ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಏಕೈಕ ಕ್ಷೇತ್ರವೆಂದೇ ಪರಿಗಣಿತವಾಗಿರುವ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸಕ್ಕೆ ಶುಕ್ರವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಚಾಲನೆ ನೀಡಲಾಯಿತು.ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಶುಕ್ರವಾರ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಪಾಕಶಾಲೆ, ಕಾರ್ಯಾಲಯ ಉದ್ಘಾಟನೆ ಹಾಗೂ ಗೊನೆ ಮುಹೂರ್ತ ನೆರವೇರಿತು. ಬೆಳಗ್ಗೆ ಶ್ರೀ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಅರ್ಚಕರಾದ ಶ್ರೀನಿವಾಸ್ ಹೆಬ್ಬಾರ್ ಮತ್ತು ಪ್ರವೀಣ್ ಹೆಬ್ಬಾರ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಬಳಿಕ ಪೆರುವಾಜೆ ಜಲದುರ್ಗಾ ದೇವಿ ದೇವಸ್ಥಾನದ ಅರ್ಚಕ ಶ್ರೀನಿವಾಸ್ ಹೆಬ್ಬಾರ್ ಉಗ್ರಾಣ ಮುಹೂರ್ತದ ದೀಪ ಪ್ರಜ್ವಲನೆ ಮಾಡಿದರು. ಮಾಜಿ ಪಟೇಲರಾದ ಪಾಲ್ತಾಡು ಕುಟುಂಬದ ಹಿರಿಯ ಯಜಮಾನ ನಾರಾಯಣ ರೈ ಉದ್ಘಾಟಿಸಿದರು. ಪಾಕ ಶಾಲೆಯನ್ನು ಸುಬ್ರಹ್ಮಣ್ಯ ಪ್ರಸಾದ್ ಅರ್ನಾಡಿ ಉದ್ಘಾಟಿಸಿದರು. ಕಾರ್ಯಾಲಯವನ್ನು ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ವಿಲಾಸ್ ರೈ ಪಾಲ್ತಾಡು ಉದ್ಘಾಟಿಸಿದರು. ವಿನೋದ್ ರೈ ಪಾಲ್ತಾಡು ದೀಪ ಪ್ರಜ್ವಲನೆ ಮಾಡಿದರು. ಭದ್ರತಾ ಕೋಶವನ್ನು ವೈದಿಕ ಸಮಿತಿ ಸಂಚಾಲಕ ಹರಿಕೃಷ್ಣ ಭಟ್ ಬರೆಮೇಲು ಉದ್ಘಾಟಿಸಿದರು. ಬಳಿಕ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ನಡೆಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ನಳೀಲು, ಪ್ರಧಾನ ಕಾರ್ಯದರ್ಶಿ ಸುರೇಶ್ಚಂದ್ರ ರೈ ಪಾಲ್ತಾಡಿ, ವಿವಿಧ ಸಮಿತಿಗಳ ಪಧಾಧಿಕಾರಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.
ಇಂದು ಹೊರೆ ಕಾಣಿಕೆ ಮೆರವಣಿಗೆ: ಫೆ.೧೭ರಂದು ಬೆಳಗ್ಗೆ ಮಣಿಕ್ಕಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆಯು ನಡೆಯಲಿದೆ. ಗೋಪಾಲಕೃಷ್ಣ ಶ್ಯಾನುಭೋಗ್ ಮಣಿಕ್ಕಾರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಪಾಲ್ತಾಡಿ ಚಾಕೋಟೆತಡಿ ಮಾಡ ಶ್ರೀ ಉಳ್ಳಾಕುಲು ದೈವಸ್ಥಾನದಿಂದ ನಳಿಲು ದೇವಳದ ತನಕ ಮೆರವಣಿಗೆ ವೈಭವದ ನಡೆಯಲಿದೆ. ಚಾಕೋಟೆತಡಿ ಮಾಡ ಶ್ರೀ ಉಳ್ಳಾಕುಲು ದೈವಸ್ಥಾನದ ಆಳಿತ ಮಂಡಳಿ ಅಧ್ಯಕ್ಷ ಸಂಜೀವ ಗೌಡ ಪಾಲ್ತಾಡಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಂಜೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳಿಗೆ ಹಾಗೂ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ, ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.