ಪುತ್ತೂರು: ಸರಕಾರಿ ಆಸ್ಪತ್ರೆಯಲ್ಲಿ ಈ ತನಕ 17 ಡಯಾಲಿಸೀಸ್ ಯಂತ್ರಗಳು ಈಗಾಗಲೇ ಕಾರ್ಯರ್ನಿಹಿಸುತ್ತಿದ್ದು 157 ಮಂದಿ ರೋಗಿಗಳು ಇದರಿಂದಾಗಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಮತ್ತೆ 6 ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗಿದ್ದು ಒಟ್ಟು 23 ಯಂತ್ರಗಳ ಮೂಲಕ ರಾತ್ರಿ ಹಗಲು ಡಯಾಲಿಸೀಸ್ ಕೇಂದ್ರ ಕಾರ್ಯನಿರ್ವಹಿಸುತ್ತಾ ರೋಗಿಗಳಿಗೆ ಸೇವೆ ಒದಗಿಸುತ್ತಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಪುತ್ತೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ಅಳವಡಿಸಲಾದ 6 ಡಯಾಲಿಸೀಸ್ ಯಂತ್ರಗಳಿಗೆ ಸೋಮವಾರ ರಾತ್ರಿ ಚಾಲನೆ ನೀಡಿ ಮಾತನಾಡಿದರು. ಡಯಾಲಿಸೀಸ್ ದೊರೆಯದೇ ಯಾರೂ ಕೂಡ ಬಲಿಯಾಗಬಾರದು ಎಂಬ ಉದ್ದೇಶದಿಂದ ಆರೋಗ್ಯ ಇಲಾಖೆಯ ಆಯುಕ್ತರು, ವೈದ್ಯರಲ್ಲಿ ಚರ್ಚಿಸಿ ತುರ್ತಾಗಿ ಈ ಡಯಾಲಿಸೀಸ್ ಯಂತ್ರಗಳನ್ನು ಅಳವಡಿಸಲಾಗಿದೆ ಎಂದರು.48 ಮಂದಿ ರೋಗಿಗಳು ವೈಟಿಂಗ್ ಲಿಸ್ಟ್ನಲ್ಲಿದ್ದಾರೆ. ಇದೀಗ 6 ಯಂತ್ರಗಳು ಸೇರ್ಪಡೆಗೊಂಡಿರುವುದರಿಂದ ವೈಟಿಂಗ್ ಲಿಸ್ಟ್ ನಲ್ಲಿರುವ 48 ಜನರಿಗೂ ಉಚಿತ ಸೇವೆ ದೊರೆಯಲಿದೆ. ಖಾಸಗಿಯಾಗಿ ಡಯಾಲಿಸೀಸ್ ಮಾಡಿಸುವುದಾದರೆ ರು.1650 ನೀಡಬೇಕಾಗಿದ್ದು ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸೀಸ್ ಮಾಡಿಸುವ ರೋಗಿಗಳಿಗೆ ಸರಕಾರವೇ ಒಂದು ಡಯಾಲಿಸೀಸ್‌ಗೆ ರು.1500 ಪಾವತಿಸುತ್ತಿದೆ. ಇದು ಬಡವರಿಗೆ ಸರ್ಕಾರ ನೀಡುವ ದೊಡ್ಡ ವರದಾನವಾಗಿದೆ ಎಂದರು. ಆಸ್ಪತ್ರೆಯ ಸುರಕ್ಷಾ ಸಮಿತಿ ಸದಸ್ಯರಾದ ಅರುಣಾ ದಿನಕರ ರೈ, ಸಿದ್ದೀಕ್, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಯದುರಾಜ್, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಪಕ್ಷದ ಪ್ರಮುಖರಾದ ರವೀಂದ್ರ ರೈ ನೆಕ್ಕಿಲು, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಸನತ್ ರೈ, ಜಯಪ್ರಕಾಶ್ ಬದಿನಾರು, ಫಾರೂಕ್ ಬಾಯಬೆ ಮತ್ತಿತರರು ಉಪಸ್ಥಿತರಿದ್ದರು. ಡಯಾಲಿಸೀಸ್‌ಗೆ ಬರುವವರಲ್ಲಿ ಬಹುತೇಕ ಮಂದಿ ಪೈನ್ ಕಿಲ್ಲರ್ ಮಾತ್ರೆ ತಿಂದು ಕಿಡ್ನಿಯನ್ನು ಕಳೆದುಕೊಂಡವರು. ಪೈನ್ ಕಿಲ್ಲರ್ ತಗೊಳ್ಳುವುದರಿಂದ ಆರು ತಿಂಗಳಲ್ಲಿ ಕಿಡ್ನಿ ಹೋಗುತ್ತದೆ.ವೈದ್ಯರ ಸಲಹೆ ಇಲ್ಲದೆ ಯಾರೂ ಪೈನ್ ಕಿಲ್ಲರ್ ಅಥವಾ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ತೆಗೆದುಕೊಂಡದ್ದೇ ಆದರೆ ನಂತರ ಜೀವಮಾನವಿಡೀ ಪಶ್ಚಾತ್ತಾಪ ಪಡಬೇಕಾದ ಪರಿಸ್ಥಿತಿ ಬರಲಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ವೈದ್ಯರ ಸಲಹೆ ಇಲ್ಲದೆ ಸ್ವಂತ ಇಚ್ಚೆಯಲ್ಲಿ ಮೆಡಿಕಲ್‌ನಿಂದ ಔಷಧಿ ಪಡೆದು ಸೇವಿಸಬಾರದು.। ಅಶೋಕ್ ಕುಮಾರ್ ರೈ ಶಾಸಕರು, ಪುತ್ತೂರು