ಸಾರಾಂಶ
ಬಿತ್ತನೆ ಬೀಜ ಉತ್ತಮ ಗುಣಮಟ್ಟದಿಂದ ಕೂಡಿದ್ದರೆ ಬೆಳೆ ನಿರೀಕ್ಷಿತ ಮಟ್ಟದಲ್ಲಿ ಬರುತ್ತದೆ. ವಿಶ್ವಾಸಾರ್ಹ ಆಹಾರ ಉತ್ಪಾದನೆಗೆ ರೋಗಮುಕ್ತ ಬೀಜಗಳ ಅವಶ್ಯಕತೆ ಇದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ। ಎಸ್.ವಿ.ಸುರೇಶ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿತ್ತನೆ ಬೀಜ ಉತ್ತಮ ಗುಣಮಟ್ಟದಿಂದ ಕೂಡಿದ್ದರೆ ಬೆಳೆ ನಿರೀಕ್ಷಿತ ಮಟ್ಟದಲ್ಲಿ ಬರುತ್ತದೆ. ವಿಶ್ವಾಸಾರ್ಹ ಆಹಾರ ಉತ್ಪಾದನೆಗೆ ರೋಗಮುಕ್ತ ಬೀಜಗಳ ಅವಶ್ಯಕತೆ ಇದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ। ಎಸ್.ವಿ.ಸುರೇಶ ಅಭಿಪ್ರಾಯಪಟ್ಟರು.ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ‘ಬೀಜ ಆರೋಗ್ಯ ಪರೀಕ್ಷಾ ಪ್ರಯೋಗಾಲಯ’ ಉದ್ಘಾಟಿಸಿ ಮಾತನಾಡಿದ ಅವರು, ಸುಗ್ಗಿಯ ನಂತರದ ಬೀಜ ಸಂಸ್ಕರಣೆ ಮತ್ತು ಶೇಖರಣೆ ಪದ್ಧತಿಗಳು ಸಹ ಬೀಜಗಳ ಆರೋಗ್ಯ ನಿರ್ವಹಿಸಲು, ದೀರ್ಘಕಾಲೀನ ಬೆಳೆ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ನಿರ್ಣಾಯಕವಾಗಿವೆ. ಸೋಂಕಿತ ಬೀಜಗಳು ಮುಂದಿನ ಹಂಗಾಮಿಗೆ ರೋಗಾಣುವಿನ ಮೂಲ ಸೋಂಕಾಗಿ ವಿವಿಧ ಸ್ಥಳಗಳಲ್ಲಿ ರೋಗ ತರುತ್ತವೆ. ಜೊತೆಗೆ ಮಾನವ ಮತ್ತು ಪ್ರಾಣಿಗಳ ಆಹಾರಗಳಲ್ಲಿ ಬೆರೆತು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದರು.
ಬೀಜ ಮತ್ತು ಸಸ್ಯ ಆರೋಗ್ಯ ಪರೀಕ್ಷಾ ಸೇವೆಗಳನ್ನು ಸಾರ್ವಜನಿಕ ಮತ್ತು ಖಾಸಗಿ ಬೀಜಗಳ ಉತ್ಪಾದನಾ ಉದ್ಯಮ, ಸಂಸ್ಥೆಗಳಿಗೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಸಂಶೋಧನೆಯ ಫಲಶೃತಿಯನ್ನು ರೈತರಿಗೆ ವಿಸ್ತರಿಸಲು ಸಾರ್ವಜನಿಕ ಸಹಭಾಗಿತ್ವ ಯೋಜನೆಯಡಿ ಮತ್ತಷ್ಟು ವಿಸ್ತರಿಸಲಾಗುವುದು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ‘ಬೀಜ ಆರೋಗ್ಯ ಪರೀಕ್ಷೆ ಕುರಿತ’ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು. 30ಕ್ಕೂ ಹೆಚ್ಚು ಬೀಜ ಉದ್ಯಮದಾರರೊಂದಿಗೆ ಸಂವಾದ ನಡೆಸಲಾಯಿತು. ವಿವಿ ಶಿಕ್ಷಣ ನಿರ್ದೇಶಕ ಡಾ। ಕೆ.ಸಿ.ನಾರಾಯಣಸ್ವಾಮಿ, ಕುಲಸಚಿವ ಡಾ। ಬಸವೇಗೌಡ, ಕೃಷಿ ವಿಭಾಗದ ಮುಖ್ಯಸ್ಥ ಡಾ। ಎನ್.ಬಿ.ಪ್ರಕಾಶ್, ಸಂಶೋಧನಾ ನಿರ್ದೇಶಕ ಡಾ। ವೆಂಕಟೇಶ್ ಉಪಸ್ಥಿತರಿದ್ದರು.