ಪುತ್ತೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಜೀವನ್ಮರಣ ಸ್ಥಿತಿಯಲ್ಲಿದ್ದ ವೃದ್ಧೆಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಅವರು ಚೇತರಿಸಿಕೊಂಡ ಬಳಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿ ಮಾನವೀಯತೆ ಮೆರೆದ ಘಟನೆ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಯ ಸಮನ್ವಯತೆಯೊಂದಿಗೆ ಸೋಮವಾರ ನಡೆದಿದೆ. ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಕುಕ್ಕುಮನೆ ನಿವಾಸಿ ೮೦ ವರ್ಷದ ಹಿರಿಯ ನಾಗರಿಕ ಲಕ್ಷ್ಮೀ ತೀವ್ರ ಅನಾರೋಗ್ಯ ಪೀಡಿತರಾಗಿದ್ದರು. ಅವರನ್ನು ಮಾರ್ಚ್ ತಿಂಗಳಲ್ಲಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಅವರು ಸಂಪೂರ್ಣವಾಗಿ ಗುಣಮುಖರಾದ ಬಳಿಕ ಸೋಮವಾರ ಅವರನ್ನು ಪುನರ್ವಸತಿ ಕೇಂದ್ರಕ್ಕೆ ದಾಖಲು ಮಾಡಲಾಗಿದೆ.


ಹಿರಿ ಜೀವನಕ್ಕೆ ಮಾನವೀಯ ಸ್ಪರ್ಶ: ಲಕ್ಷ್ಮೀ ಅವರಿಗೆ ಪತಿ ಹಾಗೂ ನಾಲ್ವರು ಮಕ್ಕಳಿದ್ದರು. ಈ ಪೈಕಿ ಮೂವರು ಮಕ್ಕಳು ತೀರಿಕೊಂಡಿದ್ದರು. ಇನ್ನೊಬ್ಬ ಪುತ್ರ ಎಲ್ಲಿದ್ದಾನೆ ಎಂಬ ಮಾಹಿತಿಯೇ ಇಲ್ಲ. ಯಾರೂ ಇಲ್ಲದೆ ಅನಾಥೆಯಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮೀ ಅವರಿಗೆ ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಯದುರಾಜ್ ಡಿ.ಕೆ. ಅವರ ಮಾರ್ಗದರ್ಶನದಲ್ಲಿ ವೈದ್ಯಕೀಯ ತಂಡವು ಚಿಕಿತ್ಸೆ ಮತ್ತು ಆರೈಕೆ ನೀಡಿ ಅವರು ಚೇತರಿಸಿಕೊಂಡು ನಡೆದಾಡುವಂತೆ ಮಾಡಿದ್ದರು.

ಬಳಿಕ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳ ವಿನಂತಿ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರೀಶ್ ಕೆ. ಹಾಗೂ ಸಹಾಯಕ ಅಭಿವೃದ್ಧಿ ಯೋಜನಾಧಿಕಾರಿಯಾದ ವಿಕಲಚೇತನರ ನೋಡಲ್ ಅಧಿಕಾರಿ ಮಂಗಳ ಕಾಳೆ ಅವರ ಮಾರ್ಗದರ್ಶನದಲ್ಲಿ, ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ಅವರನ್ನು ಪುತ್ತೂರಿನ ಕಸಬಾ ಗ್ರಾಮದ ಕೆರೆಮೊಲೆ ದೀಪಶ್ರೀ ಹಿರಿಯ ನಾಗರಿಕರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಯಿತು.ಪುತ್ತೂರು ಪೊಲೀಸ್ ಇಲಾಖೆಯ ಅಕ್ಕಪಡೆಯ ಸಿಬ್ಬಂದಿ ಸಂಧ್ಯಾ, ನವ್ಯ ಮತ್ತು ರೇವತಿ, ಚಾಲಕರಾದ ನವಾಜ್ ಬಡ್ಕಿ ಅವರು ವೃದ್ಧೆಯ ಕೈ ಹಿಡಿದು ಆಶ್ರಮದತ್ತ ಕರೆದೊಯ್ದ ಘಟನೆ ಮಾನವೀಯತೆ ಮೆರೆದ ಉದಾಹರಣೆಯಾಗಿದೆ. ವಾಹನ ಚಾಲಕರಾದ ನವಾಜ್ ಬಡ್ಕಿ ಅವರು ತಮ್ಮ ದುಡಿಮೆಯ ಒಂದು ಭಾಗವನ್ನು ವೃದ್ಧೆಯ ಖರ್ಚಿಗೆ ನೀಡಿದ ಮಾನವೀಯ ನಡೆ ಸಹ ಗಮನಾರ್ಹವಾಗಿದೆ.

ಬೆಂಗಳೂರಿನ ದೀಪಶ್ರೀ ಆಸ್ಪತ್ರೆಯ ಡಾ. ಶ್ರೀಧರ್ ಅವರು ಲಕ್ಷ್ಮೀ ಅವರನ್ನು ಶುಲ್ಕರಜಿತವಾಗಿ ಆಶ್ರಮದಲ್ಲಿ ಸೇರಿಸಿಕೊಳ್ಳಲು ಮುಂದಾಗಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಈಗಾಗಲೇ ಪುತ್ತೂರು ಮೈಸೂರು ಹಾಗೂ ಬೆಂಗಳೂರಿನಲ್ಲಿ ದೀಪಶ್ರೀ ವೃದ್ಧರ ಪುನರ್‌ವಸತಿ ಕೇಂದ್ರ ಅತ್ಯಂತ ಸೇವಾ ಭಾವದಲ್ಲಿ ನಡೆಯುತ್ತಿರುವುದು ಡಾ. ಶ್ರೀಧರ್ ಅವರ ಸೇವಾ ಭಾವಕ್ಕೆ ಪ್ರತ್ಯಕ್ಷ ದರ್ಪಣವಾಗಿದೆ.ಇಳಿ ವಯಸ್ಸಿನ ವೃದ್ಧೆಗೆ ಆರೋಗ್ಯ ಕಲ್ಪಿಸುವ ಜೊತೆಗೆ ಪುನರ್ವಸತಿ ವ್ಯವಸ್ಥೆ ಮಾಡಿಸುವಲ್ಲಿ ಶ್ರಮಿಸಿದ ಪುತ್ತೂರು ಉಮೇಶ್ ನಾಯಕ್, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಯದುರಾಜ್ ಡಿ.ಕೆ., ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರೀಶ್ ಕೆ., ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಗಳ ಕಾಳೆ, ಅಂಗನವಾಡಿ ಮೇಲ್ವಿಚಾರಕಿ ಯಶೋದಾ, ತಾಪಂ ವಿಕಲಚೇತನರ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್, ಆಟೋ ಚಾಲಕ ನಾರಾಯಣ, ಅಕ್ಕಪಡೆಯ ಪೊಲೀಸ್ ಸಿಬ್ಬಂದಿಗಳ ಮಾನವೀಯ ಕಾರ್ಯಕ್ಕೆ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.