ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರುರಾಜ್ಯದಲ್ಲಿ ಕೆಎಸ್ಸಾರ್ಟಿಸಿ ವತಿಯಿಂದ ಮಹಿಳೆಯರಿಗೆ ಹಾಗೂ ಇತರ ಫಲಾನುಭವಿಗಳಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿರುವುದರಿಂದ ನಿಗಮಕ್ಕೆ ಯಾವುದೇ ಲಾಸ್ ಆಗಿಲ್ಲ. ಉಚಿತ ಕೊಟ್ಟು ಬಸ್ ಇಲ್ಲ ಎನ್ನುವ ಆರೋಪ ಮಾಡುತ್ತಿರುವ ಬಿಜೆಪಿಯವರಿಗೆ ಮಾತ್ರ ಲಾಸ್ ಆಗಿದೆ. ಬಿಜೆಪಿ ಸರ್ಕಾರ ಕಳೆದ ಐದು ವರ್ಷದಲ್ಲಿ ಕೆಎಸ್ಸಾರ್ಟಿಸಿಗೆ ಅಗತ್ಯವಿರುವ ಸಿಬಂದಿ ನೇಮಕ ಮಾಡದೆ ನಷ್ಟವಾಗುವಂತೆ ಮಾಡಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಪುತ್ತೂರು ಕೆಎಸ್ಸಾರ್ಟಿಸಿ ವತಿಯಿಂದ ನಗರದಿಂದ ಗ್ರಾಮೀಣ ಪ್ರದೇಶಗಳಿಗೆ ಆರಂಭಿಸಲಾದ ಹೊಸ ರೂಟ್ ಬಸ್‌ಗಳ ಕಾರ್ಯಾರಂಭಕ್ಕೆ ಭಾನುವಾರ ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಮಾತನಾಡಿದರು.ಪುತ್ತೂರು ನಗರದಿಂದ ೨೪ ಹೊಸ ರೂಟ್‌ಗಳನ್ನು ಕವರ್ ಮಾಡುವ ಕೆಲಸ ಮುಂದಿನ ದಿನಗಳಲ್ಲಿ ಆಗಲಿದೆ. ಅಲ್ಲದೆ ಬಸ್‌ಗೆ ಸಂಬಂಧಿಸಿದ ಇನ್ನಷ್ಟು ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಹೇಳಿದರು.ಪುತ್ತೂರು-ಉಪ್ಪಿನಂಗಡಿ, ಪುತ್ತೂರು -ಪೆರ್ಲಂಪಾಡಿ-ಕೊಳ್ತಿಗೆ-ಬೆಳ್ಳಾರೆ-ಕಲ್ಪಣೆ, ಪುತ್ತೂರು -ಅನಂತಾಡಿ, ಪುತ್ತೂರು-ಸೂರ್ಯ, ಪುತ್ತೂರು-ವಿಟ್ಲ-ಕಾಟುಕುಕ್ಕೆ-ಪುತ್ತೂರು, ಪುತ್ತೂರು-ಉಪ್ಪಿನಂಗಡಿ-ಕಡಬ-ಸುಳ್ಯ, ಸುಳ್ಯ-ಕಡಬ-ಉಪ್ಪಿನಂಗಡಿ, ಉಪ್ಪಿನಂಗಡಿ-ಪುತ್ತೂರು ಮಾರ್ಗಗಳಲ್ಲಿ ಹೊಸ ಬಸ್ ಗಳು ಓಡಾಟ ನಡೆಸಲಿವೆ ಎಂದರು.
ದ.ಕ., ಉಡುಪಿಯಲ್ಲಿ ಬಸ್‌ಗಳ ಕೊರತೆ ಒಂದು ವರ್ಷದಿಂದ ಇತ್ತು. ಕಂಡಕ್ಟರ್ ಕೊರತೆ ರಾಜ್ಯದಲ್ಲೇ ಇತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣವೇ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ೨,೯೦೦ ಸಿಬ್ಬಂದಿಯನ್ನು ನೇಮಕಗೊಳಿಸಿದೆ. ಡ್ರೈವರ್ ಕಂ ಕಂಡಕ್ಟರ್ ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲು ಆಗುವುದಿಲ್ಲ. ಪುತ್ತೂರು ಡಿವಿಜನ್ ೩೨೬ ಸಿಬ್ಬಂದಿ ನೇಮಕಾತಿ ನಡೆದಿದೆ. ನೇಮಕಗೊಂಡವರು ತರಬೇತಿ ಮುಗಿಸಿ ಕರ್ತವ್ಯಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಡೆಯಲು ಈಗಾಗಲೇ ೨-೩ ರೂಟ್‌ಗಳಿಗೆ ಚಾಲನೆ ನೀಡಲಾಗಿದೆ ಎಂದರು.ಪುತ್ತೂರಿನಿಂದ ಮಂಗಳೂರಿಗೆ ಎಕ್ಸ್‌ಪ್ರೆಸ್ ಅತಿ ಶೀಘ್ರದಲ್ಲಿ ಆರಂಭಿಸಲಾಗುವುದು. ಈ ಯೋಜನೆಗೆ ‘ಪುತ್ತೂರು ಎಕ್ಸ್‌ಪ್ರೆಸ್’ ಎನ್ನುವ ಹೆಸರು ಇಡಲಾಗುವುದು. ಪುತ್ತೂರು ನಗರದಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಸಿಟಿ ಬಸ್‌ಗಳ ಓಡಾಟ ನಡೆಸುವ ಆಲೋಚನೆ ಇದೆ. ಸಾಧಕ-ಬಾಧಕಗಳನ್ನು ನೋಡಿಕೊಂಡು ಈ ವ್ಯವಸ್ಥೆ ಮಾಡಲಾಗುವುದು. ಕೆಎಸ್‌ಆರ್‌ಟಿಸಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗುವುದು ಎಂದು ತಿಳಿಸಿದರು.ಕೆಎಸ್‌ಆರ್‌ಟಿಸಿ ತಾಂತ್ರಿಕ ವಿಭಾಗದ ಮುಖ್ಯಸ್ಥ ದೇವರಾಜ ಶೆಟ್ಟಿ, ಡಿಪ್ಪೋ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಕಾಶ್, ವಿಭಾಗೀಯ ಕಾರ್ಯದರ್ಶಿ ಲೋಕೇಶ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಮಳ ರಾಮಚಂದ್ರ, ಕೆಪಿಸಿಸಿ ಸಂಯೋಜಕ ಪ್ರದೀಪ್ ಕುಮಾರ್ ರೈ ಪಾಂಬಾರು, ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಮುರಳೀಧರ ರೈ ಮಠಂತಬೆಟ್ಟು, ಮಹಮ್ಮದ್ ಬಡಗನ್ನೂರು, ಕೊಳ್ತಿಗೆ ಗ್ರಾಪಂ ಸದಸ್ಯರಾದ ಶ್ಯಾಮ್‌ಸುಂದರ್ ರೈ, ಪವನ್ ಕೊಳ್ತಿಗೆ, ಮತ್ತಿತರರು ಉಪಸ್ಥಿತರಿದ್ದರು.