ಸಾರಾಂಶ
ಶಿವಮೊಗ್ಗ: ಗುಣಾತ್ಮಕ ಸಂಶೋಧನೆಗಳು ದೇಶದ ಉನ್ನತಿಕರಣಕ್ಕೆ ಪ್ರಬಲವಾದ ಶಕ್ತಿಯಾಗಿದೆ ಎಂದು ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದ ಸಂಶೋಧನಾ ಸಹಾಯಕ ಡೀನ್ ಡಾ.ಪಿ.ವಿ.ಶಿವಪ್ರಸಾದ್ ಅಭಿಪ್ರಾಯಪಟ್ಟರು.ನಗರದ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಕಾಲೇಜಿನ ಎಂಬಿಎ-ಎಂಸಿಎ ಸಭಾಂಗಣದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಸಮಿತಿಯ ವತಿಯಿಂದ ಪಿಎಚ್‌ಡಿ ಸಂಶೋಧನಾರ್ಥಿಗಳಿಗಾಗಿ ಏರ್ಪಡಿಸಿದ್ದ ಸಂಶೋಧನಾ ಸವಾಲುಗಳು ಮತ್ತು ಅವಕಾಶಗಳು ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಒಂದು ನಾಣ್ಯದ ಎರಡು ಮುಖ. ಸಂಶೋಧನೆಯ ಫಲಿತಾಂಶದಲ್ಲಿ ಹೆಚ್ಚು ನಿಖರತೆಯನ್ನು ನೀಡಲು ಪ್ರಯತ್ನಿಸಿ. ಶಾಲಾ ಕಾಲೇಜು ಹಂತದ ವಿದ್ಯಾರ್ಥಿಗಳಲ್ಲಿ, ವೃತ್ತಿಪರ ಶಿಕ್ಷಣ ಎಂದರೆ, ಕೇವಲ ಉದ್ಯೋಗ ಪಡೆಯುವ ಮಾರ್ಗವೆಂಬ ಕಲ್ಪನೆಯಲ್ಲಿದ್ದಾರೆ. ಆದರೆ, ಸಂಶೋಧನಾ ಪ್ರಕಿಯೆಗೆ ಸಿಗುವ ಫೆಲೋಶಿಪ್ ಮತ್ತು ಸೌಲಭ್ಯಗಳನ್ನು ತಾಳೆ ಹಾಕಿದಾಗ, ಅದು ಉದ್ಯೋಗದ ಪ್ಯಾಕೇಜ್‌ಗಿಂತ ಉತ್ತಮವಾಗಿರುವುದು ಗಮನಾರ್ಹ ವಿಚಾರವಾಗಿದೆ. ಹಾಗಾಗಿ ಉದ್ಯೋಗಕ್ಕಿಂತ ಮೊದಲು ಪದವಿ ಪಡೆದ ವಿದ್ಯಾರ್ಥಿಗಳು ಸಂಶೋಧನೆಗೆ ಹೆಚ್ಚು ಪ್ರಾಧಾನ್ಯತೆ ನೀಡುವುದು ಉತ್ತಮ ಎಂದು ಹೇಳಿದರು.ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಸಂಶೋಧಕರು ಯಾವಾಗಲೂ ಸಾಮಾಜಿಕವಾಗಿ ಜಾಗೃತರಾಗಿರಬೇಕು, ಅಧ್ಯಯನಶೀಲರಾಗಿರಬೇಕು, ಇದರಿಂದ ಸಮಾಜದಲ್ಲಿರುವ ಅನೇಕ ಸಮಸ್ಯೆಗಳನ್ನು ನಾವೀನ್ಯತೆಯ ಮೂಲಕ ಪರಿಹರಿಸುವ ಅವಕಾಶ ಲಭ್ಯವಾಗಲಿದೆ. ವಿದ್ಯಾಸಂಸ್ಥೆಗಳು ಸಂಶೋಧಕರಿಗೆ ಸಂಪೂರ್ಣ ಸ್ವಾಯತ್ತತೆ ನೀಡಬೇಕು ಎಂದರು.ಭಾರತದಲ್ಲಿ ಯುವ ಜನರ ಸಂಖ್ಯೆ ಅಧಿಕವಿದ್ದರೂ, ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ. ಮಾನವ ಸಂಪತ್ತಿನಲ್ಲಿ ಶ್ರೀಮಂತರಿದ್ದರೂ, ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲು ಇಂದಿಗೂ ಹೋರಾಟ ಮಾಡುತ್ತಿದ್ದೇವೆ. ಹೆಚ್ಚು ಮೌಲ್ಯದ ತಂತ್ರಜ್ಞಾನವನ್ನು ವಿದೇಶದಿಂದ ಅಮದು ಮಾಡಿಕೊಳ್ಳುತ್ತಿದ್ದೇವೆ. ಅದು ನಮ್ಮ ಅಭಿವೃದ್ಧಿಯ ಕೊರತೆಯ ಲಕ್ಷಣ ಎಂದರು.
ಕೋವಿಡ್ ಸಮಯದಲ್ಲಿ ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆಯಿಂದಾಗಿ ಕಾರು ಉತ್ಪಾದನೆ ಸೇರಿದಂತೆ ಅನೇಕ ಕೈಗಾರಿಕೆಗಳು ಸ್ಥಗಿತಗೊಂಡಿದ್ದವು. ಏಕೆಂದರೆ ಈ ಉದ್ಯಮವು ಕೆಲ ರಾಷ್ಟ್ರಗಳಲ್ಲಿ ಮಾತ್ರ ಇದೆ. ಥೈಲ್ಯಾಂಡ್ ನಂತಹ ಸಣ್ಣ ರಾಷ್ಟ್ರದಲ್ಲಿ 90% ಸೆಮಿಕಂಡಕ್ಟರ್ ಉದ್ಯಮ ಇದೆ. ಆವಿಷ್ಕಾರ ಮತ್ತು ನವೋತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇಂತಹ ವಾಸ್ತವತೆಯ ಅರಿವಿನಿಂದ ಪ್ರೇರಣೆ ಪಡೆಯಿರಿ. ಶಾಲಾ ಹಂತದಲ್ಲಿಯೇ ಮುಂದುವರಿದ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಮತ್ತು ಸಂಶೋಧನಾ ಅರಿವು ನೀಡುವಂತಹ ಪೂರಕ ವೇದಿಕೆಗಳು ನಿರ್ಮಾಣವಾಗಲಿ ಎಂದು ಆಶಿಸಿದರು.ಕಾಲೇಜಿನ ಪ್ರಾಂಶುಪಾಲ ಡಾ.ವೈ.ವಿಜಯಕುಮಾರ್ ಮಾತನಾಡಿ, ಕಾಲೇಜಿನಲ್ಲಿ ವಿವಿಧ ವಿಷಯಗಳ 10 ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 100ಕ್ಕೂ ಹೆಚ್ಚು ಸಂಶೋಧನಾರ್ಥಿಗಳು ನಾವೀನ್ಯತೆಯ ಹಿನ್ನೆಲೆಯಲ್ಲಿ ಸಂಶೋಧನಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸಂಶೋಧನಾ ಪ್ರಕ್ರಿಯೆಗಳು ವಿದ್ಯಾಸಂಸ್ಥೆಯ ಕಳಸ ಪ್ರಾಯವಿದ್ದಂತೆ ಎಂದ ಅವರು, ಕೇಂದ್ರ ಸರ್ಕಾರ ಒನ್ ಡೇಟಾ, ಒನ್ ನೇಷನ್ ಅಡಿಯಲ್ಲಿ ದೇಶದ ಪ್ರಗತಿಗಾಗಿ ಮಾಹಿತಿಯ ಏಕೀಕರಣ ಕಾರ್ಯ ಮಾಡುತ್ತಿದ್ದು, ಸಂಶೋಧಕರಿಗೆ ಮತ್ತು ಸ್ಟಾರ್ಟ್ ಆ್ಯಪ್‌ಗಳಿಗೆ ವಿಶ್ವಾಸರ್ಹ ಮತ್ತು ನೀತಿ ಆಧಾರಿತ ಸಂಶೋಧನೆಗೆ ಸಹಾಯವಾಗಲಿದೆ ಎಂದು ಹೇಳಿದರು.
ಕಾಲೇಜಿನ ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಕಾರ್ಯಾಗಾರದ ಸಂಯೋಜಕ ಡಾ.ಎಚ್.ಪಿ.ಸಚಿನ್ ಉಪಸ್ಥಿತರಿದ್ದರು. ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸುಭದ್ರ ಪ್ರಾರ್ಥಿಸಿ, ಡಾ.ವಿ.ವಿಕ್ರಮ್ ನಿರೂಪಿಸಿದರು.