ಪಿಗ್ಮಿ, ಎಫ್‌ಡಿ ಹಣ ವಾಪಸ್ ನೀಡುವಂತೆ ಮಹಿಳೆಯರ ಪ್ರತಿಭಟನೆ

| Published : Jan 07 2025, 12:15 AM IST

ಸಾರಾಂಶ

ಕಸಬಾ ಸೊಸೈಟಿ ವ್ಯಾಪ್ತಿಯಲ್ಲಿ ಬರುವ ಪಾಂಡವಪುರ ಪಟ್ಟಣ, ಬೀರಶೆಟ್ಟಹಳ್ಳಿ, ಹಾರೋಹಳ್ಳಿ, ಹಿರೇಮರಳಿ, ಬನಘಟ್ಟ ಗ್ರಾಮಗಳಿಂದ ಅಂದಾಜು 1500ಕ್ಕೂ ಅಧಿಕ ಮಂದಿ ರೈತರು, ಗ್ರಾಹಕರು 45 ಲಕ್ಷ ರು.ಗಳಿಗೂ ಅಧಿಕ ಪಿಗ್ಮಿ ಕಟ್ಟಿದ್ದಾರೆ. ಎಲ್ಲಾ ಹಣವನ್ನು ಇಲ್ಲಿನ ಅಧಿಕಾರಿಗಳು, ಆಡಳಿತ ಮಂಡಳಿಯವರು ಭ್ರಷ್ಟಚಾರ ನಡೆಸಿ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಟ್ಟಿರುವ ಪಿಗ್ಮಿ ಹಾಗೂ ಎಫ್‌ಡಿ ಹಣವನ್ನು ವಾಪಸ್ ನೀಡುವಂತೆ ಆಗ್ರಹಿಸಿ ಮಹಿಳೆಯರು ಕಚೇರಿಗೆ ಬೀಗ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.

ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎದುರು ಆಗಮಿಸಿದ ಮಹಿಳೆಯರು ಕಚೇರಿಗೆ ಬೀಗ ಹಾಕಿ ಆಕ್ರೋಶ ಹೊರಹಾಕಿದರು. ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಸೊಸೈಟಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಗ್ರಾಹಕರು ಹಾಗೂ ರೈತರು ಕಟ್ಟಪಟ್ಟು ಕಟ್ಟಿರುವಂತಹ ಪಿಗ್ಮಿ, ಎಫ್‌ಡಿ(ಠೇವಣಿ)ಹಣ ಹಾಗೂ ಅಡಮಾನವಿಟ್ಟಿರುವ ಚಿನ್ನಾಭರಣಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಕೋಟ್ಯಾಂತರ ರು. ನಷ್ಟ ಮಾಡಿದ್ದಾರೆ ಎಂದು ದೂರಿದರು.

ಕ್ಷೇತ್ರದ ಶಾಸಕರು ಹಂತಹಂತವಾಗಿ ಭ್ರಷ್ಟಚಾರ ನಡೆಸಿರುವ ಅಧಿಕಾರಿಗಳಿಂದ ಹಣ ವಸೂಲಾತಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಪಿಗ್ಮಿ ಹಾಗೂ ಎಫ್‌ಡಿ ಕಟ್ಟಿರುವ ಗ್ರಾಹಕರು, ರೈತರಿಗೆ ವಾಪಸ್ಸು ಕೊಡಿಸಿಲ್ಲ ಎಂದು ಕಿಡಿಕಾರಿದರು.

ಈಗಿರುವ ಸಂಸ್ಥೆ ಅಧ್ಯಕ್ಷ ಯೋಗೇಶ್ ಅವರು ಶನಿವಾರದೊಳಗೆ ಪಿಗ್ಮಿ ಕಟ್ಟಿರುವ ಎಲ್ಲಾ ರೈತರಿಗೆ ಹಣ ಕೊಡುವುದಾಗಿ ಭರವಸೆ ನೀಡಿದ್ದರು. ಶನಿವಾರ ಮುಗಿಸಿ ಸೋಮವಾರ ಬಂದಿದೆ. ಪಿಗ್ಮಿ ಹಣ ಕೇಳಲು ಬಂದರೆ ಅಧ್ಯಕ್ಷರು, ಅಧಿಕಾರಿಗಳು ಯಾರೂ ಪತ್ತೆ ಇಲ್ಲ. ಫೋನ್‌ ಮಾಡಿದರೂ ಅಧ್ಯಕ್ಷರು, ಶಾಸಕರು ಫೋನ್ ತೆಗೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಸಬಾ ಸೊಸೈಟಿ ವ್ಯಾಪ್ತಿಯಲ್ಲಿ ಬರುವ ಪಾಂಡವಪುರ ಪಟ್ಟಣ, ಬೀರಶೆಟ್ಟಹಳ್ಳಿ, ಹಾರೋಹಳ್ಳಿ, ಹಿರೇಮರಳಿ, ಬನಘಟ್ಟ ಗ್ರಾಮಗಳಿಂದ ಅಂದಾಜು 1500ಕ್ಕೂ ಅಧಿಕ ಮಂದಿ ರೈತರು, ಗ್ರಾಹಕರು 45 ಲಕ್ಷ ರು.ಗಳಿಗೂ ಅಧಿಕ ಪಿಗ್ಮಿ ಕಟ್ಟಿದ್ದಾರೆ. ಎಲ್ಲಾ ಹಣವನ್ನು ಇಲ್ಲಿನ ಅಧಿಕಾರಿಗಳು, ಆಡಳಿತ ಮಂಡಳಿಯವರು ಭ್ರಷ್ಟಚಾರ ನಡೆಸಿ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕೂಡಲೇ ನಮಗೆ ಪಿಗ್ಮಿ ಹಣ ನೀಡಬೇಕು. ಇಲ್ಲವಾದರೆ, ಕಚೇರಿ ಬಾಗಿಲು ತೆಗೆದು ಕೆಲಸ ನಡೆಸಲು ಬಿಡದೆ ಉಗ್ರಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮಹಿಳೆಯರಾದ ಶೋಭಾ, ಅನುರಾದ, ಸುನಂದ, ರಾಜಮ್ಮ, ರತ್ನಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.