ದೆಯಲ್ಲಿದ್ದಾರೆ ಎಂದರು.ಈ ವೇಳೆ ಸಿ.ಕೆ. ಕಡಣಿ ಶಾಸ್ತ್ರೀ, ವಿ.ಕೆ. ಗುರುಮಠ, ಎಸ್.ಐ. ಯಾಳಗಿ, ಜಿ.ಎಸ್. ಹಿರೇಮಠ, ರಾಜು ಕುರಡಗಿ ಮಾತನಾಡಿದರು. ಗದುಗಿನ ಕಲಾ ವಿಕಾಸ ಪರಿಷತ್ತು 25ನೇ ವರ್ಷದ ಸಂಭ್ರಮಾಚರಣೆ ಆಚರಿಸಿಕೊಳ್ಳುತ್ತಿದ್ದು, ಈ ಕುರಿತು ಲೋಗೋವನ್ನು ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಬಸಪ್ಪ ಗುಡಿಮನಿ ಬಿಡುಗಡೆಗೊಳಿಸಿದರು.ನಿವೃತ್ತ ತಹಸೀಲ್ದಾರ್ ಎ.ಟಿ. ನರೇಗಲ್ಲ, ಬಿ.ಎ. ಪಾಟೀಲ, ಎಂ.ಬಿ. ಚನ್ನಪ್ಪಗೌಡ್ರ, ಸಿದ್ದಣ್ಣ ಜೀವನಗೌಡ್ರ ಸೇರಿದಂತೆ ಮಹಾಸಭಾದ ಆಜೀವ ಸದಸ್ಯರು, ಭಕ್ತರು ಇದ್ದರು. ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಘರಾಜೇಂದ್ರ ಬಡ್ನಿ ಸ್ವಾಗತಿಸಿದರು. ಖಜಾಂಚಿ ಚನ್ನವೀರಪ್ಪ ಹುಣಶಿಕಟ್ಟಿ ನಿರೂಪಿಸಿ, ವಂದಿಸಿದರು.
ಪುಟ್ಟರಾಜರು ಸಂಗೀತ ಕ್ಷೇತ್ರದ ದಿಗ್ಗಜ: ಶರಣಬಸಪ್ಪ ಗುಡಿಮನಿ
ಗುರು ಪಂಚಾಕ್ಷರ ಗವಾಯಿಗಳವರ ನೆಚ್ಚಿನ ಶಿಷ್ಯರಾಗಿದ್ದ ಪುಟ್ಟರಾಜರು ಗುರುವನ್ನು ಮೀರಿಸಿ ಸಾಧನೆ ಮಾಡಿದರು. ಸಂಗೀತ ಕ್ಷೇತ್ರದಲ್ಲಿ ದಿಗ್ಗಜರಾಗಿದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.