ಸಾರಾಂಶ
ಕಡತ ಸರಿಪಡಿಸಲು ಸಮಯಾವಕಾಶ ನೀಡಿದ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್
ಕನ್ನಡಪ್ರಭ ವಾರ್ತೆ ಪುತ್ತೂರುಉಪವಿಭಾಗ ವ್ಯಾಪ್ತಿಯಲ್ಲಿ ಗುರುತಿಸಿರುವ ಮರಳು ಬ್ಲಾಕ್‌ಗಳಿಗೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿ ಕಡತಗಳನ್ನು ಪರಿಶೀಲನೆ ನಡೆಸಿದ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು ಪ್ರತಿ ಬ್ಲಾಕ್ ವ್ಯಾಪ್ತಿಯಲ್ಲಿನ ವಿವಿಧ ಇಲಾಖೆಯ ಅಧಿಕಾರಿಗಳು ನೀಡಿರುವ ಕಡತಗಳನ್ನು ಪರಿಶೀಲನೆ ನಡೆಸಿ ಬೇಜವಾಬ್ದಾರಿ ವರದಿ ನೀಡಿರುವ ಅಧಿಕಾರಿಗಳನ್ನು ತರಾಟೆತ್ತಿಕೊಂಡರು. ತಾಲೂಕು ಮಟ್ಟದಲ್ಲಿನ ಕಡತ ಪರಿಶೀಲಿಸಿ ಜಿಲ್ಲಾಧಿಕಾರಿ ಸಮಿತಿಗೆ ಕಳುಹಿಸಬೇಕು. ಇಲ್ಲದಿದ್ದರೆ ಮುಂದಿನ ಹಂತದ ಪ್ರಕ್ರಿಯೆ ನಡೆಯದೆ ಗಣಿಗಾರಿಕೆ ಆರಂಭಿಸಲು ಸಾಧ್ಯವಿಲ್ಲ. ಅಧಿಕಾರಿಗಳು ತಪ್ಪು ವರದಿ ಕೊಟ್ಟರೆ ಇದನ್ನು ಮುಂದಕ್ಕೆ ಕಳುಹಿಸಲು ಸಾಧ್ಯವಿಲ್ಲ. ಸಮರ್ಪಕ ವರದಿ ನೀಡದ ಅಧಿಕಾರಿಗಳು ೨ ದಿನಗಳಲ್ಲಿ ಸರಿಪಡಿಸಿ ನೀಡುವಂತೆ ಸೂಚನೆ ನೀಡಿದರು. ಪುತ್ತೂರು ಉಪ ವಿಭಾಗ ವ್ಯಾಪ್ತಿಯ ಪುತ್ತೂರು, ಸುಳ್ಯ, ಕಡಬ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಗುರುತಿಸಲಾದ ನಾನ್ ಸಿಆರ್‌ಝಡ್ ಮರಳು ಬ್ಲಾಕ್‌ಗಳನ್ನು ಅಂಗೀಕರಿಸುವ ಮರುಳು ಸಮಿತಿ ಸಭೆಯು ಮಂಗಳವಾರ ಪುತ್ತೂರು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅಧ್ಯಕ್ಷತೆಯಲ್ಲಿ ನಡೆಯಿತು. ತಾಲೂಕುವಾರು ವರದಿ ಕಡತಗಳನ್ನು ಪರಿಶೀಲನೆ ನಡೆಸಿದ ಉಪವಿಭಾಗಾಧಿಕಾರಿಗಳು ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಗುರುತಿಸಲಾಗಿರುವ ನೇತ್ರಾವತಿ- ಕುಮಾರಧಾರಾ ಮರಳು ಬ್ಲಾಕ್‌ನ ವಿಚಾರದಲ್ಲಿ ಜಂಟಿ ಸಮೀಕ್ಷೆ ನಡೆಸಿದ ಇಲಾಖೆಗಳು ಸಮರ್ಪಕವಾಗಿ ಕೆಲಸ ಮಾಡದೇ ಇರುವ ಕಾರಣ ಇದನ್ನು ಮಂಜೂರು ಮಾಡದೇ ಇರಲು ನಿರ್ಧರಿಸಿದರು. ಕಡತ ಸರಿ ಮಾಡಿಕೊಂಡು ಬರಲು ಎರಡು ದಿನಗಳ ಸಮಯಾವಕಾಶ ನೀಡಿದರು. ಅಂಗೀಕರಿಸಲ್ಪಟ್ಟ ಬ್ಲಾಕ್‌ಗಳು ಜಿಲ್ಲಾ ಸಮಿತಿಯಿಂದ ಮರಳು ಟೆಂಡರ್ ಕರೆಯಲು ಅರ್ಹತೆ ಪಡೆದುಕೊಂಡಿವೆ. ಬಾಕಿ ಇರುವ ಬ್ಲಾಕ್‌ಗಳಿಗೆ ಸಂಬಂಧಿಸಿ ಜಂಟಿ ಸಮೀಕ್ಷೆಗೆ ಸಂಬಂಧಪಟ್ಟ ಇಲಾಖೆಗಳು ಉಳಿಕೆ ಕೆಲಸಗಳನ್ನು ಮುಗಿಸಿದ ಬಳಿಕ ಮತ್ತೊಮ್ಮೆ ಮರಳು ಸಮಿತಿ ಸಭೆಗೆ ಮಂಡಿಸಲಾಗುತ್ತದೆ. ಬೆಳ್ತಂಗಡಿ ತಾಲೂಕಿನ ೫ ಬ್ಲಾಕ್‌ಗಳ ಪೈಕಿ ಮೊಗ್ರು ಗ್ರಾಮದ ೨, ಬಂದಾರು ಗ್ರಾಮದ ೧ ಮತ್ತು ಚಿಬಿದ್ರೆಯ ೧ ಬ್ಲಾಕ್‌ನ್ನು ಟೆಂಡರ್‌ಗೆ ಮಂಜೂರು ಮಾಡಿ ಜಿಲ್ಲಾ ಸಮಿತಿಗೆ ಕಳಿಸಲು ನಿರ್ಧರಿಸಲಾಗಿದೆ. ಕಡಬ ತಾಲೂಕಿನ ಪೆರಾಬೆಯ ೨, ಕುದ್ಮಾರ್‌ನ ೧ ಬ್ಲಾಕ್‌ಗಳನ್ನು ಕ್ಲೀಯರ್ ಮಾಡಲಾಗಿದೆ. ನೂಜಿಬಾಳ್ತಿಲ ಗ್ರಾಮದ ಬ್ಲಾಕ್‌ನ್ನು ಅರಣ್ಯ ಇಲಾಖೆಯ ಪಂಜ ಮತ್ತು ಸುಬ್ರಹ್ಮಣ್ಯ ವಲಯದವರು ಜಂಟಿ ಸಮೀಕ್ಷೆ ಮಾಡಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ಸುಳ್ಯದ ಏಕಮಾತ್ರ ಬ್ಲಾಕ್‌ಗೆ ಅರಣ್ಯ ಇಲಾಖೆ ಆಕ್ಷೇಪವಿರುವ ಕಾರಣ ಕಡತ ಮುಂದೆ ಕೊಂಡೊಯ್ಯಲು ಸಾಧ್ಯವಿಲ್ಲ. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಬ್ಲಾಕ್ ಬಗ್ಗೆ ೨ ದಿನಗಳಲ್ಲಿ ಹೊಸ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಸ್ಟೆಲ್ಲಾ ವರ್ಗೀಸ್ ತಿಳಿಸಿದರು. ಪುತ್ತೂರು, ಸುಳ್ಯದಲ್ಲಿ ತಲಾ ೧, ಕಡಬದಲ್ಲಿ ೪, ಬೆಳ್ತಂಗಡಿಯಲ್ಲಿ ೫ ಮರಳು ಬ್ಲಾಕ್‌ಗಳಿವೆ. ಪುತ್ತೂರು, ಸುಳ್ಯ ಬ್ಲಾಕ್‌ಗಳ ಬಗ್ಗೆ ಮರು ವರದಿ ತಯಾರಿಸಿ ಕಳುಹಿಸಬೇಕು. ಕಡಬದಲ್ಲಿ ೩ ಬ್ಲಾಕ್‌ಗಳು ಕ್ಲಿಯರ್ ಇದ್ದು ಮುಂದಿನ ಹಂತಕ್ಕೆ ಕಳುಹಿಸಲಾಗುತ್ತದೆ. ಬೆಳ್ತಂಗಡಿಯಲ್ಲಿಯು ೪ ಬ್ಲಾಕ್‌ಗಳಿಗೆ ಅನುಮತಿ ನೀಡಿ ಮುಂದಿನ ಹಂತಕ್ಕೆ ರವಾನಿಸಲಾಗುವುದು ಎಂದು ಆಯುಕ್ತರು ಮಾಹಿತಿ ನೀಡಿದರು.ಪುತ್ತೂರು, ಕಡಬ, ಬೆಳ್ತಂಗಡಿ ತಹಸೀಲ್ದಾರ್, ಸುಳ್ಯ ಉಪ ತಹಸೀಲ್ದಾರ್, ಪುತ್ತೂರು ತಾಪಂ ಕಾರ್ಯನಿರ್ವಹಣಾ ಅಧಿಕಾರಿ, ಎಲ್ಲ ಅರಣ್ಯ ವಲಯಗಳ ಆರ್‌ಎಫ್‌ಒ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ, ಕಂದಾಯ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಲು, ಸಂಬಂಧಪಟ್ಟ ಬ್ಲಾಕ್‌ಗಳ ಗ್ರಾಪಂ ಪಿಡಿಒಗಳು ಮರಳು ಸಮಿತಿ ಇದ್ದರು.