ಸಂಗೀತ- ಮಾತಿನ ಸಮಾಗಮ ಕಾವ್ಯವೇ ಖವ್ವಾಲಿ

| Published : Mar 20 2024, 01:15 AM IST

ಸಾರಾಂಶ

ಸಂಗೀತದ ಪ್ರಕಾರಗಳಲ್ಲಿ ಸೂಫಿ ಕಾವ್ಯವಾದ ಖವ್ವಾಲಿ ಸುಪ್ರಸಿದ್ಧ ಕಲೆಯಾಗಿದೆ. ಖವ್ವಾಲಿ ಪ್ರಧಾನವಾಗಿ ಪ್ರೀತಿ, ಭಕ್ತಿ ಮತ್ತು ಹಂಬಲವನ್ನು ಒಳಗೊಂಡಿದ್ದು, ಪ್ರಥಮವಾಗಿ ವಾಸುಸ್ತಿ ಸೂಫಿ ಇದನ್ನು ಬಳಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಸಂಗೀತದ ಪ್ರಕಾರಗಳಲ್ಲಿ ಸೂಫಿ ಕಾವ್ಯವಾದ ಖವ್ವಾಲಿ ಸುಪ್ರಸಿದ್ಧ ಕಲೆಯಾಗಿದೆ. ಖವ್ವಾಲಿ ಪ್ರಧಾನವಾಗಿ ಪ್ರೀತಿ, ಭಕ್ತಿ ಮತ್ತು ಹಂಬಲವನ್ನು ಒಳಗೊಂಡಿದ್ದು, ಪ್ರಥಮವಾಗಿ ವಾಸುಸ್ತಿ ಸೂಫಿ ಇದನ್ನು ಬಳಸಿದರು. ಸೂಫಿ ಸಂತರಾದ ಖಾಜಾ ಬಂದೇನವಾಜರು ಕವಾಲಿಯನ್ನು ಅತ್ಯಂತ ಮನೋಜ್ಞವಾಗಿ ಹಾಡಿ ಪ್ರೇಕ್ಷರನ್ನು ಭಾವಪರವಸಗೊಳಿಸುತ್ತಿದ್ದರು.

ಖವ್ವಾಲಿಯಲ್ಲಿ ಮಾತಿಗೆ ಬಹಳ ಮಹತ್ವವಿದೆ ಎಂದು ಖಾಜಾ ಬಂದೇನವಾಜ ವಿವಿ ಸಮ ಕುಲಾಧಿಪತಿ ಜನಾಬ ಸೈಯದ್ ಅಹ್ಮದ್ ಅಲಿ ಅಲ್ ಹುಸೇನಿ ಅಭಿಪ್ರಾಯಪಟ್ಟರು.

ಗುಲ್ಬರ್ಗ ವಿವಿ ಹಾಗೂ ನವದೆಹಲಿಯ ಭಾರತೀಯ ವಿವಿ ಸಂಘದ ಸಹಯೋಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ (ಸಾಜ್ -ಈ -ಹಿಂದ್) 6ನೇ ಅಂತರ್ ವಿಶ್ವವಿದ್ಯಾಲಯಗಳ ರಾಷ್ಟ್ರೀಯ "ಖವ್ವಾಲಿ " ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕವಾಲಿ ಸೂಫಿ ಸಂತರಲ್ಲಿ ಬಹಳ ಪ್ರಾಮುಖ್ಯತೆ ಹೊಂದಿದೆ. ವಿಶೇಷವಾಗಿ ಪ್ರಸಿದ್ಧ ಸೂಫಿ ಪಂಥದ ಸ್ಥಾಪಕನಾದ ಮೈನುದ್ದಿನ್ ಚಿಸ್ತಿಯು ಈ ಖವ್ವಾಲಿ ಹಾಡುಗಳ ಮೂಲಕ ಜನತೆಗೆ ಒಳ್ಳೆಯ ಸಂದೇಶವನ್ನು ಸಾರುತ್ತಿದ್ದರು. ಇಂದು ಆಯೋಜಿಸಿರುವ ಕವಾಲಿ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಎಂದ ಅವರು ಖವ್ವಾಲಿ ಹಾಡುಗಳು ಶ್ರದ್ಧೆ ಮತ್ತು ಆಧ್ಯಾತ್ಮಿಕ ಸಾಮೀಪ್ಯವನ್ನು ಉತ್ತೇಜಿಸಲು ಸೂಫಿಗಳು ಪ್ರದರ್ಶಿಸಿದ ಸಂಗೀತದ ರೂಪ. ಹಲವಾರು ಖವ್ವಾಲಿ ಹಾಡುಗಳು ಸಂತರ ವೈಚಾರಿಕತೆಯನ್ನು ಹೊಗಳುತ್ತವೆ. ಆದಾಗ್ಯೂ, ಹೆಚ್ಚಿನ ಸಂಗೀತವು ಆಧ್ಯಾತ್ಮಿಕ ಮತ್ತು ಲೌಕಿಕ ಪ್ರೀತಿಯ ಬಗ್ಗೆ ಹೇಳುತ್ತದೆ. ಜನಸಮೂಹದ ನಡುವೆ ಪರಸ್ಪರ ಸಮೂಹ ಭಾವ ಮತ್ತು ಭಕ್ತಿ ಭಾವ ಬೆಳೆಸುವಲ್ಲಿ ಖವ್ವಾಲಿ ಹಾಡುಗಳು ಜನಪ್ರಿಯವಾಗಿವೆ ಎಂದರು.

ಖಾಜಾ ಬಂದೇನವಾಜ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಅಲಿ ರಝಾ ಮೂಸವಿ ಮುಖ್ಯ ಅತಿಥಿಯಾಗಿ ಮಾತನಾಡಿ, ಖವಾಲಿ ಪ್ರಕಾರದ ಸಾಹಿತ್ಯ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ಆ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನಗೊಳ್ಳುತ್ತದೆ. ಇಂತಹ ಕಾರ್ಯಕ್ರಮ ರೂಪಿಸಿದ ಭಾರತೀಯ ವಿಶ್ವವಿದ್ಯಾಲಯಗಳ ಸಂಘ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯಕ್ಕೂ ಅಭಿನಂದನೆಗಳು ಎಂದರು.

ಗುವಿವಿ ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ವಿವಿಧ ರಾಜ್ಯಗಳ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಸಂತೋಷದ ವಿಷಯ. ಇದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ರಾಷ್ಟ್ರೀಯ ಭಾವೈಕ್ಯತೆ ಮತ್ತು ಅಂತರ್ ಸಾಂಸ್ಕೃತಿಕ ಚಿಂತನೆಯನ್ನು ಕವಲಿಯ ಮೂಲಕ ಬೆಳೆಸಲು ಸಾಧ್ಯವಾಗುತ್ತದೆ. ಇಂತಹ ಅವಕಾಶವನ್ನು ಗುಲಬರ್ಗಾ ವಿಶ್ವಾವಿದ್ಯಾಲಯದಲ್ಲಿ ಆಯೋಜಿಸಲು ಅವಕಾಶ ನೀಡಿರುವುದು ಹೆಮ್ಮೆಯ ಸಂಗತಿ. ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಸರ್ವರಿಗೂ ಧನ್ಯವಾದಗಳನ್ನು ತಿಳಿಸಿ ಸ್ಪರ್ಧಾರ್ಥಿಗಳಿಗೆ ಶುಭ ಹಾರೈಸಿದರು.