ಪುತ್ತೂರು: 11ರಂದು ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಷಡಾಧಾರ, ನಿಧಿಕುಂಭ ಪ್ರತಿಷ್ಠೆ

| Published : May 10 2025, 01:00 AM IST

ಪುತ್ತೂರು: 11ರಂದು ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಷಡಾಧಾರ, ನಿಧಿಕುಂಭ ಪ್ರತಿಷ್ಠೆ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಷಡಾಧಾರ ಹಾಗೂ ನಿಧಿಕುಂಭ ಪ್ರತಿಷ್ಠಾ ಕಾರ್ಯಕ್ರಮ ೧೧ರಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವೇದಮೂರ್ತಿ ಬನ್ನಂಜೆ ರಾಮದಾಸ್ ಭಟ್ ಪೌರೋಹಿತ್ಯದಲ್ಲಿ ನಡೆಯಲಿದೆ

ಕನ್ನಡಪ್ರಭ ವಾರ್ತೆ ಪುತ್ತೂರು

ನಗರದ ಕಿಲ್ಲೇ ಮೈದಾನ ರಸ್ತೆಯಲ್ಲಿರುವ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಷಡಾಧಾರ ಹಾಗೂ ನಿಧಿಕುಂಭ ಪ್ರತಿಷ್ಠಾ ಕಾರ್ಯಕ್ರಮ ೧೧ರಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವೇದಮೂರ್ತಿ ಬನ್ನಂಜೆ ರಾಮದಾಸ್ ಭಟ್ ಪೌರೋಹಿತ್ಯದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮುರಳಿಕೃಷ್ಣ ಹಸಂತಡ್ಕ ತಿಳಿಸಿದ್ದಾರೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಗ ಅರಸರ ಕಾಲದ್ದು ಎನ್ನಲಾಗಿರುವ ಸುಮಾರು ೮೦೦ ವರ್ಷಗಳ ಇತಿಹಾಸವಿರುವ ಈ ದೇವಸ್ಥಾನದಲ್ಲಿ ಅರಾಧ್ಯ ದೇವಿಯಾದ ಹತ್ತೂರಿಗೆ ಸಂಬಂಧಪಟ್ಟ ಪದ್ಮಾವತಿ ಎಂಬ ಖ್ಯಾತಿಯ ಪನ್ನಗ ಕನ್ನಿಕಾದೇವಿಯನ್ನು ಪ್ರತಿಷ್ಠಾಪಿಸಿ ಆರಾಧನೆ ಮಾಡಿಕೊಂಡು ಬರಲಾಗಿತ್ತು. ಬಳಿಕ ದಿನಗಳಲ್ಲಿ ದೇವಸ್ಥಾನ ಶಿಥಿಲಾವಸ್ಥೆಗೆ ಜಾರಿತ್ತು. ಆದಾದ ಬಳಿಕ ಸ್ಥಳೀಯ ರಾಧಾಬಾಯಿ ಮತ್ತು ಅವರ ಮಕ್ಕಳು ಕಿರೀಟ ಇಟ್ಟು ಇಲ್ಲಿ ದೇವರನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಇದು ಶ್ರೀ ಮಹಾಕಾಳಿ ದೇವರು ಎಂದು ಕಂಡು ಬಂದಿದ್ದು, ಜೀರ್ಣೋದ್ಧಾರದ ನಿಟ್ಟಿನಲ್ಲಿ ಇದೀಗ ಈ ಸನ್ನಿಧಾನದಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಸಮಸ್ತ ಪ್ರಾಯಶ್ಚಿತಗಳನ್ನು ಮಾಡಿ ಈ ಸ್ಥಳದ ಜೀರ್ಣೋದ್ಧಾರಕ್ಕಾಗಿ ಸಂಕಲ್ಪ ಮಾಡಲಾಗಿದೆ. ಅದರ ಅಂಗವಾಗಿ ಷಡಾಢಾರ ಹಾಗೂ ನಿಧಿಕುಂಭ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಂಗವಾಗಿ ಶನಿವಾರ ಬೆಳಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ನಿಧಿಕುಂಭ ಮೆರವಣಿಗೆ ಆರಂಭಗೊಂಡು ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಎದುರಿನಿಂದ ಸಾಗಿ ಕಿಲ್ಲೇ ಮೈದಾನ ರಸ್ತೆ ಪ್ರವೇಶಿಸಿ ಶ್ರೀ ಮಹಾಕಾಳಿ ದೇವಿಯ ಸಾನಿಧ್ಯವನ್ನು ತಲುಪಲಿದೆ.11ರಂದು ಬೆಳಗ್ಗೆ ಷಡಧಾರ ಮತ್ತು ನಿಧಿಕುಂಭಪ್ರತಿಷ್ಠೆ ನಡೆದು ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು. ಸುದ್ಧಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಕಾಮತ್, ಉಪಾಧ್ಯಕ್ಷರಾದ ನರೇಂದ್ರ ನಾಯಕ್, ಸುದೇಶ್ ಚಿಕ್ಕಪುತ್ತೂರು, ಖಜಾಂಚಿ ನಿತಿನ್ ಮಂಗಳ ಇದ್ದರು.