ಸಾರಾಂಶ
ಚಿತ್ರದುರ್ಗದ ಬಂಜಾರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಕೆ.ಮಂಜುನಾಥ್ ನಾಯಕ್ ಅವರು ರಚಿಸಿರುವ ಪುಟುರೆ ಕಾದಂಬರಿಯನ್ನು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಜಯದೇವ ನಾಯ್ಕ ಲೋಕಾರ್ಪಣೆ ಮಾಡಿದರು.
ಕನ್ನಡಪ್ರಭವಾರ್ತೆ ಚಿತ್ರದುರ್ಗ
ನಗರದ ಬಂಜಾರ ಭವನದಲ್ಲಿ ಬಂಜಾರ ಸಂಸ್ಕಾರ ಮತ್ತು ಸಂಸ್ಕೃತಿ ಒಳಗೊಂಡ ಡಾ.ಕೆ.ಮಂಜುನಾಥ್ ನಾಯಕ್ ರಚಿತ ಪುಟುರೆ ಕಾದಂಬರಿ ಲೋಕಾರ್ಪಣೆ ಹಾಗೂ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಜಯದೇವ ನಾಯ್ಕ ಅವರಿಗೆ ಗೌರವಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೃತಿ ಬಿಡುಗಡೆ ಮಾಡಿ ಮಾತನಾಡಿದ ನಿವೃತ್ತ ಸಹ ಪ್ರಾಧ್ಯಾಪಕಿ ಡಾ.ಪಿ.ಯಶೋಧ ರಾಜಶೇಖರಪ್ಪ, ಕೃತಿಯು ಸಂತ ಶ್ರೀ ಸೇವಾಲಾಲ್ ಮಹಾರಾಜರ ಜೀವನ ಚರಿತ್ರೆ, ಅವರ ಸಂದೇಶಗಳು, ನುಡಿಮುತ್ತುಗಳು, ಕಾಲಜ್ಞಾನಕ್ಕೆ ಸಂಬಂಧಿಸಿದ ಅನೇಕ ವಿಚಾರಗಳು, ಬಂಜಾರ ಸಂಸ್ಕೃತಿ, ಸಂಸ್ಕಾರ ಕುರಿತ ವಿಚಾರಗಳ ಪ್ರಸ್ತುತ ಪಡಿಸುತ್ತವೆ ಎಂದರು. 18ನೇ ಶತಮಾನದ ಆರಂಭದಲ್ಲಿ ಜನಿಸಿದ ಸಂತ ಸೇವಾಲಾಲ್ ಅವರು ಸ್ವಲ್ಪ ಕಾಲ ಗುರುಗಳ ಸನ್ನಿಧಿಯಲ್ಲಿ ಕಳೆದು ನಂತರ ಕಾಶಿ, ಹೈದರಾಬಾದ್, ಛತ್ತಿಸ್‌ಘಡ್ ಸೇರಿದಂತೆ ಉತ್ತರ ಭಾರತ, ದಕ್ಷಿಣ ಭಾರತದಾದ್ಯಂತ ತಮ್ಮ ತಂಡದ ಸಮೇತ ಸಂಚರಿಸಿ, ಜಗತ್ತಿನ ಜ್ಞಾನದ ಬೆಳಕು ಪಸರಿಸಿ, ಅನೇಕ ಪವಾಡಗಳನ್ನು ಮಾಡಿ, ಭವಿಷ್ಯದಲ್ಲಿ ನಡೆಯಬಹುದಾದ ಸಂಗತಿಗಳ ಕಾಲಜ್ಞಾನದ ಮಾತುಗಳನ್ನಾಡಿದ್ದಾರೆ. ಬಂಜಾರ ಜನಾಂಗದ ಪುಣ್ಯಕ್ಷೇತ್ರಗಳು, ಲಂಬಾಣಿ ಹಾಡುಗಳ ವಿಶಿಷ್ಟತೆಯನ್ನು ತುಂಬಾ ಸರಳವಾಗಿ ಕೃತಿಯಲ್ಲಿ ತಿಳಿಸಿದ್ದಾರೆ ಎಂದರು.ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹಾಗೂ ಶ್ರೀ ನಂದ ಮಸಂದ್ ಸೇವಾಲಾಲ್ ಸ್ವಾಮೀಜಿ, ಜಿಪಂ ಸ್ಥಾಯಿ ಸಮಿತಿ ಮಾಜಿ ಅದ್ಯಕ್ಷ ಜಿ.ರಾಜಾನಾಯ್ಕ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಜಯದೇವ ನಾಯ್ಕ, ಎಂಕು ಸಾದ್ ಸ್ವಾಮೀಜಿ ಹಾಗೂ ಪಿಡಬ್ಲ್ಯೂಡಿ ಪ್ರಥಮ ದರ್ಜೆ ಗುತ್ತಿಗೆದಾರ ಜಿ.ಮಾಧವ ನಾಯ್ಕ, ವಿದ್ಯಾರ್ಥಿ ಯುವಕ ಸಂಘದ ಅಧ್ಯಕ್ಷ ಗಿರೀಶ್ ನಾಯ್ಕ್, ಅನುದಾನಿತ ಶಿಕ್ಷಣ ಸಂಸ್ಥೆಗಳು ಮಹಾಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಸುಮಿತ್ ಕುಮಾರ್ ಇದ್ದರು.