ಪುತ್ತೂರು: ರೈತರಿಗೆ ಪಂಚಾಯತ್ ರಾಜ್ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ

| Published : Aug 02 2025, 12:15 AM IST

ಪುತ್ತೂರು: ರೈತರಿಗೆ ಪಂಚಾಯತ್ ರಾಜ್ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ರೈತ ಸಂಘ ಹಸಿರು ಸೇನೆ ದ.ಕ.ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿರುವ ಜಿಲ್ಲಾ ಸಮಿತಿಯ ಪ್ರಧಾನ ಕಚೇರಿಯಲ್ಲಿ ‘ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ರೈತರಿಗೆ ಸಿಗುವ ಸವಲತ್ತು’ ಕುರಿತ ಮಾಹಿತಿ ಕಾರ್ಯಾಗಾರ ನೆರವೇರಿತು.

ಪುತ್ತೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಹೆಚ್ಚುಗೊಳಿಸಲು ಹಲವಾರು ಬಗೆಯ ಸೌಲಭ್ಯಗಳಿದ್ದು, ರೈತರು ಅದನ್ನು ಪಡೆದುಕೊಳ್ಳಬೇಕು ಎಂದು ಪುತ್ತೂರು ಆರ್ಯಾಪು ಗ್ರಾ.ಪಂ. ಪಿಡಿಒ ಹಾಗೂ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ನಾಗೇಶ ಎಂ. ತಿಳಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ದ.ಕ.ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿರುವ ಜಿಲ್ಲಾ ಸಮಿತಿಯ ಪ್ರಧಾನ ಕಚೇರಿಯಲ್ಲಿ ನಡೆದ ‘ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ರೈತರಿಗೆ ಸಿಗುವ ಸವಲತ್ತು’ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ರೈತರೊಂದಿಗೆ ಸಂವಾದ ನಡೆಸಿದರು. ಪಂಚಾಯತ್‌ನಲ್ಲಿ ರೈತರಿಗೆ ದೊರಕು ಸವಲತ್ತುಗಳ ಬಗ್ಗೆ ರೈತರ ಪ್ರಶ್ನೆಗೆ ಉತ್ತರಿಸಿದ ನಾಗೇಶ್ ಅವರು, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೋಂದಾಯಿಸಿಕೊಂಡು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿವೆ. ೫ ಎಕ್ರೆ ಮೇಲ್ಪಟ್ಟ ಜಮೀನು ಹೊಂದಿರುವ ರೈತರು ದೊಡ್ಡ ರೈತರ ವರ್ಗಕ್ಕೆ ಸೇರುವುದರಿಂದ ಅವರಿಗೆ ಉದ್ಯೋಗ ಖಾತ್ರಿಯಲ್ಲಿ ಕೆಲಸಕ್ಕೆ ಅವಕಾಶ ಸಿಗುವುದಿಲ್ಲ. ಉದ್ಯೋಗ ಖಾತ್ರಿಯಲ್ಲಿ ತೊಡಗಿಸಿಕೊಳ್ಳುವ ರೈತರು ಏಕ ಬೆಳೆಯ ಬದಲು ಬಹುಬೆಳೆಯನ್ನು ಬೆಳೆಸುವ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ಅಡಿಕೆ ಗುಂಡಿ ನಿರ್ಮಿಸಲು ಯೋಜನೆಯಡಿ ಅವಕಾಶಗಳಿವೆ ಎಂದು ಮಾಹಿತಿ ನೀಡಿದರು. ಪಂಚಾಯಿತಿ ಅನುದಾನದಲ್ಲಿ ನಿರ್ಮಿಸಲಾಗಿರುವ ರಸ್ತೆಗಳನ್ನು ಬಳಿಕ ಮುಚ್ಚಲು ಯಾರಿಗೂ ಅವಕಾಶವಿಲ್ಲ. ರಸ್ತೆಗೆ ಸರ್ಕಾರಿ ಅನುದಾನ ಬಳಕೆಯ ಸಂದರ್ಭ ಜಾಗದ ಮಾಲೀಕರಿಗೆ ಅಕ್ಷೇಪ ಸಲ್ಲಿಸಲು ಅವಕಾಶಗಳಿವೆ. ಅನುದಾನ ಬಳಸಿದ ಬಳಿಕ ಅದು ಸಾರ್ವಜನಿಕ ಸೊತ್ತಾಗಿದ್ದು, ಮುಚ್ಚುವುದಕ್ಕೆ ಅವಕಾಶವಿಲ್ಲ ಕರಾವಳಿಯಲ್ಲಿ ಕೃಷಿ ಜಮೀನಿನಲ್ಲೇ ಮನೆ ಇದ್ದು, ಭೂ ಪರಿವರ್ತನೆ ಇಲ್ಲದೆ ಜೂ.೨ರವರೆಗೆ ೧೧ಬಿ ಮೂಲಕ ಮನೆ ನಂಬ್ರ ಪಡೆಯಲು ಅವಕಾಶವಿತ್ತು. ಆದರೆ ಇದೀಗ ಭೂ ಪರಿವರ್ತನೆ ಮಾಡದೆ ಮನೆ ನಂಬ್ರ ನೀಡಲು ಅವಕಾಶಗಳಿಲ್ಲ. ಭೂ ಪರಿವರ್ತನೆ ಮಾಡಿಸಿಕೊಳ್ಳದೆ ಮನೆ ನಿರ್ಮಿಸಿದವರಿಗೆ ೯೪ಸಿ ಮೂಲಕ ಅರ್ಜಿ ಸಲ್ಲಿಸಿ ಖಾತೆ ಪಡೆದುಕೊಂಡು ಪರಿವರ್ತನೆ ಮಾಡಲು ಅವಕಾಶಗಳಿವೆ ಎಂದು ತಿಳಿಸಿದರು. ಕೃಷಿ ಜಮೀನಿನಲ್ಲಿ ಕೋಳಿ ಸಾಕಣೆ ಕಟ್ಟಡ ಮಾಡುವುದಕ್ಕೆ ಪಂಚಾಯಿತಿ ಪರವಾನಗಿಯಿಂದ ವಿನಾಯಿತಿ ನೀಡಲಾಗಿದೆ. ಆದರೆ ಕೋಳಿ ಸಾಕಾಣಿಕೆ ಉದ್ಯಮ ಮಾಡುವವರು ವಾಸದ ಮನೆಯಿಂದ ೨೦೦ಮೀ. ದೂರದಲ್ಲಿ ನಿರ್ಮಾಣ ಮಾಡಬೇಕೆಂಬ ಷರತ್ತು ಹಾಕಲಾಗುತ್ತದೆ. ಸಾರ್ವಜನಿಕರಿಗೆ ಸರ್ಕಾರಿ ದಾಖಲೆಗಳನ್ನು ಪಡೆಯಲು ಸಾಕಷ್ಟು ಅವಕಾಶಗಳಿದ್ದು, ಗ್ರಾಮ ಸಭೆಯ ತನಕ ಕಾಯಬೇಕಿಲ್ಲ ಎಂದು ತಿಳಿಸಿದರು.ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು, ಜಿಲ್ಲಾ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಯುಕೆಟಿಸಿಎಲ್ ವಿರೋಧಿ ಯೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಕಾರ್ಯದರ್ಶಿ ಈಶ್ವರ ಭಟ್, ರೈತ ಸಂಘದ ಕುಂಬ್ರ ವಲಯ ಅಧ್ಯಕ್ಷ ಕೆ. ಶೇಖರ ರೈ ಮತ್ತಿತರರು ಉಪಸ್ಥಿತರಿದ್ದರು.