ಪುತ್ತೂರು ಜನ ಶಿಕ್ಷಣ ಟ್ರಸ್ಟ್, ಮಹಿಳಾ ಸಾಂತ್ವನ ಕೇಂದ್ರ, ಒಳಮೊಗ್ರು ಗ್ರಾಮ ಪಂಚಾಯಿತಿ, ಸಂಜೀವಿನಿ ಒಕ್ಕೂಟ, ಅಂಗನವಾಡಿ ಕೇಂದ್ರ ಇವುಗಳ ಸಹಯೋಗದಲ್ಲಿ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮ ಪಂಚಾಯಿತಿಯಲ್ಲಿ ಸಮುದಾಯದತ್ತ ಸಾಂತ್ವನ, ಸ್ವಚ್ಛತೆ ಸೇವೆ, ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ ಋತುಚಕ್ರ ನೈರ್ಮಲ್ಯದ ಕುರಿತು ಅರಿವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಪುತ್ತೂರು: ಪುತ್ತೂರು ಜನ ಶಿಕ್ಷಣ ಟ್ರಸ್ಟ್, ಮಹಿಳಾ ಸಾಂತ್ವನ ಕೇಂದ್ರ, ಒಳಮೊಗ್ರು ಗ್ರಾಮ ಪಂಚಾಯಿತಿ, ಸಂಜೀವಿನಿ ಒಕ್ಕೂಟ, ಅಂಗನವಾಡಿ ಕೇಂದ್ರ ಇವುಗಳ ಸಹಯೋಗದಲ್ಲಿ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮ ಪಂಚಾಯಿತಿಯಲ್ಲಿ ಸಮುದಾಯದತ್ತ ಸಾಂತ್ವನ, ಸ್ವಚ್ಛತೆ ಸೇವೆ, ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ ಋತುಚಕ್ರ ನೈರ್ಮಲ್ಯದ ಕುರಿತು ಅರಿವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಸಮುದಾಯದತ್ತ ಸಾಂತ್ವನ ಸಂವಾದದೊಂದಿಗೆ ಮಹಿಳೆಯರಲ್ಲಿ ಮುಟ್ಟಿನ ನೈರ್ಮಲ್ಯ ಕುರಿತು ಜಾಗೃತಿ ನಡೆಸಲಾಯಿತು. ಜನ ಶಿಕ್ಷಣ ಟ್ರಸ್ಟಿನ ಸಹ ನಿರ್ದೇಶಕರೂ, ಪುತ್ತೂರು ಸಾಂತ್ವನ ಕೇಂದ್ರದ ನಿರ್ದೇಶಕರಾಗಿರುವ ಕೃಷ್ಣ ಮೂಲ್ಯ ಪ್ರಾಸ್ತಾವಿಕ ಮಾತನಾಡಿ, ಪ್ಯಾಡ್ಗಳಿಗೆ ಬಳಸುವ ರಾಸಾಯನಿಕಗಳು ಹಾಗೂ ಅದರಿಂದ ಮಹಿಳೆಯರ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಬಗ್ಗೆ ತಿಳಿಸಿದರು.

ಜನ ಶಿಕ್ಷಣ ಟ್ರಸ್ಟ್‌ ನಿರ್ದೇಶಕರು, ಮಾಜಿ ಒಂಬಡ್ಸ್ಮೆನ್, ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಅವರು ಸ್ವಚ್ಛತೆ ಕುರಿತು ಮಾಹಿತಿ ನೀಡಿದರು.

ಬಂಟ್ವಾಳ ಸಾಂತ್ವನ ಕೇಂದ್ರದ ಆಪ್ತಸಮಾಲೋಚಕಿ ನಿಶಾ ಪ್ರಿಯ ಕೆ. ಅವರು ಮರು ಬಳಕೆ ಮಾಡಬಹುದಾದ ಪರಿಸರ ಸ್ನೇಹಿ ಪ್ಯಾಡ್, ಮುಟ್ಟಿನ ಕಪ್ ಬಳಕೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಬಗ್ಗೆಯೂ ಮಾಹಿತಿ ನೀಡಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಪ್ರಮೀಳಾ ಆರೋಗ್ಯದ ಮಾಹಿತಿ ನೀಡಿದರು.ಒಳಮೊಗ್ರು ಗ್ರಾ.ಪಂ. ಕಾರ್ಯದರ್ಶಿ ಜಯಂತಿ ಸ್ವಾಗತಿಸಿದರು. ಸಂಜೀವಿನಿ ಒಕ್ಕೂಟದ ಎಂಬಿಕೆ ಚಂದ್ರಿಕಾ ವಂದಿಸಿದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ಕೃಷಿಸಖಿ, ಎಲ್‌ಸಿಆರ್‌ಪಿ, ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಸದಸ್ಯರು ಹಾಗೂ ಸಂಜೀವಿನಿ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಾಂತ್ವನ ಕೇಂದ್ರ ಸಮಾಜ ಕಾರ್ಯಕರ್ತೆ ಬಿಂದುಕುಮಾರಿ ಪಿ.ಕೆ. ಕಾರ್ಯಕ್ರಮದಲ್ಲಿ ಭಾಗವಹಿಸಿದರು.