ಪುತ್ತೂರು ದೇವಳ ಜಾತ್ರೋತ್ಸವ: ಚಂದ್ರಮಡಲ ರಥೋತ್ಸವ

| Published : Apr 16 2024, 01:04 AM IST

ಸಾರಾಂಶ

ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ದೇವರ ಬಂಡಿ(ಚಂದ್ರಮಂಡಲ) ಉತ್ಸವ ನಡೆಯಿತು. ಬಳಿಕ ಕೊಂಬೆಟ್ಟು, ಬೊಳುವಾರು, ಹಾರಾಡಿ, ತಾಳಿಪ್ಪಾಡಿ, ದ್ರಾವಿಡ ಬ್ರಾಹ್ಮಣ ಹಾಸ್ಟೆಲ್, ಸಕ್ಕರೆ ಕಟ್ಟೆಯಲ್ಲಿ ದೇವರ ಪೇಟೆ ಸವಾರಿ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಸೌರಯುಗಾದಿ ವಿಷುವಿನ ಅಂಗವಾಗಿ ಹೊರಾಂಗಣದಲ್ಲಿ ದೇವರ ಬಲಿ ಉತ್ಸವ ನಡೆದ ಬಳಿಕ ಪೂರ್ವಶಿಷ್ಟ ಸಂಪ್ರದಾಯದಂತೆ ದೇವರ ಬಂಡಿ(ಚಂದ್ರಮಂಡಲ) ಉತ್ಸವ ನಡೆಯಿತು. ಬಳಿಕ ಕೊಂಬೆಟ್ಟು, ಬೊಳುವಾರು, ಹಾರಾಡಿ, ತಾಳಿಪ್ಪಾಡಿ, ದ್ರಾವಿಡ ಬ್ರಾಹ್ಮಣ ಹಾಸ್ಟೆಲ್, ಸಕ್ಕರೆ ಕಟ್ಟೆಯಲ್ಲಿ ದೇವರ ಪೇಟೆ ಸವಾರಿ ನಡೆಯಿತು.* ಇಂದು ಭಂಡಾರ ಆಗಮನಏ.೧೬ ರಂದು ಸಂಜೆ ದೇವಾಲಯದ ಒಳಾಂಗಣದಲ್ಲಿ ದೇವರ ದೀಪ ಬಲಿ ಉತ್ಸವ, ರಾತ್ರಿ ಉತ್ಸವ ಬಲಿ, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರ ಶ್ರೀ ದೇವಳಕ್ಕೆ ಆಗಮಿಸಲಿದೆ. ಬಳಿಕ ಪಲ್ಲಕ್ಕಿ ಉತ್ಸವ, ಸಣ್ಣ ರಥೋತ್ಸವ ಮತ್ತು ಕೆರೆ ಉತ್ಸವ, ತೆಪ್ಪೋತ್ಸವ ನಡೆಯಲಿದೆ.

* ಮಲ್ಲಿಗೆ ಹೂವು ಸಮರ್ಪಣೆಶ್ರೀ ಮಹಾಲಿಂಗೇಶ್ವರ ದೇವಾಲಯದ ಸಣ್ಣ ರಥೋತ್ಸವದ ದಿನವಾದ ಏ.೧೬ರಂದು ದೇವಾಲಯಕ್ಕೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರ ವಿವಿಧ ಬಿರುದಾವಳಿಗಳಿಂದ ಆಗಮಿಸುವ ಹಿನ್ನೆಲೆಯಲ್ಲಿ ಸೀಮೆಯ ಭಕ್ತರು ಮಲ್ಲಿಗೆ ಹೂವು ಸಮರ್ಪಣೆ ಸೇವೆ ಮಾಡುತ್ತಾರೆ. ಮಲ್ಲಿಗೆ ಚೆಂಡುಗಳನ್ನು ದೈವಗಳಿಗೆ ಬಲ್ನಾಡಿನಲ್ಲಿ, ಪುತ್ತೂರು ದೇವಾಲಯದಲ್ಲಿ ಮತ್ತು ಪುತ್ತೂರು ಹಳೆ ಪೊಲೀಸ್ ಠಾಣೆಯ ಬಳಿ ಇರುವ ಅಂಕದ ಕಟ್ಟೆಯ ಬಳಿ ಸಮರ್ಪಿಸುತ್ತಾರೆ.

ಸೀಮೆಯ ಶ್ರೀ ಮಹಾಲಿಂಗೇಶ್ವರ ದೇವರಿಗೂ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನಕ್ಕೂ ನೇರ ಧಾರ್ಮಿಕ ಸಂಬಂಧವಿದೆ. ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಿಂದ ಶ್ರೀ ದೈವಗಳ ಭಂಡಾರ ದೇವಳಕ್ಕೆ ಆಗಮಿಸುತ್ತದೆ. ದೇವಳದ ಹೊರಾಂಗಣದಲ್ಲಿ ದೇವ - ದೈವ ಭೇಟಿ ನಡೆದು ಸಾಂಪ್ರದಾಯಿಕ ನುಡಿಕಟ್ಟು ನಡೆದ ಬಳಿಕ ದೈವಗಳ ಭಂಡಾರದ ಜತೆಗೆ ಶ್ರೀ ದೇವರ ಉತ್ಸವ ನಡೆಯುತ್ತದೆ. ಏ.೧೭ರಂದು ಬ್ರಹ್ಮರಥೋತ್ಸವ ಮುಗಿದ ಬಳಿಕ ಶ್ರೀ ದೈವಗಳ ಭಂಡಾರವನ್ನು ಬಂಗಾರ ಕಾಯರ್‌ಕಟ್ಟೆಯ ಬಳಿ ದೇವರ ಪೇಟೆ ಸವಾರಿಯೊಂದಿಗೆ ಬೀಳ್ಕೊಡಲಾಗುತ್ತದೆ. ಈ ಶಿಷ್ಟ ಸಂಪ್ರದಾಯವನ್ನು ಜಾತ್ರೆಯ ಸಂದರ್ಭದಲ್ಲಿ ಅನೂಚಾನವಾಗಿ ಪಾಲಿಸಲಾಗುತ್ತದೆ.