ಪುತ್ತೂರು: ಯಾರೂ ಉದ್ಯಮಿಗಳಾಗಿ ಹುಟ್ಟುವುದಿಲ್ಲ. ಉತ್ತಮ ಯೋಚನೆ, ಯೋಜನೆ, ಪರಿಕಲ್ಪನೆಯೊಂದಿಗೆ ಸೂಕ್ತ ತರಬೇತಿ ಪಡೆದುಕೊಂಡಾಗ ಯಶಸ್ವೀ ಉದ್ಯಮಿಯಾಗುವುದಕ್ಕೆ ಸಾಧ್ಯವಿದೆ ಎಂದು ಪುತ್ತೂರಿನ ಮುಳಿಯ ಜುವೆಲ್ಲರ್ಸ್‌ನ ಮುಖ್ಯ ಕಾರ್ಯನಿರ್ವಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಹೇಳಿದರು.

ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ವಿಭಾಗ ಮತ್ತು ಇನ್ಸಿಟ್ಯೂಷನ್‌ ಇನ್ನೋವೇಶನ್ ಸೆಲ್ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಸಾಮಾಜಿಕ ವ್ಯವಹಾರದಲ್ಲಿರುವ ನವೀನ ಸವಾಲುಗಳು ಮತ್ತು ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ವ್ಯವಹಾರ ಯೋಜನೆಗಳ ಪ್ರಸ್ತುತಿಯ ಸ್ಪರ್ಧೆ ಇಂಪ್ಯಾಕ್ಟ್ ಸ್ಪಾರ್ಕ್ ೨೦೨೬ ಕ್ಕೆ ಚಾಲನೆ ನೀಡಿ ಮಾತಾಡಿದರು. ಪುತ್ತೂರಿನಲ್ಲಿರುವ ಅನೇಕ ಸ್ವದೇಶಿ ಬ್ರಾಂಡ್ ಗಳನ್ನು ಉದಾಹರಿಸಿದ ಅವರು ಆಧುನಿಕ ಆರ್ಥಿಕತೆಯಲ್ಲಿ ಹೊಸಹೊಸ ಸವಾಲುಗಳಿದ್ದು ಅದನ್ನು ಮೆಟ್ಟಿ ನಿಂತಾಗ ಮಾತ್ರ ಯಶಸ್ಸನ್ನು ಸಾಧಿಸಬಹುದು ಎಂದರು. ಯಾವುದೇ ಕೆಲಸವನ್ನು ಮಾಡುವಾಗಲೂ ಅದು ಸಾಮಾಜಿಕ ಕಳಕಳಿಯದ್ದೇ ಆಗಿರಲಿ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ಮಾತನಾಡಿ, ಸೃಜನಶೀಲ ಚಿಂತನೆಯ ಮೂಲಕ ಸಣ್ಣ ಸಣ್ಣ ಪಟ್ಟಣಗಳಲ್ಲಿ ಉದ್ಯಮವನ್ನು ಪ್ರಾರಂಭಿಸಿದಾಗ ಅದು ಆ ಪ್ರದೇಶದ ಆರ್ಥಿಕಾಭಿವೃದ್ದಿಗೆ ವೇಗವರ್ಧಕವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಸತ್ಯನಾರಾಯಣ ಭಟ್ ಮಾತನಾಡಿ ಹೊಸತನದ, ಸಾಮಾಜಿಕ ಜವಾಬ್ಧಾರಿಯ, ಪರಿಸರದ ಕಾಳಜಿಯುಳ್ಳ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಎಂಬಿಎ ವಿಭಾಗದ ವಿದ್ಯಾರ್ಥಿಗಳ ಮೇಲಿದೆ ಎಂದರು. ಕಾಲೇಜಿನ ಎಂಬಿಎ ವಿಭಾಗದ ನಿರ್ದೇಶಕ ಡಾ.ರಾಬಿನ್ ಮನೋಹರ್ ಶಿಂಧೆ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ಡಾ.ಆಶ್ಲೆ.ಡಿ.ಸೋಜ ವಂದಿಸಿದರು. ಸಹ ಸಂಯೋಜಕಿ ಪ್ರೊ.ಜೀವಿತಾ.ಬಿ.ವಿ ಸಹಕರಿಸಿದರು. ವಿದ್ಯಾರ್ಥಿನಿಯರಾದ ವೈಷ್ಣವಿ.ಜಿ.ಕೆ ಮತ್ತು ಶ್ರುತಾ ರೈ ನಿರ್ವಹಿಸಿದರು.ಬಹುಮಾನ ವಿತರಣೆ: ಸಮಾರೋಪ ಸಮಾರಂಭದಲ್ಲಿ ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ ಕೆ. ಬಹುಮಾನ ವಿತರಿಸಿದರು. ಯುನಿವರ್ಸಿಟಿ ಕಾಲೇಜು ವಿದ್ಯಾರ್ಥಿಗಳು ಪ್ರಥಮ ಸ್ಥಾನ, ಕಲ್ಲಡ್ಕದ ಶ್ರೀರಾಮ ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಮತ್ತು ವಿವೇಕಾನಂದ ಕಾಲೇಜು(ಸ್ವಾಯತ್ತ) ಕಾಲೇಜು ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡರು.