ಉಡುಪಿ: ಇಂದು ಮೊಬೈಲ್ ಫೋನ್‌ಗಳಿಗೆ ದಾಸರಾಗಿರುವ ಮಕ್ಕಳನ್ನು ಅದರಿಂದ ಬಿಡಿಸಿಕೊಳ್ಳುವುದಕ್ಕಾಗಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೊಸ ಪ್ರಯೋಗ ಕೈಗೆತ್ತಿಕೊಂಡಿದ್ದಾರೆ. ಅವರು ಪುತ್ತಿಗೆಯಲ್ಲಿರುವ ತಮ್ಮ ಮೂಲಮಠದಲ್ಲಿ ಮಕ್ಕಳಿಗೆ ಮೊಬೈಲ್ ವರ್ಜನ ಶಿಬಿರ ಆಯೋಜಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀಗಳು, ಸಣ್ಣ ವಯಸ್ಸಿನ ಮಕ್ಕಳು ಅತೀಯಾದ ಮೊಬೈಲ್ ಗೀಳು ಹಚ್ಚಿಕೊಳ್ಳುತ್ತಿದ್ದಾರೆ, ಇದರಿಂದ ಅವರ ನೈಸರ್ಗಿಕ ಬೆಳವಣಿಗೆ ಕುಂಠಿತವಾಗುತ್ತಿದೆ. ಈ ಗಂಭೀರ ಸಮಸ್ಯೆ ಮನಗಂಡು, ಮಕ್ಕಳನ್ನು ಮೊಬೈಲ್ ಚಟದಿಂದ ಮುಕ್ತಗೊಳಿಸಲು ಮೇ 14ರಿಂದ 18ರವರೆಗೆ ವಿಶೇಷ ‘ಮೊಬೈಲ್ ವರ್ಜನ ಶಿಬಿರ’ವನ್ನು ಹಮ್ಮಿಕೊಳ್ಳಲಾಗಿದೆ ಎಂದರು
ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಇಲ್ಲದಿದ್ದರೆ ಬದುಕೇ ಇಲ್ಲ ಎಂಬ ಹಂತಕ್ಕೆ ತಲುಪುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ 6 ರಿಂದ 12 ವರ್ಷದ ಒಳಗಿನ ಮಕ್ಕಳಿಗಾಗಿ ಪುತ್ತಿಗೆ ಮಠದ ಪರಿಸರದಲ್ಲಿ ವಾಸದೊಂದಿಗೆ ನಾಲ್ಕು ದಿನಗಳ ಶಿಬಿರ ನಡೆಯಲಿದೆ. ಈ ನಾಲ್ಕು ದಿನ ಮಕ್ಕಳು ಮೊಬೈಲ್ ಬಳಸದಂತೆ ನಿರ್ಬಂಧ ವಿಧಿಸಿ, ಅದರ ಬದಲಾಗಿ ದೇಸೀ ಕ್ರೀಡೆಗಳು, ಸಾಂಪ್ರದಾಯಿಕ ಆಟಗಳು ಮತ್ತು ಆಧ್ಯಾತ್ಮಿಕ-ಧಾರ್ಮಿಕ ಚಿಂತನೆಗಳಲ್ಲಿ ತೊಡಗಿಸಲಾಗುತ್ತದೆ. ಮೊಬೈಲ್ ಇಲ್ಲದೆಯೂ ಸಂತೋಷದಿಂದ ಇರಲು ಸಾಧ್ಯವಿದೆ ಎಂಬ ವಾಸ್ತವವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವುದು ಈ ಶಿಬಿರದ ಮೂಲ ಉದ್ದೇಶವಾಗಿದೆ ಎಂದರು.ಶಿಬಿರದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಮಕ್ಕಳ ಪೋಷಕರು ಮೇ 10ರ ಒಳಗಾಗಿ ತಮ್ಮ ಅರ್ಜಿಯನ್ನು ಉಡುಪಿಯ ಗೀತಾಮಂದಿರದ ಕಾರ್ಯಾಲಯದಲ್ಲಿ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಲು ಗೀತಾಮಂದಿರದಲ್ಲಿ ಉಮಾಪ್ರಸಾದ್ ಅಥವಾ ರಮಣ್ ಅವರನ್ನು ನೇಮಕ ಮಾಡಲಾಗಿದೆ. ಮೇ 14ರಂದು ಬೆಳಿಗ್ಗೆ 10 ಗಂಟೆಗೆ ಶಿಬಿರದ ಉದ್ಘಾಟನೆ ನಡೆಯಲಿದ್ದು, ಪೋಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಶ್ರೀಗಳು ಕರೆ ನೀಡಿದ್ದಾರೆ.