ಕನ್ನಡಪ್ರಭ ವಾರ್ತೆ, ಕೆ.ಆರ್.ಪೇಟೆ

ಖಾಸಗಿ ಶಾಲೆಗಳಲ್ಲಿ ಓದಿದರೆ ಮಾತ್ರ ಮಕ್ಕಳು ದೊಡ್ಡವರಾಗುತ್ತಾರೆಂಬ ಭ್ರಮೆಯಿಂದ ಪೋಷಕರು ಹೊರಬಂದರೆ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ ಎಂದು ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ತಾಲೂಕಿನ ಹೆರಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲಾಸಿರಿ ಹಾಗೂ 60ನೇ ವರ್ಷದ ಶಾಲಾ ವಜ್ರಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಹಲವು ಸೌಲಭ್ಯ ದೊರೆಯುತ್ತವೆ. ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗಪಡಿಸಿಕೊಂಡು ಚೆನ್ನಾಗಿ ಕಲಿತು ಅತ್ಯುನ್ನತ ಸ್ಥಾನಗಳನ್ನು ಪಡೆಯಬೇಕು. ಆ ಮೂಲಕ ನಾಡಿಗೆ ಕೊಡುಗೆಯನ್ನು ನೀಡಬೇಕು ಎಂದರು.

ಗ್ರಾಮಸ್ಥರುಗಳು, ಯುವಕರು, ಮುಖಂಡರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯವರು ಶಾಲೆಯ ಅಭಿವೃದ್ಧಿಗೆ ಹಾಗೂ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯು ಅನಾವರಣಗೊಳ್ಳಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆಯಾಗಿವೆ. ಅವುಗಳ ಮೂಲಕ ಮಕ್ಕಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಕಲಿಕಾ ಹಂತದಲ್ಲಿಯೇ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸುವಂತೆ ಸಲಹೆ ನೀಡಿದರು.


ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್.ಪೂರ್ಣಚಂದ್ರ ತೇಜಸ್ವಿ ಮಾತನಾಡಿ, ಪ್ರಸಕ್ತ ಕಾಲಮಾನದಲ್ಲಿ ಹಲವಾರು ವಿದ್ಯಾರ್ಥಿಗಳು ಕೇವಲ ಮೊಬೈಲ್, ಟಿವಿಯನ್ನು ವೀಕ್ಷಣೆ ಮಾಡಲು ಸಮಯವನ್ನು ವ್ಯರ್ಥ ಮಾಡುತ್ತಾರೆ. ಮತ್ತೆ ಕೆಲವರು ಯಾರೊಂದಿಗೂ ಬೆರೆಯದೆ ಒಬ್ಬಂಟಿಯಾಗಿರಲು ಬಯಸುತ್ತಾರೆ. ಆದರೆ ಓದು ಬರಹದ ಜೊತೆಗೆ ಉತ್ತಮವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹವ್ಯಾಸ ರೂಢಿಸಿಕೊಳ್ಳುವಂತೆ ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎಸ್ ಧರ್ಮಪ್ಪ ಮಾತನಾಡಿ, ಚಿಕ್ಕಂದಿನಿಂದಲೇ ವೇದಿಕೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಬುದ್ದಿಶಕ್ತಿ, ಧೈರ್ಯ ಹೆಚ್ಚಿ ಭಯವನ್ನು ಹೋಗಲಾಡಿಸಬಹುದು. ಮಕ್ಕಳಿಗೆ ಓದುವ ಸ್ಪರ್ಧೆಗಿಂತ ಸಮಾಜವನ್ನು ಎದುರಿಸಲು ಬೇಕಾದ ಜಾಣ್ಮೆ, ಸಾಮರ್ಥ್ಯವನ್ನು ನೀಡಬೇಕು. ಜೀವನದ ಕಲೆಯನ್ನು ಅನುಭವಿಸಲು ಸಾಧ್ಯವಾಗುವಂತ ಮೌಲ್ಯಗಳನ್ನು ನೀಡುವುದು ಅವಶ್ಯಕ ಎಂದರು.

ಶಾಲಾ ವಿದ್ಯಾರ್ಥಿಗಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಲೆಯ ಹಿರಿಯ ವಿದ್ಯಾರ್ಥಿಗಳು ನಿವೃತ್ತ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿದರು ಬಳಿಕ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಗ್ರಾಪಂ ಸದಸ್ಯ ಪ್ರಶಾಂತ್, ಆರಾಧನಾ ಕಮಿಟಿ ಸದಸ್ಯ ಕಾಶಿ ಮುರಕನಹಳ್ಳಿ ಪ್ರೀತಂ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ನಿಕಟ ಪೂರ್ವ ಅಧ್ಯಕ್ಷ ಪದ್ಮೇಶ್, ಶಿಕ್ಷಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎ.ಕೆ.ದೇವರಾಜು, ಹಿರಿಯ ಮುಖಂಡ ಸಣ್ಣಸ್ವಾಮಿಗೌಡ, ಎಸ್.ಡಿ.ಎಂ.ಸಿ ಸದಸ್ಯರು ಹಲವರು ಸೇರಿದಂತೆ ಉಪಸ್ಥಿತರಿದ್ದರು.