ಪುತ್ತೂರು ಚೂರಿ ಇರಿತ ಪ್ರಕರಣ: ವಿದ್ಯಾರ್ಥಿನಿ ಹೇಳಿಕೆಯಲ್ಲೇ ಗೊಂದಲ

| Published : Aug 22 2024, 12:57 AM IST

ಪುತ್ತೂರು ಚೂರಿ ಇರಿತ ಪ್ರಕರಣ: ವಿದ್ಯಾರ್ಥಿನಿ ಹೇಳಿಕೆಯಲ್ಲೇ ಗೊಂದಲ
Share this Article
  • FB
  • TW
  • Linkdin
  • Email

ಸಾರಾಂಶ

ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿರುವ ಪೊಲೀಸರಿಗೆ ವಿದ್ಯಾರ್ಥಿನಿಯು ನೀಡಿರುವ ಹೇಳಿಕೆ ಗೊಂದಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಎನ್ನಲಾದ ವಿದ್ಯಾರ್ಥಿಯನ್ನು ಕರೆದಾಗ ಬರುವಂತೆ ಸೂಚನೆ ನೀಡಿ ಮನೆಗೆ ಕಳುಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರುಪುತ್ತೂರಿನ ಕೊಂಬೆಟ್ಟು ಜೂನಿಯರ್‌ ಕಾಲೇಜಿನ ಅಪ್ರಾಪ್ತ ವಿದ್ಯಾರ್ಥಿನಿಗೆ ಅದೇ ಕಾಲೇಜಿನ ವಿದ್ಯಾರ್ಥಿಯು ಬ್ಲೇಡ್ ಮಾದರಿಯ ವಸ್ತುವಿನಿಂದ ಇರಿದು ಗಾಯಗೊಳಿಸಿದ್ದಾನೆಂಬ ಪ್ರಕರಣದಲ್ಲಿ ಗೊಂದಲ ಮೂಡಿದ್ದು, ವಿದ್ಯಾರ್ಥಿನಿಯ ಹೇಳಿಕೆ ದ್ವಂದ್ವದಿಂದ ಕೂಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.ಘಟನೆ ನಡೆದಿತ್ತು ಎನ್ನಲಾದ ಸ್ಥಳದ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿರುವ ಪೊಲೀಸರಿಗೆ ವಿದ್ಯಾರ್ಥಿನಿಯು ನೀಡಿರುವ ಹೇಳಿಕೆ ಗೊಂದಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಎನ್ನಲಾದ ವಿದ್ಯಾರ್ಥಿಯನ್ನು ಕರೆದಾಗ ಬರುವಂತೆ ಸೂಚನೆ ನೀಡಿ ಮನೆಗೆ ಕಳುಹಿಸಿದ್ದಾರೆ.ಘಟನೆ ವಿವರ: ಮಂಗಳವಾರ ಅಪ್ರಾಪ್ತ ವಯಸ್ಸಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಗೆ ಅದೇ ಕಾಲೇಜಿನ ವಿದ್ಯಾರ್ಥಿಯೊಬ್ಬ ಇರಿದು ಗಾಯಗೊಳಿಸಿದ್ದಾನೆಂದು ಆರೋಪಿಸಲಾಗಿತ್ತು. ಸಾಮಾಜಿಕ ಜಾಲತಾಣ ಮತ್ತು ಸಾರ್ವಜನಿಕರ ವಲಯದಲ್ಲಿ ಸಾಕಷ್ಟು ಪರ ಮತ್ತು ವಿರೋಧ ಚರ್ಚೆಗೆ ಕಾರಣವಾಗಿದ್ದ ಈ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಪೊಲೀಸರು ಆರೋಪದಲ್ಲಿನ ಸತ್ಯಾಂಶದ ಹುಡಕಾಟ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಆರಂಭದಲ್ಲಿ ಚೂರಿಯಿಂದ ಇರಿಯಲಾಗಿದೆ ಎಂದು ಸುದ್ದಿಯಾಗಿತ್ತು. ಬಳಿಕ ಬ್ಲೇಡ್‌ನಿಂದ ಇರಿಯಲಾಗಿದೆ ಎನ್ನಲಾಗಿತ್ತು. ಆ ಬಳಿಕ ಹರಿತವಾದ ಬ್ಲೇಡ್‌ನಂತಹ ವಸ್ತುವಿನಿಂದ ಗೀರಲಾಗಿದೆ ಎನ್ನಲಾಗಿತ್ತು. ವಿದ್ಯಾರ್ಥಿನಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ ಅಂಶಗಳನ್ನು ಸಾಬೀತು ಮಾಡುವ, ಪ್ರತ್ಯಕ್ಷ ಸಾಂದರ್ಭಿಕ ಅಥವಾ ಪರೋಕ್ಷ ಸಾಕ್ಷಿಗಳು ಸಿಕ್ಕಿರಲಿಲ್ಲ.ವಿದ್ಯಾರ್ಥಿನಿ ನೀಡಿದ ದೂರಿನಲ್ಲಿ ಆ.೨೦ರ ಬೆಳಗ್ಗೆ ೮.೪೫ರ ಸುಮಾರಿಗೆ ಬೆಳಗ್ಗೆ ಕಾಲೇಜಿಗೆ ಬರುವಾಗ ಕಾಲೇಜು ಸಮೀಪ ತಮ್ಮದೇ ಕಾಲೇಜಿನ ವಿದ್ಯಾರ್ಥಿ ನನ್ನ ಎಡ ಕೈಗೆ ಯಾವುದೋ ಹರಿತವಾದ ವಸ್ತುವಿನಿಂದ ಗೀರಿರುವುದಾಗಿ ಆರೋಪಿಸಿದ್ದಳು. ಆರೋಪಿತ ವಿದ್ಯಾರ್ಥಿನಿ ಮತ್ತು ಆರೋಪ ಹೊರಿಸಲಾಗಿದ್ದ ವಿದ್ಯಾರ್ಥಿ ಇಬ್ಬರೂ ಅಪ್ರಾಪ್ತರಾಗಿದ್ದು, ವಿಭಿನ್ನ ಧರ್ಮಕ್ಕೆ ಸೇರಿದವರಾಗಿದ್ದು, ಈ ಘಟನೆ ಭಾರಿ ಸುದ್ದಿಗೆ ಗ್ರಾಸವಾಗಿತ್ತು.ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದ ಅಪ್ರಾಪ್ತ ವಿದ್ಯಾರ್ಥಿ ಮತ್ತು ಆತನ ಓರ್ವ ಸ್ನೇಹಿತನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದರು. ವಿದ್ಯಾರ್ಥಿನಿ ದಾಖಲಾಗಿದ್ದ ಆಸ್ಪತ್ರೆಯ ಮುಂಭಾಗದಲ್ಲಿ ಹಾಗೂ ಪೊಲೀಸ್ ಠಾಣೆಯ ಮುಂಭಾಗದಲ್ಲಿ ವಿವಿಧ ರಾಜಕೀಯ, ಧಾರ್ಮಿಕ ವ್ಯಕ್ತಿಗಳು ಜಮಾವಣೆಗೊಂಡಿದ್ದರು.ಪೊಲೀಸರಿಂದ ಸಿಸಿಟಿವಿ ಪರಿಶೀಲನೆ: ಘಟನೆ ವಿದ್ಯಾರ್ಥಿನಿ ನೀಡಿದ್ದ ಹೇಳಿಕೆಯನ್ನು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು, ನಗರದ ಶ್ರೀಧರ್ ಭಟ್ ಅಂಗಡಿಯ ಸಿಸಿ ಕ್ಯಾಮರಾ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದ್ದರು. ಸಿಸಿ ಕ್ಯಾಮರಾದಲ್ಲಿ ವಿದ್ಯಾರ್ಥಿನಿ ಈ ರಸ್ತೆಯಲ್ಲಿ ಹೋಗಿರುವುದು ಕಂಡು ಬಂದಿರಲಿಲ್ಲ. ಬಳಿಕ ಬೊಳುವಾರು ಸ್ನೇಹ ಟೆಕ್ಸ್‌ಟೈಲ್ಸ್, ಕೊಂಬೆಟ್ಟು ಶಾಲಾ ಪರಿಸರದ ಸಿಸಿ ಕ್ಯಾಮರ ಪರಿಶೀಲನೆ ಮಾಡಲಾಗಿದ್ದು, ಈ ವೇಳೆ ಬೊಳುವಾರಿನಲ್ಲಿ ರಿಕ್ಷಾದಿಂದ ಇಳಿದು ಆಕೆ ಕಾಲೇಜಿಗೆ ಹೋಗುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ವಿದ್ಯಾರ್ಥಿನಿ ಆರೋಪ ಹೊರಿಸಿದ್ದ ವಿದ್ಯಾರ್ಥಿಯು ತನ್ನ ಸ್ನೇಹಿತನೊಂದಿಗೆ ನೆಲ್ಲಿಕಟ್ಟೆ ರಸ್ತೆಯಿಂದ ಬರುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ವಿದ್ಯಾರ್ಥಿನಿ ತನಗೆ ಇರಿಯಲಾಗಿತ್ತು ಎಂಬ ಸ್ಥಳದಲ್ಲಿ ಸೆರೆಯಾದ ಸಿಸಿಟಿವಿ ಫೂಟೇಜ್‌ನಲ್ಲಿ ಅವರಿಬ್ಬರು ಸಂಧಿಸಿರುವ ಬಗ್ಗೆ ಯಾವುದೇ ಪುರಾವೆ ಸಿಕ್ಕಿಲ್ಲ ಎನ್ನಲಾಗಿದೆ. ಅಲ್ಲದೆ ಕಾಲೇಜ್‌ಗೆ ತಲುಪುವ ತನಕ ಆಕೆಯ ಕೈಗೆ ಯಾವುದೇ ಗಾಯವಾಗಿಲ್ಲ ಎಂದು ಆಕೆಯ ಸಹಪಾಠಿಗಳಾದ ಮೂವರು ವಿದ್ಯಾರ್ಥಿನಿಯರು ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ.

ವಿದ್ಯಾರ್ಥಿನಿ ಕಾಲೇಜಿಗೆ ಹೋಗುವ ತನಕ ಆಕೆಯ ಕೈಗೆ ಗಾಯವಾಗಿರಲಿಲ್ಲ ಎಂದು ಕೆಲ ವಿದ್ಯಾರ್ಥಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಬೋಳ್ವಾರಿನಿಂದ ದೂರುದಾರೆಯ ಜತೆಗೆ ಆಕೆಯ ಸಮುದಾಯದ ಮೂವರು ವಿದ್ಯಾರ್ಥಿನಿಯರು ಕಾಲೇಜಿಗೆ ನಡೆದುಕೊಂಡು ಹೋಗಿದ್ದರು. ಅಂಥ ಯಾವುದೇ ಘಟನೆ ನಡೆದಿರುವುದನ್ನು ಅವರು ನಿರಾಕರಿಸಿದ್ದರು. ಇನ್ನು ವಿದ್ಯಾರ್ಥಿನಿ ಹಾಗೂ ಆರೋಪಿ ವಿದ್ಯಾರ್ಥಿ ಎಲ್ಲೂ ಭೇಟಿಯಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿರಲಿಲ್ಲ ಎಂಬುದು ಸ್ಪಷ್ಟವಾಗಿದೆ.

ಪೊಲೀಸ್ ಇಲಾಖೆ ವಿದ್ಯಾರ್ಥಿನಿಯ ದೂರಿನ ಮೇರೆಗೆ ವಿದ್ಯಾರ್ಥಿಯ ವಿರುದ್ಧ ಪೋಕ್ಸೋ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದೆ. ಇದೇ ವೇಳೆ ಆರೋಪಿತ ವಿದ್ಯಾರ್ಥಿಯು ಅಪ್ರಾಪ್ತ ಬಾಲಕನಾಗಿರುವುದರಿಂದ ಹಾಗೂ ಆತನ ಅಪರಾಧವನ್ನು ಸಾಬೀತು ಪಡಿಸುವಂತಹ ಯಾವುದೇ ಸಾಕ್ಷ್ಯ ಸಿಗದಿರುವುದರಿಂದ ಸದ್ಯಕ್ಕೆ ಆತನನ್ನು ಪೊಲೀಸರು ಮನೆಗೆ ಕಳುಹಿಸಿದ್ದಾರೆ.

------

ವಿದ್ಯಾರ್ಥಿನಿಗೆ ಇರಿತ ಪ್ರಕರಣ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಕೆ: ಎಸ್‌ಪಿಪುತ್ತೂರು: ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಗೆ ಇರಿತ ಆರೋಪದ ಕುರಿತು ಆರಂಭದಲ್ಲಿ ವಿದ್ಯಾರ್ಥಿನಿ ಹೇಳಿಕೆಯಂತೆ ದಾಖಲಾದ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ತನಿಖೆಯಲ್ಲಿ ಹೊರಬರುವ ಸತ್ಯಾಸತ್ಯತೆಯನ್ನು ಆಧರಿಸಿ ಸಮಗ್ರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹೇಳಿದ್ದಾರೆ. ಅವರು ಬುಧವಾರ ಪುತ್ತೂರು ನಗರ ಠಾಣೆಗೆ ಭೇಟಿ ನೀಡಿದ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದರು.

ಪ್ರಕರಣದ ಕುರಿತು ವಿದ್ಯಾರ್ಥಿನಿಯು ನೀಡಿದ ಹೇಳಿಕೆ ಮೇರೆಗೆ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಈ ಬಗ್ಗೆ ತನಿಖೆ ಆರಂಭಿಸಿದ್ದು ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಹೊರಬರುವ ಸತ್ಯಾಸತ್ಯತೆಯನ್ನು ಆಧರಿಸಿ ಸಮಗ್ರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ತನಿಖೆಯ ವೇಳೆ ಹೆಚ್ಚಿನ ವಿಚಾರಗಳನ್ನು ಪ್ರಸ್ತಾಪ ಮಾಡಲು ಸಾಧ್ಯವಾಗುವುದಿಲ್ಲ. ವೈಜ್ಞಾನಿಕವಾಗಿ, ಕಾನೂನಾತ್ಮಕವಾಗಿ ಹೇಗೆ ತನಿಖೆ ಮಾಡಬೇಕೋ ಅದರಂತೆ ಪಾರದರ್ಶಕವಾಗಿ ತನಿಖೆಯನ್ನು ಮಾಡುತ್ತೇವೆ. ಸಂಪೂರ್ಣ ತನಿಖೆಯ ಬಳಿಕ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.