ಆರೋಗ್ಯ ಸೇವೆಗೆ ಕ್ಯೂ ಆರ್‌ ಕೋಡ್‌ ವಿನೂತನ ಪ್ರಯೋಗ

| Published : Feb 03 2024, 01:47 AM IST

ಸಾರಾಂಶ

ಹಂಪಿ ಹಾಗೂ ಸುತ್ತಮುತ್ತಲು ಹಂಪಿ ಉತ್ಸವದ ಅಂಗವಾಗಿ ತಾತ್ಕಾಲಿಕವಾಗಿ 9 ಕ್ಲಿನಿಕ್‌ ಗಳನ್ನು ಸ್ಥಾಪನೆ ಮಾಡಲಾಗಿದೆ. ಇಲ್ಲಿರುವ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ತಾತ್ಕಾಲಿಕವಾಗಿ ಸ್ಥಾಪನೆಯಾಗಿರುವ ಆಸ್ಪತ್ರೆಗಳು ಎಲ್ಲೆಲ್ಲಿ ಇವೆ ಎಂಬ ಮಾಹಿತಿ ತಿಳಿಯುತ್ತದೆ

ಬಿ. ರಾಮಪ್ರಸಾದ್‌ ಗಾಂಧಿ ಹಂಪಿ

ಹಂಪಿ ಉತ್ಸವದಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡಲು ಇದೇ ಪ್ರಥಮ ಬಾರಿಗೆ ಆರೋಗ್ಯ ಇಲಾಖೆಯವರು ಕ್ಯೂ ಆರ್‌ ಕೋಡ್‌ ಸ್ಥಾಪಿಸಿದ್ದಾರೆ.

ವಸ್ತು ಪ್ರದರ್ಶನ ಮಳಿಗೆಯಲ್ಲಿ ಎರಡು ಕ್ಯೂ ಆರ್‌ ಕೋಡ್‌ಗಳನ್ನು ಸ್ಥಾಪಿಸಲಾಗಿದ್ದು, ವಿವಿಧ ಆರೋಗ್ಯ ಮಾಹಿತಿ ಪಡೆಯಲು ಹಾಗೂ ಅಂಗಾಂಗ ದಾನ ಮಾಡಲು ಕ್ಯೂ ಆರ್‌ ಕೋಡ್‌ ಮೂಲಕ ನೋಂದಣಿಗೊಳಿಸಬಹುದು.

ಹಂಪಿ ಹಾಗೂ ಸುತ್ತಮುತ್ತಲು ಹಂಪಿ ಉತ್ಸವದ ಅಂಗವಾಗಿ ತಾತ್ಕಾಲಿಕವಾಗಿ 9 ಕ್ಲಿನಿಕ್‌ ಗಳನ್ನು ಸ್ಥಾಪನೆ ಮಾಡಲಾಗಿದೆ. ಇಲ್ಲಿರುವ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ತಾತ್ಕಾಲಿಕವಾಗಿ ಸ್ಥಾಪನೆಯಾಗಿರುವ ಆಸ್ಪತ್ರೆಗಳು ಎಲ್ಲೆಲ್ಲಿ ಇವೆ ಎಂಬ ಮಾಹಿತಿ ತಿಳಿಯುತ್ತದೆ. ಸಾರ್ವಜನಿಕರು ಆಗ ಬೇಕಾದ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ತೆರಳಬಹದು.

ಇನ್ನೊಂದು ಕ್ಯೂ ಆರ್‌ ಕೋಡ್‌ನಲ್ಲಿ ಸ್ಕ್ಯಾನ್‌ ಮಾಡಿದರೆ ಅಂಗಾಂಗಳನ್ನು ದಾನ ಮಾಡುವವರು ನೋಂದಣಿ ಮಾಡಿಸಬಹುದು. ಒಟ್ಟಿನಲ್ಲಿ 75- 80 ಆರೋಗ್ಯ ಮಾಹಿತಿಗಳನ್ನು ಈ ಕ್ಯೂ ಆರ್‌ ಕೋಡ್‌ ಮೂಲಕ ಪಡೆಯಬಹುದು.

ಎಲ್‌ಇಡಿ ಪರದೆ ಮೂಲಕ ಸಹ ವಾಹನದಲ್ಲಿ ಮಾಹಿತಿ ಪ್ರಚುರಪಡಿಸಲಾಗುತ್ತದೆ. ಆರೋಗ್ಯ ಇಲಾಖೆಯ ಈ ವಸ್ತು ಪ್ರದರ್ಶನದಲ್ಲಿ ಹೆಣ್ಣು ಭ್ರೂಣಹತ್ಯೆ ಮಹಾಪಾಪ, ಮಾನಸಿಕ ರೋಗ ಲಕ್ಷಣಗಳ ಬಗ್ಗೆ ಅರಿವು, ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳ ಬಗ್ಗೆ, ತಾಯಿ ಕಾರ್ಡ್‌, ಸ್ಥಳೀಯ ಆಹಾರ ಪದಾರ್ಥಗಳನ್ನು ಉಪಯೋಗಿಸಿಕೊಂಡು ಅನೀಮಿಯಾ ಮುಕ್ತ ಮಾಡುವ ಕುರಿತು, ಏಡ್ಸ್‌ ಮುಕ್ತ ಭಾರತ ಹೀಗೆ 70- 80 ಆರೋಗ್ಯ ಸೇವೆಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನು ಆರೋಗ್ಯ ಇಲಾಖೆಯ ವಸ್ತುಪ್ರದರ್ಶನದಲ್ಲಿ ಕಾಣಬಹುದು.

ಬಾಲ್ಯವಿವಾಹ ತಡೆಯಲು 1098 ನಂಬರ್‌ಗೆ ಕರೆ ಮಾಡಿದರೆ ಕೂಡಲೇ ಆರೋಗ್ಯ ಸಿಬ್ಬಂದಿ ಸಂಬಂಧಪಟ್ಟ ಸ್ಥಳಕ್ಕೆ ಧಾವಿಸುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮ್ಮದ್‌ ಖಾನ್ ಅವರು ಡಿಸಿ ದಿವಾಕರ್‌ ಹಾಗೂ ಶಾಸಕ ಗವಿಯಪ್ಪನವರ ಸಮ್ಮುಖದಲ್ಲಿ ಕ್ಯೂ ಆರ್ ಕೋಡ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ, ಜಿಪಂ ಕುಟುಂಬ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ಇಂತಹ ವಿನೂತನ ಪ್ರಯೋಗ ಹಂಪಿ ಉತ್ಸವಕ್ಕೆ ಮೆರುಗು ತಂದಿದೆ.

ರಾಜ್ಯದಲ್ಲಿಯೇ ಇದೇ ಪ್ರಥಮ ಬಾರಿಗೆ ಹಂಪಿ ಉತ್ಸವದಲ್ಲಿ ಕ್ಯೂ ಆರ್‌ ಕೋಡ್‌ ಪದ್ಧತಿ ಜಾರಿಗೆ ತಂದಿದ್ದೇವೆ. ಇದರಿಂದ ಸಾರ್ವಜನಿಕರಿಗೆ ತಾತ್ಕಾಲಿಕವಾಗಿ ಸ್ಥಾಪನೆಯಾಗಿರುವ ಆಸ್ಪತ್ರೆಗಳ ಎಲ್ಲಿವೆ ಎಂಬುದು ತಿಳಿಯುತ್ತದೆ ಹಾಗೂ ತ್ವರಿತವಾಗಿ ಆರೋಗ್ಯ ಸೇವೆ ಪಡೆಯಲು ಅನುಕೂಲವಾಗುತ್ತದೆ ಎಂದು ವಿಜಯನಗರ ಡಿಎಚ್‌ಒ ಡಾ. ಶಂಕರನಾಯ್ಕ ಹೇಳಿದರು.