ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಭಾರತೀಯರಿಗೆ ಗುಣಮಟ್ಟದ ಆರೋಗ್ಯ ಮತ್ತು ಶಿಕ್ಷಣ ಉಚಿತವಾಗಿ ಲಭ್ಯವಾಗುವಂತೆ ಮಾಡಲು ಸರ್ಕಾರಗಳು ಮುಂದಾಗಬೇಕು ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಹೇಳಿದರು.ನಗರದಲ್ಲಿರುವ ಮಹಿಳಾ ಸರ್ಕಾರಿ ಕಾಲೇಜಿನ ಸಭಾಂಗಣದಲ್ಲಿ ಬದುಕು ಬೆಳಕು ಸೇವಾ ಸಮಿತಿ, ಮಂಡ್ಯ ಅಮೃತ ಅಲಯನ್ಸ್ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಆರೋಗ್ಯ ಅರಿವು ಪ್ರಬಂಧ ಸ್ಪರ್ಧೆ- ವೈದ್ಯರಿಗೆ ಅಭಿನಂದನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಾದರೂ ದೇಶದ ಜನರಿಗೆ ಉಚಿತವಾಗಿ ಗುಣಮಟ್ಟ ಆರೋಗ್ಯ ಮತ್ತು ಶಿಕ್ಷಣ ಲಭಿಸಬೇಕಿದೆ. ಸರ್ಕಾರಗಳು ಈ ನಿಟ್ಟಿನಲ್ಲಿ ಚಿಂತನೆ ನಡೆಸುವುದು ಸೂಕ್ತ. ಹತ್ತಾರು ಭಾಗ್ಯಗಳು, ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಮಟ್ಟ ಸುಧಾರಣೆಯಾಗದು. ಬೇಕಿರುವುದನ್ನು ಕೊಡದೆ ಎಲ್ಲವನ್ನೂ ನೀಡುವುದು ಸಮಂಜಸವಲ್ಲ ಎಂದರು.ಕೋವಿಡ್-೧೯ರ ದಿನಗಳಲ್ಲಿ ಜನರು ವೈದ್ಯಕೀಯ ಕ್ಷೇತ್ರವನ್ನು ನಂಬಿ ದೇವರಂತೆ ಕಾಣುತ್ತಿದ್ದರು. ಕೊರೋನಾ ಭಾದಿತರ ಉಳಿವಿಗಾಗಿ ವೈದ್ಯಲೋಕ ಹಗಲು ರಾತ್ರಿ ಶ್ರಮಿಸಿದೆ. ತಮ್ಮ ಪ್ರಾಣ ಪಣಕ್ಕಿಟ್ಟು ರೋಗಿಗಳ ಜೀವ ಉಳಿಸಲು ಹೋರಾಡಿದ್ದು ನೋಡಿದರೆ ಮೈ ಜುಂ ಎನ್ನುತ್ತದೆ ಎಂದು ಪ್ರಶಂಶಿಸಿದರು.
ಮಂಡ್ಯ ಅಮೃತ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ಲೋಕೇಶ್, ಗ್ರಾಮೀಣ ಭಾಗದ ಕಾಲೇಜಿನ ವಿದ್ಯಾರ್ಥಿನಿಯರು ಉತ್ತಮ ಪ್ರಬಂಧ ಬರೆದಿದ್ದಾರೆ. ೨೦ಮಂದಿ ಸ್ಪರ್ಧೆಯಲ್ಲಿ ಉತ್ತಮ ಲೇಖನಗಳನ್ನು ನೀಡಿದ್ದಾರೆ, ಆರೋಗ್ಯ ಅರಿವು-ಕಾನೂನಿನ ಅರಿವು ಅತ್ಯವಶ್ಯಕ ಎಂದರು.ವೈದ್ಯರಾದ ಡಾ.ಎನ್.ಸುದರ್ಶನ್ ಅವರನ್ನು ಗಣ್ಯರು ಅಭಿನಂದಿಸಿದರು. ಪ್ರಬಂಧ ಸ್ಪರ್ಧಾ ವಿಜೇತರು ಬಹುಮಾನ ಪಡೆದರು. ಕಾರ್ಯಕ್ರಮದಲ್ಲಿ ಕರವೇ ರಾಜ್ಯಸಮಿತಿ ಉಪಾಧ್ಯಕ್ಷ ಎಂ.ಎಸ್.ಚಿದಂಬರ್, ಪ್ರಾಂಶುಪಾಲ ಡಾ.ಕೆ.ಗುರುರಾಜ್ ಪ್ರಭು, ಸಹ ಪ್ರಾಧ್ಯಾಪಕ ಪ್ರಸನ್ನಕುಮಾರ್, ಯುವ ರೆಡ್ ಕ್ರಾಸ್ ಸಂಚಾಲಕ ಎಸ್.ನವೀನ್, ದೈಹಿಕ ಶಿಕ್ಷಣ ನಿರ್ದೇಶಕ ಕೆ.ಆರ್.ಲೋಕೇಶ್, ಗುತ್ತಲು ರೈತರ ಸೊಸೈಟಿ ಮಾಜಿ ಅಧ್ಯಕ್ಷ ಜಿ.ಎನ್.ಮಂಜುನಾಥ್, ಕೆ.ಪಿ.ರವಿಕಿರಣ್ ಮತ್ತಿತರರಿದ್ದರು.