ಬ್ಯಾಡಗಿ: ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸುರಕ್ಷಿತ ಹಾಗೂ ಗುಣಮಟ್ಟದ ಹಾಲು ವಿತರಿಸಲು ಹಾವೇಮುಲ್ ಮುಂದಾಗಿದ್ದು, ಹಾಲು ಉತ್ಪಾದಕರಿಗೆ ಸಮಗ್ರ ರೀತಿಯಲ್ಲಿ ಬೆಂಬಲಿಸುವ ಮೂಲಕ ಗ್ರಾಮೀಣ ಆರ್ಥಿಕತೆ ಸುಭದ್ರಪಡಿಸುವುದಾಗಿ ಹಾವೇಮುಲ್ ನಿರ್ದೇಶಕ ಪ್ರಕಾಶ ಬನ್ನಿಹಟ್ಟಿ ಭರವಸೆ ನೀಡಿದರು. ತಾಲೂಕಿನ ಕೊಲ್ಲಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲುದ್ದೇಶಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ರೈತರ ಕಲ್ಯಾಣಕ್ಕೆ ಬದ್ಧ: ರೈತರ ಕಲ್ಯಾಣಕ್ಕೆ ಹಾವೇಮುಲ್ ಇಂದಿಗೂ ಬದ್ಧವಾಗಿದೆ. ಹಾಲು ಉತ್ಪಾದಕರನ್ನು ಸಹಕಾರಿ ಸಂಘಗಳಾಗಿ ಸಂಘಟಿಸುವ ಮೂಲಕ ಹಾಲು ಸಂಗ್ರಹಣೆಯಲ್ಲಿ ಹೆಚ್ಚಳ ಮತ್ತು ಗುಣಮಟ್ಟದ ಹಾಲು ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ತಮ್ಮ ಹಾಲಿಗೆ ನ್ಯಾಯಸಮ್ಮತ ಬೆಲೆ, ನಿಗದಿತ ಸಮಯಕ್ಕೆ ಹಣ ಪಾವತಿ ಸೇರಿದಂತೆ ಶುದ್ಧ ಹಾಲು ಉತ್ಪಾದನೆ ಕುರಿತು ತರಬೇತಿ ನೀಡುವುದಾಗಿ ತಿಳಿಸಿದರು.ಸಹಕಾರಿ ಜಾಲ ನಿರ್ಮಾಣ: ಜಿಲ್ಲೆಯಲ್ಲಿ ಸಹಕಾರಿ ಜಾಲಗಳನ್ನು ಹೆಚ್ಚಿಸಿ ತನ್ಮೂಲಕ ಹಳ್ಳಿಗಳಿಂದ ಹಾಲು ಸಂಗ್ರಹಿಸಲಾಗುವುದು, ಜಾನುವಾರುಗಳ ಆರೈಕೆ ಜೊತೆಗೆ ಆರೋಗ್ಯ ಮತ್ತು ಸಂತಾನೋತ್ಪತ್ತಿಗಾಗಿ ವ್ಯಾಕ್ಸಿನೇಷನ್, ಕೃತಕ ಗರ್ಭಧಾರಣೆ ಮತ್ತು ತಳಿ ಸುಧಾರಣೆ ಸೇರಿದಂತೆ ಪಶು ವೈದ್ಯಕೀಯ ಸೇವೆಗಳು ನಿರಂತರ ಸಿಗುವಂತೆ ನೋಡಿಕೊಳ್ಳಲಾಗುವುದು, ಸುರಕ್ಷತಾ ಮಾನದಂಡಕ್ಕಾಗಿ ವೈಜ್ಞಾನಿಕವಾಗಿ ಹಾಲು ಪರೀಕ್ಷೆ ನಡೆಯುತ್ತದೆ, ರೈತರು ಇದನ್ನು ಪ್ರಶ್ನಿಸಿದಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ನೂತನ ನಿರ್ದೇಶಕರನ್ನು ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ವೀರೇಶ ಅಂಗಡಿ, ಸಂಘದ ಅಧ್ಯಕ್ಷ ಹರೀಶ ಅರಳಿಕಟ್ಟಿ, ಮಾಜಿ ಅಧ್ಯಕ್ಷ ಚಂದ್ರಣ್ಣ ಬ್ಯಾಡಗಿ, ರೈತ ಮುಖಂಡ ಕಿರಣ ಗಡಿಗೋಳ, ಗ್ರಾಮಸ್ಥರಾದ ಆರ್.ಎ.ಬ್ಯಾಡಗಿ, ಬಸಯ್ಯ ಹಿರೇಮಠ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಹಾಲು ಉತ್ಪಾದಕರು ಹಾಗೂ ಒಕ್ಕೂಟದ ಅಧಿಕಾರಿಗಳು ಉಪಸ್ಥಿತರಿದ್ದರು.