ಸರ್ಕಾರದಿಂದ ರೈತರಿಗೆ ಉಚಿತ ಟ್ರಾನ್ಸ್ ಫಾರ್ಮರ್ ನೀಡಲು ಪುಟ್ಟೇಗೌಡ ಒತ್ತಾಯ

| Published : Jul 04 2024, 01:00 AM IST

ಸರ್ಕಾರದಿಂದ ರೈತರಿಗೆ ಉಚಿತ ಟ್ರಾನ್ಸ್ ಫಾರ್ಮರ್ ನೀಡಲು ಪುಟ್ಟೇಗೌಡ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳಿದ್ದವು. ಬಿಜೆಪಿ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ರೈತ ಸಂಘಟನೆಗಳು ಹೋರಾಟ ನಡೆಸಿದ್ದವು. ಅಂದು ಕಾಂಗ್ರೆಸ್ಸಿಗರೂ ಸಹಕಾರ ನೀಡಿದ್ದರು. ಬಿಜೆಪಿ ಸರ್ಕಾರ ಕಿತ್ತೊಗೆದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ರೈತರ ಹೋರಾಟವೂ ಪ್ರಮುಖ ಕಾರಣ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರಾಜ್ಯದಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಉಚಿತ ವಿದ್ಯುತ್ ಪರಿವರ್ತಕ ಪೂರೈಕೆ ನೀತಿ ಮರು ಜಾರಿ ಮಾಡುವಂತೆ ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಒತ್ತಾಯಿಸಿದ್ದಾದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಉಚಿತ ಟಿ.ಸಿ ಪೂರೈಕೆ ವ್ಯವಸ್ಥೆಯನ್ನು ಮರು ಜಾರಿಗೊಳಿಸದಿದ್ದರೆ ವಿದ್ಯುತ್ ಬಳಕೆದಾರ ರೈತರು ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಈ ಹಿಂದೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳಿದ್ದವು. ಬಿಜೆಪಿ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ರೈತ ಸಂಘಟನೆಗಳು ಹೋರಾಟ ನಡೆಸಿದ್ದವು. ಅಂದು ಕಾಂಗ್ರೆಸ್ಸಿಗರೂ ಸಹಕಾರ ನೀಡಿದ್ದರು. ಬಿಜೆಪಿ ಸರ್ಕಾರ ಕಿತ್ತೊಗೆದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ರೈತರ ಹೋರಾಟವೂ ಪ್ರಮುಖ ಕಾರಣ ಎಂದರು.

ಕಾಂಗ್ರೆಸ್ ಸರ್ಕಾರ ರೈತರಿಗೆ ಅನುಕೂಲ ಮಾಡಿಕೊಡುವ ಬದಲು ಪಂಪ್‌ಸೆಟ್ ಆಧಾರಿತ ಕೃಷಿಕರಿಗೆ ಅಗತ್ಯ ವಿದ್ಯುತ್ ಪರಿವರ್ತಕ(ಟಿ.ಸಿ) ನೀಡಲು ಶೇ.20 ರಷ್ಟು ಹಣ ಕಟ್ಟುವಂತೆ ಹೊಸ ನೀತಿ ಜಾರಿಗೊಳಿಸಿದೆ. ಇದರಿಂದ ಒಂದು ಟಿಸಿ ಪಡೆಯಲು ರೈತ ಲಕ್ಷಾಂತರ ಹಣವನ್ನು ಕಟ್ಟಬೇಕಾದ ಸಂಕಷ್ಠಕ್ಕೆ ಸಿಲುಕಿದ್ದಾನೆ ಎಂದರು.

ಬಿಜೆಪಿ ಸರ್ಕಾರ ಮುಂಬಾಗಿಲ ಮೂಲಕ ಜಾರಿಗೊಳಿಸಲು ಹೊರಟಿದ್ದ ರೈತ ವಿರೋಧಿ ನೀತಿಯನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಿಂಬಾಗಿಲಿನ ಮೂಲಕ ಜಾರಿಗೊಳಿಸಿದೆ. ರೈತರಿಗೆ ಉಚಿತ ವಿದ್ಯುತ್ ನೀಡುವ ಶಕ್ತಿಯಿಲ್ಲದ ರಾಜ್ಯ ಸರ್ಕಾರ ಟಿ.ಸಿ ಅಳವಡಿಕೆ ಹೆಸರಿನಲ್ಲಿ ರೈತರ ಸುಲಿಗೆಗೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರಡು ಭೂಮಿಯನ್ನು ನೀರಾವರಿಗೆ ಒಳಪಡಿಸಬೇಕಾದರೆ ರಾಜ್ಯ ಸರ್ಕಾರ ಅಭಿವೃದ್ಧಿ ಮತ್ತು ನಿರ್ವಹಣೆ ಹೆಸರಿನಲ್ಲಿ ಪ್ರತಿವರ್ಷ ಸಾವಿರಾರು ಕೋಟಿ ವ್ಯಯಿಸುವ ಬದಲು ತನ್ನ ಸ್ವಂತ ಹಣದಿಂದಲೇ ತನ್ನ ಭೂಮಿ ಕೃಷಿ ಉತ್ಪಾದನೆಗೆ ಬಳಕೆ ಮಾಡುವ ರೈತನಿಗೆ ಒಂದೇ ಒಂದು ಸಲ ಉಚಿತ ಟಿ.ಸಿ.ನೀಡುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ತಕ್ಷಣವೇ ತನ್ನ ನೂತನ ವಿದ್ಯುತ್ ಟಿ.ಸಿ ಪೂರೈಕೆ ನೀತಿಯನ್ನು ಹಿಂಪಡೆದು ಹಿಂದಿನಂತೆ ರೈತರಿಗೆ ಉಚಿತ ಟಿ.ಸಿ.ಪೂರೈಕೆ ಮಾಡಬೇಕು. ಸರ್ಕಾರ ರೈತ ವಿರೋಧಿ ನೀತಿ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಆದ ಗತಿಯೇ ರಾಜ್ಯ ಸರ್ಕಾರಕ್ಕೂ ಆಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಇದ್ದರು.