ಹನುಮಗಿರಿ ಕ್ಷೇತ್ರದ ಬ್ರಹ್ಮಕಲಶ ಸಮಾಜದ ಉತ್ಸವವಾಗಬೇಕು. ಕಾರ್ಯಕ್ರಮದಲ್ಲಿ ಎಲ್ಲ ವರ್ಗದವರನ್ನು ಒಟ್ಟಿಗೆ ಸೇರಿಸಿಕೊಂಡು ವಿಜೃಂಭಣೆಯಿಂದ ನಡೆಸಬೇಕು ಎಂಬ ಅಭಿಲಾಷೆಯಿಂದ ಶ್ರಮ ಪಡುತ್ತಿದ್ದಾರೆ. ಇದು ಹಿಂದೂ ಸಮಾಜದ ವಿಶಿಷ್ಟವಾದ ಕಾರ್ಯಕ್ರಮವಾಗಬೇಕು ಎಂದ ಅವರು, ಇಂತಹ ಪುಣ್ಯಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಶಕ್ತಿ ಯೋಗ ಭಾಗ್ಯವನ್ನು ಸಕಲ ದೇವರು ನೀಡಲಿ ಎಂದು ಹನುಮಗಿರಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರ ಶ್ರೀಕೃಷ್ಣ ಭಟ್ ಮುಂಡ್ಯ ಹೇಳಿದರು.

ಪುತ್ತೂರು: ಹನುಮಗಿರಿ ಕ್ಷೇತ್ರದ ಬ್ರಹ್ಮಕಲಶ ಸಮಾಜದ ಉತ್ಸವವಾಗಬೇಕು. ಕಾರ್ಯಕ್ರಮದಲ್ಲಿ ಎಲ್ಲ ವರ್ಗದವರನ್ನು ಒಟ್ಟಿಗೆ ಸೇರಿಸಿಕೊಂಡು ವಿಜೃಂಭಣೆಯಿಂದ ನಡೆಸಬೇಕು ಎಂಬ ಅಭಿಲಾಷೆಯಿಂದ ಶ್ರಮ ಪಡುತ್ತಿದ್ದಾರೆ. ಇದು ಹಿಂದೂ ಸಮಾಜದ ವಿಶಿಷ್ಟವಾದ ಕಾರ್ಯಕ್ರಮವಾಗಬೇಕು ಎಂದ ಅವರು, ಇಂತಹ ಪುಣ್ಯಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಶಕ್ತಿ ಯೋಗ ಭಾಗ್ಯವನ್ನು ಸಕಲ ದೇವರು ನೀಡಲಿ ಎಂದು ಹನುಮಗಿರಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರ ಶ್ರೀಕೃಷ್ಣ ಭಟ್ ಮುಂಡ್ಯ ಹೇಳಿದರು. ಏ. ೯ರಿಂದ ೧೨ರವರೆಗೆ ನಡೆಯಲಿರುವ ಹನುಮಗಿರಿ ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಚಪ್ಪರ ಮುಹೂರ್ತ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ, ಕ್ಷೇತ್ರದ ವೆಬ್‌ಸೈಟ್ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಭಟ್ ಮುಂಡ್ಯ ಇಲ್ಲಿನ ವೈದೇಹಿ ಸಭಾಭವನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು. ಚಪ್ಪರ ಮುಹೂರ್ತ ನೆರವೇರಿಸಿದ ಸಮಿತಿ ಉಪಾಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ, ಹನುಮಗಿರಿ ಕ್ಷೇತ್ರದ ಬ್ರಹ್ಮಕಲಶ ನಡೆಯುತ್ತಿರುವುದು ನಮ್ಮೆಲ್ಲರ ಯೋಗ ಭಾಗ್ಯವಾಗಿದೆ. ಇದು ಇತಿಹಾಸ ಸೃಷ್ಟಿಸಲಿರುವ ಕಾರ್ಯಕ್ರಮ. ಸಮಿತಿಯವರು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಚಪ್ಪರ ಮುಹೂರ್ತ ನೆರವೇರಿಸುವ ಭಾಗ್ಯ ನನಗೆ ಸಿಕ್ಕಿರುವುದು ನನ್ನ ಯೋಗವಾಗಿದೆ ಎಂದ ಅವರು, ಧಾರ್ಮಿಕ ಕಾರ್ಯಗಳಲ್ಲಿ ನಾವು ಪಾಲ್ಗೊಂಡಾಗ ಅದರ ಫಲ ನಮಗೆ ಸಿಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಮಾತನಾಡಿ, ದೇವಾಲಯ ಎಂಬುದು ಕಲ್ಲು, ಮಣ್ಣು ಮಾತ್ರ ಅಲ್ಲ. ಅಲ್ಲಿ ವಿಶೇಷ ಚೈತನ್ಯವಿದೆ. ಧಾರ್ಮಿಕ ಕಾರ್ಯಗಳು ನಡೆದಾಗ ಅದಕ್ಕೆ ಇನ್ನಷ್ಟು ಶಕ್ತಿ ಬರುತ್ತದೆ ಎಂದರು. ಈ ಕ್ಷೇತ್ರದ ಬ್ರಹ್ಮಕಲಶ ಕಾರ್ಯಕ್ರಮದ ಯಶಸ್ಸಿಗೆ ಸಮಿತಿ ರಚನೆಯಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯವಿದೆ. ಎಲ್ಲರೂ ದೇವರ ಸೇವೆಯಲ್ಲಿ ಪಾಲ್ಗೊಳ್ಳಿ ಎಂದರು.

ಪ್ರಗತಿಪರ ಕೃಷಿಕ ಸಂತೋಷ್ ರೈ ಇಳಂತಾಜೆ ಕ್ಷೇತ್ರದ ವೆಬ್‌ಸೈಟ್ ಉದ್ಘಾಟಿಸಿ ಶುಭಹಾರೈಸಿದರು. ಸಮಿತಿ ಉಪಾಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಚನಿಲ ತಿಮ್ಮಪ್ಪ ಶೆಟ್ಟಿ, ಶಶಿಕುಮಾರ್ ರೈ ಬಾಳ್ಯೊಟ್ಟು, ವಿದ್ಯಾ ಗೌರಿ, ದಿನೇಶ್ ಮೆದು, ರವಿಕಿರಣ್ ಶೆಟ್ಟಿ ಬೆದ್ರಾಡಿ, ರಾಕೇಶ್ ರೈ ಕೆಡೆಂಜಿ, ಪ್ರಧಾನ ಕಾರ್ಯದರ್ಶಿ ಆರ್.ಸಿ. ನಾರಾಯಣ ರೆಂಜ, ನಗರ ಗ್ರಾಮ ರಚನಾ ಸಮಿತಿ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ಸ್ವಾಗತ ಸಮಿತಿ ಉಪಾಧ್ಯಕ್ಷರಾದ ವಿದ್ಯಾಧರ ಜೈನ್, ಅಜಿತ್ ರೈ ಹೊಸಮನೆ ಉಪಸ್ಥಿತರಿದ್ದರು. ಕ್ಷೇತ್ರದ ಧರ್ಮದರ್ಶಿ ಶಿವರಾಮ ಪಿ. ಸ್ವಾಗತಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ನಹುಷ ಪಳನೀರು ವಂದಿಸಿದರು. ಶಿಕ್ಷಕ ದೇವಿಪ್ರಸಾದ ಶೆಟ್ಟಿ ಕುತ್ಯಾಳ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ, ಉಪ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.