ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಗಣೇಶೋತ್ಸವ ಶೋಭಾಯಾತ್ರೆ

| Published : Sep 12 2024, 02:04 AM IST

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಗಣೇಶೋತ್ಸವ ಶೋಭಾಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಗುರುತಂತ್ರಿಯವರು ಗಣೇಶನ ವಿಗ್ರಹಕ್ಕೆ ಮಂಗಳಾರತಿ ಬೆಳಗಿ ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರ ಪುತ್ತೂರು ಇದರ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ನಡೆದ ೫೮ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಗಣೇಶ ವಿಗ್ರಹದ ಶೋಭಾಯಾತ್ರೆಯು ಹಲವು ಆಕರ್ಷಕ ಸ್ತಬ್ದ ಚಿತ್ರಗಳು, ಕುಣಿತ ಭಜನೆ, ಗೊಂಬೆ ಕುಣಿತಗಳೊಂದಿಗೆ ಮಂಗಳವಾರ ರಾತ್ರಿ ನಡೆಯಿತು.

ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಿಂದ ಶೋಭಾಯಾತ್ರೆಯು ಹೊರಡುವ ಮೊದಲು ಸಮಿತಿಯ ಪ್ರಮುಖರು ದೇವಾಲಯದ ಗಣಪತಿ ಗುಡಿಯಲ್ಲಿ ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಗುರುತಂತ್ರಿಯವರು ಗಣೇಶನ ವಿಗ್ರಹಕ್ಕೆ ಮಂಗಳಾರತಿ ಬೆಳಗಿ ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಶೋಭಾಯಾತ್ರೆಯಲ್ಲಿ ೧೦ಕ್ಕೂ ಮಿಕ್ಕಿ ವೈವಿಧ್ಯಮಯ ಸ್ತಬ್ಧ ಚಿತ್ರಗಳು, ರಾಜ್ಯಪ್ರಶಸ್ತಿ ವಿಜೇತ ಪಿ.ಕೆ. ಗಣೇಶ್ ಅವರ ನೇತೃತ್ವದಲ್ಲಿ ಸ್ಯಾಕ್ರೋಫೋನ್ ವಾದನ ತಂಡ, ಚೆಂಡೆ ನೃತ್ಯದ ಜೊತೆ ಲೈವ್ ಆಗಿ ವಯೋಲಿನ್ ಸಂಗೀತ ನೃತ್ಯ, ನೃತ್ಯ ಭಜನೆ, ಯುವಕರ ನೃತ್ಯ, ವಿವಿಧ ಧಾರ್ಮಿಕ -ಪೌರಾಣಿಕ ಹಿನ್ನೆಲೆಯ ಕಥೆಯನ್ನು ಸಾರುವ ಸ್ತಬ್ದ ಚಿತ್ರಗಳು ಸಾಗಿದವು. ಶ್ರೀ ಗಣೇಶನ ವಿಗ್ರಹವನ್ನು ಹೊತ್ತ ಮೂಷಿಕ ರಥವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಿಂದ ಹೊರಟು, ರೈಲ್ವೇ ನಿಲ್ದಾಣ ರಸ್ತೆಯಾಗಿ ಹಾರಾಡಿಯಿಂದ ಬೊಳುವಾರಿಗೆ ತೆರಳಿ ಅಲ್ಲಿಂದ ವೈವಿಧ್ಯಮಯ ಸ್ತಬ್ದಚಿತ್ರಗಳೊಂದಿಗೆ ಅದ್ಧೂರಿಯ ಶೋಭಾಯಾತ್ರೆ ಪ್ರಾರಂಭಗೊಂಡು ಮುಖ್ಯರಸ್ತೆಯಾಗಿ ದರ್ಬೆಗೆ ತೆರಳಿ ಅಲ್ಲಿಂದ ಪರ್ಲಡ್ಕ ಎಂ.ಟಿ. ರಸ್ತೆ, ಕೋರ್ಟ್‌ ರಸ್ತೆಯಾಗಿ ಶ್ರೀಧರ್ ಭಟ್ ಅಂಗಡಿಯ ಬಳಿಯಿಂದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಎದುರು ಭಾಗದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿರುವ ಕೆರೆಯಲ್ಲಿಗೆ ತೆರಳಿ ಅಲ್ಲಿ ಗಣೇಶನ ವಿಗ್ರಹ ಜಲಸ್ತಂಭನ ಮಾಡಲಾಯಿತು.ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರಾಮಚಂದ್ರ ಕಾಮತ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ, ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ನುಳಿಯಾಲು, ವಿಶ್ವನಾಥ ಗೌಡ, ಸಹಜ್ ರೈ ಬಳಜ್ಜ, ಸುಧಿರ್ ಶೆಟ್ಟಿ, ಕೋಶಾಧಿಕಾರಿ ಶ್ರೀನಿವಾಸ್ ಮೂಲ್ಯ, ಜೊತೆ ಕಾರ್ಯದರ್ಶಿ ನೀಲಂತ್, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಪುತ್ತೂರು ಪ್ರಖಂಡ ಅಧ್ಯಕ್ಷ ದಾಮೋದರ್ ಪಾಟಾಳಿ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಸಂಘಟನಾ ಕಾರ್ಯದರ್ಶಿ ರಮೇಶ್ ಮುಂಡೂರು, ಗೌರವ ಸಲಹೆಗಾರರಾದ ರಾಜೇಶ್ ಬನ್ನೂರು ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.