ಕೃಷ್ಣ ಮಠದಲ್ಲಿ ಇಂದಿನಿಂದ ವಿಶ್ವ ಗೀತಾ ಪರ್ಯಾಯ

| Published : Jan 18 2024, 02:04 AM IST

ಕೃಷ್ಣ ಮಠದಲ್ಲಿ ಇಂದಿನಿಂದ ವಿಶ್ವ ಗೀತಾ ಪರ್ಯಾಯ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತಿಗೆ ಮಠದ 29ನೇ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಗುರುವಾರ ಮುಂಜಾನೆ 5.55ರ ಸೂರ್ಯೋದಯದ ಗಳಿಗೆಯಲ್ಲಿ ಸರ್ವಜ್ಞ ಪೀಠಾವನ್ನೇರಿ, ಎರಡು ವರ್ಷಗಳ ಕಾಲ ಕೃಷ್ಣ ಪೂಜೆಯ ಅಧಿಕಾರ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಕೃಷ್ಣಮಠದಲ್ಲಿ ಇಂದಿನಿಂದ 252ನೇ ಪರ್ಯಾಯ ಆರಂಭವಾಗಲಿದೆ. ಮುಂದಿನೆರಡು ವರ್ಷಗಳ ಕಾಲ ವಿಶ್ವದಾದ್ಯಂತ ಕೋಟ್ಯಾಂತರ ಮಂದಿ ಭಕ್ತರು ಗೀತೆಯನ್ನು ನಿತ್ಯ ಬರೆಯುವ ಸಂಕಲ್ಪ ಈಡೇರಿಸುವ ವಿಶ್ವ ಗೀತಾ ಪರ್ಯಾಯ ಕೃಷ್ಣಮಠದ ಇತಿಹಾಸದಲ್ಲೊಂದು ಸುವರ್ಣಾಕ್ಷರದ ಪುಟವಾಗಲಿದೆ.

ಶ್ರೀಮದುಪೇಂದ್ರ ಮಹಾಸಂಸ್ಥಾನ ಪುತ್ತಿಗೆ ಮಠದ 29ನೇ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಗುರುವಾರ ಮುಂಜಾನೆ 5.55ರ ಸೂರ್ಯೋದಯದ ಗಳಿಗೆಯಲ್ಲಿ ಸರ್ವಜ್ಞ ಪೀಠಾವನ್ನೇರಿ, ಎರಡು ವರ್ಷಗಳ ಕಾಲ ಕೃಷ್ಣ ಪೂಜೆಯ ಅಧಿಕಾರ ಸ್ವೀಕರಿಸಿದರು.

ಇದಕ್ಕೆ ಮೊದಲು ಬುಧವಾರ ತಡರಾತ್ರಿ ಸಂಪ್ರದಾಯದಂತೆ ಶ್ರೀಗಳು ದಂಡತೀರ್ಥ ಎಂಬಲ್ಲಿಂದ ಪವಿತ್ರಸ್ನಾನ ಮಾಡಿ, ನಗರದ ಹೊರಭಾಗದ ಜೋಡುಕಟ್ಟೆಗೆ ಆಗಮಿಸಿ, ಅಲ್ಲಿಂದ ಲಕ್ಷಾಂತರ ಮಂದಿ ಭಕ್ತರು, ಗಣ್ಯರು ಸೇರಿದ್ದ ಭವ್ಯ ಮೆರವಣಿಗೆಯಲ್ಲಿ ಕೃಷ್ಣಮಠಕ್ಕೆ ಕರೆ ತರಲಾಯಿತು. ಅದಕ್ಕಾಗಿ ಇಡೀ ನಗರವನ್ನು ದೀಪಗಳಿಂದ ಅಲಂಕರಿಸಲಾಗಿದೆ.

ಆಚಾರ್ಯ ಮಧ್ವರು ನೀಡಿದ, ಪುತ್ತಿಗೆ ಮಠದ ಮೂಲ ಆರಾಧ್ಯಮೂರ್ತಿ ಪಾಂಡುರಂಗ ವಿಠಲನನ್ನು ಚಿನ್ನದ ಪಲ್ಲಕ್ಕಿಯಲ್ಲಿ ಮುಂದಿರಿಸಿಕೊಂಡು, ಪಟ್ಟ ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ಜೊತೆ ದಂಡಿಗೆಯಲ್ಲಿ ಜೋಡುಕಟ್ಟೆಯಿಂದ ಕೋರ್ಟ್ ರಸ್ತೆ, ಕಲ್ಪನಾ ವೃತ್ತದ ಮೂಲಕ ರಥಬೀದಿಗೆ ಕರೆತರಲಾಯಿತು.

ಶ್ರೀಪಾದರಿಬ್ಬರು ಮೆರವಣಿಗೆಯಲ್ಲಿ ಬರುವಾಗ ದಾರಿ ಮಧ್ಯೆ ಮನೆಯವರು ಶ್ರೀಗಳಿಗೆ ಆರತಿ ಎತ್ತಿ ಮಾಲಾರ್ಪಣೆ ಮಾಡಿ ಗೌರವಿಸುತ್ತಿದ್ದರು.

ಮಧ್ಯರಾತ್ರಿ 1 ಗಂಟೆಗೆ ಸುಮಾರು ಒಂದೂವರೆ ಕಿ.ಮೀ. ದೂರವಿರುವ ಜೋಡುಕಟ್ಟೆಯಿಂದ ಮೆರವಣಿಗೆ ರಥಬೀದಿಗೆ ಬರುವುದಕ್ಕೆ ಎರಡು ಗಂಟೆಗೆ ಅಧಿಕ ಸಮಯ ತೆಗೆದುಕೊಳ್ಳುತ್ತದೆ ಎಂದರೆ ಮೆರವಣಿಗೆಯ ಉದ್ದ, ಭಕ್ತರ ಸಂಖ್ಯೆ, ವೈವಿಧ್ಯಮಯ ಟ್ಯಾಬ್ಲೋ, ವೇಷಧಾರಿಗಳು, ವಾದ್ಯಘೋಷಗಳ ವೈಭವವನ್ನು ಊಹಿಸಬಹುದು.

ಇಂದಿನಿಂದ ಪುತ್ತಿಗೆ ಪರ್ವ:

ಮೆರವಣಿಗೆಯಲ್ಲಿ ಬಂದ ಶ್ರೀಪಾದರು ಕನಕ ನವದ್ವಾರ ಕಿಂಡಿಯಲ್ಲಿ ಕೃಷ್ಣನ ದರ್ಶನ, ಅನಂತೇಶ್ವರ, ಚಂದ್ರಮೌಳಿಶ್ವರ ದೇವರ ದರ್ಶನ ಮಾಡಿ, ಕೃಷ್ಣಮಠವನ್ನು ಪ್ರವೇಶಿಸುವರು. ನಂತರ ಆಚಾರ್ಯ ಮಧ್ವರು ಕುಳಿತುಕೊಳ್ಳುತ್ತಿದ್ದ ಸರ್ವಜ್ಞಪೀಠವನ್ನು ಅಲಂಕರಿಸಿ ಕೃಷ್ಣನ ಪೂಜೆಗೆ ದೀಕ್ಷಾಬದ್ಧರಾಗುತ್ತಾರೆ.

ಇಲ್ಲಿ ಪೂಜಾಧಿಕಾರ ಹಸ್ತಾಂತರ ಎಂದರೆ ಕೇವಲ ಒಂದು ಕೀಲಿಕೈ ಹಸ್ತಾಂತರವಲ್ಲ, ಅದು ಕೃಷ್ಣನಿಗೆ ಮುಂಜಾನೆಯಿಂದ ರಾತ್ರಿವರೆಗೆ ನಿತ್ಯ 14 ಪೂಜೆಗಳನ್ನು ಮಾಡುವ ಪರಮ ಕರ್ತವ್ಯದ, ಕೃಷ್ಣ ಮಠದ ಆಡಳಿತದ, ನಿತ್ಯವೂ ಹತ್ತಾರು ಸಾವಿರ ಭಕ್ತರಿಗೆ ಅನ್ನಪ್ರಸಾದದ, ರಥಬೀದಿಯಲ್ಲಿ ನಿತ್ಯವೂ ನಡೆಯುವ ಉತ್ಸವ- ರಾಜಾಂಗಣದಲ್ಲಿ ನಡೆಯುವ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಮುನ್ನಡೆಸುವ ಮಹತ್ತರ ಹೊಣೆಯ ಹಸ್ತಾಂತರವೂ, ನಿತ್ಯವೂ ಲೋಕಕಲ್ಯಾಣಾರ್ಥ ಪ್ರಾರ್ಥನೆ ಮಾಡುವ ಕರ್ತವ್ಯದ ಹಸ್ತಾಂತರವೂ ಆಗಿರುತ್ತದೆ.

ಸರ್ವಜ್ಞ ಪೀಠಾರೋಹಣ ಮಠದೊಳಗೆ ಕೆಲವೇ ಮಂದಿಯ ಉಪಸ್ಥಿತಿಯಲ್ಲಿ ನಡೆಯುವ ಪ್ರಕ್ರಿಯೆ ಆಗಿದ್ದು, ನಂತರ ರಾಜಾಂಗಣದ ಭವ್ಯ ಅಲಂಕೃತ ವೇದಿಕೆಯಲ್ಲಿ ಲಕ್ಷಾಂತರ ಭಕ್ತ ಸಮ್ಮುಖದಲ್ಲಿ ಶ್ರೀಪಾದರು ಸಾಂಪ್ರದಾಯಿಕ ದರ್ಬಾರ್ ನಡೆಸಲಿದ್ದಾರೆ.

ಇದರಲ್ಲಿ ರಾಜ್ಯದ ಮಂತ್ರಿಗಳು, ದೇಶವಿದೇಶಿ ಗಣ್ಯರು, ವಿವಿಧ ಮಠಾಧಿಪತಿಗಳು ಭಾಗವಹಿಸಲಿದ್ದಾರೆ. ಇಲ್ಲಿ ಸಾಧಕರಿಗೆ ಸನ್ಮಾನ, ಮಠದ ಅಧಿಕಾರಿಗಳ ನೇಮಕ, ಮುಂದಿನೆರಡು ವರ್ಷಗಳ ಯೋಜನೆಗಳ ಘೋಷಣೆಗಳು ನಡೆಯುತ್ತವೆ.

ನಂತರ ಶ್ರೀಪಾದರು ಕೃಷ್ಣಮಠಕ್ಕೆ ತೆರಳಿ ಕೃಷ್ಣನ ಪ್ರಥಮ ಪೂಜೆಯನ್ನು ನೆರವೇರಿಸಿ ತಮ್ಮ ಪರ್ಯಾಯವನ್ನು ವಿಧ್ಯುಕ್ತವಾಗಿ ಆರಂಭಿಸುತ್ತಾರೆ.ಉಡುಪಿಯಲ್ಲಿ ರಾತ್ರಿ ಹಗಲಾಗಿತ್ತು...ಬುಧವಾರ ರಾತ್ರಿಯಿಡೀ ಉಡುಪಿನಗರದಲ್ಲಿ ಕತ್ತಲೆಯೇ ಆಗರಲಿಲ್ಲ. ನಗರದಾದ್ಯಂತ ಎಲ್ಲಿ ನೋಡಿದರೂ ಜನರೇ ಜನರು, ಎಲ್ಲಾ ರಸ್ತೆಗಳು ದೀಪಾಲಂಕಾರದಿಂದ ಝಗಮಗಿಸುತ್ತಿದ್ದವು. ಮೆರವಣಿಗೆ ಸಾಗುವ ರಸ್ತೆಯುದ್ದಕ್ಕೂ ಪ್ರತಿ ಮನೆಯನ್ನು ತೋರಣಗಳಿಂದ ಸಿಂಗರಿಸಲಾಗಿತ್ತು. ನಗರದ 10ಕ್ಕೂ ಹೆಚ್ಚು ಕಡೆಗಳಲ್ಲಿ ಹಾಕಲಾದ ಭವ್ಯ ವೇದಿಕೆಗಳಲ್ಲಿ ಭಕ್ತಿಗೀತೆ, ಸಿನಿಮಾ ಹಾಡು, ನೃತ್ಯ, ಯಕ್ಷಗಾನ ಇತ್ಯಾದಿಗಳು ಆಯಾ ಆಸಕ್ತರಿಗೆ ಮನರಂಜನೆ ನೀಡುತ್ತಿದ್ದವು.