ಸಾರಾಂಶ
ಮುಂಗಾರು ಹಂಗಾಮು ಪ್ರಾರಂಭವಾಗುತ್ತಿದ್ದು ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರವನ್ನು ತೊಂದರೆಯಾಗದಂತೆ ವಿತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಕುಷ್ಟಗಿ:
ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರ, ಕೀಟನಾಶಕ ಮಾರಾಟ ಮಾಡಬೇಕು ಹಾಗೂ ರೈತರಿಂದ ಹೆಚ್ಚಿನ ದರ ವಸೂಲಿ ಮಾಡಿ ಶೋಷಣೆ ಮಾಡಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಕಾತರಕಿ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದರು.ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಹಮ್ಮಿಕೊಂಡ ಕೃಷಿ ಪರಿಕರಗಳ ಮಾರಾಟಗಾರರ ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂಗಾರು ಹಂಗಾಮು ಪ್ರಾರಂಭವಾಗುತ್ತಿದ್ದು ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರವನ್ನು ತೊಂದರೆಯಾಗದಂತೆ ವಿತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ಬಿತ್ತನೆ ಸಮಯದಲ್ಲಿ ರೈತರಿಗೆ ಬೀಜೋಪಚಾರದ ಬಗ್ಗೆ ಅರಿವು ಮೂಡಿಸಿ, ಬಿತ್ತುವ ಬೀಜವನ್ನು ಬೀಜೋಪಚಾರ ಮಾಡಿಯೇ ಬಿತ್ತನೆ ಮಾಡುವಂತೆ ಮಾಹಿತಿ ನೀಡಬೇಕು. ಯೂರಿಯಾ ಗೊಬ್ಬರ ಕೃತಕ ಅಭಾವ ಸೃಷ್ಟಿಸಿ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದರೆ ಕ್ರಮಕೈಗೊಳ್ಳಲಾಗುವುದು ಎಂದರು
ಸರ್ಕಾರದ ಯೋಜನೆಗಳು ಸದ್ಬಳಕೆಯಾಗಬೇಕಾದರೆ ಕೃಷಿ ಪರಿಕರಗಳು ಗುಣಮಟ್ಟದಿಂದ ಕೂಡಿರಬೇಕು, ಗುಣಮಟ್ಟದ ಕೃಷಿ ಪರಿಕರಗಳ ಮಾರಾಟ ಮಾಡಿದರೆ ಇಳುವರಿ ಹೆಚ್ಚಾಗಿ ರೈತರು ಆರ್ಥಿಕ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ. ರೈತರು ಅಭಿವೃದ್ಧಿ ಆದರೆ ದೇಶದ ಅಭಿವೃದ್ಧಿಯಾದಂತೆ ಎಂದು ಹೇಳಿದರು.ಸಹಾಯಕ ಕೃಷಿ ನಿರ್ದೇಶಕ ಸುನೀಲಕುಮಾರ ಮಾತನಾಡಿ, ರಸಗೊಬ್ಬರ ಕೃತಕ ಅಭಾವ, ಕಾಳಸಂತೆ, ಅನಧೀಕೃತ ಗೋದಾಮುಗಳಲ್ಲಿ ದಾಸ್ತಾನು ಮಾಡಿ ಮಾರಾಟ ಮಾಡುವುದು ಹಾಗೂ ಕಳಪೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅವಧಿ ಮುಗಿದ ಔಷಧ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ. ರಸಗೊಬ್ಬರ, ಕೀಟನಾಶಕ ನಿಗದಿಪಡಿಸಿದ ದರದಲ್ಲಿ ಮಾರಾಟ ಮಾಡಬೇಕು. ಯಾವುದೇ ಕೃಷಿ ಪರಿಕರ ಮಾರಾಟ ಮಾಡಬೇಕಾದರೆ ಕೃಷಿ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳಬೇಕು. ಪರವಾನಗಿ ಎಲ್ಲರಿಗೂ ಕಾಣುವಂತೆ ಅಂಗಡಿಯಲ್ಲಿ ಹಾಕಬೇಕು ಎಂದು ತಿಳಿಸಿದರು.ಕೃಷಿ ಪರಿಕರ ಸಂಘದ ಅಧ್ಯಕ್ಷ ಬಸೆಟ್ಟೆಪ್ಪ ಕುಂಬಳಾವತಿ ಮಾತನಾಡಿ, ರೈತರಿಗೆ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದೆಂದು ಭರವಸೆ ನೀಡಿದರು.
ಸಭೆಯಲ್ಲಿ ತಾಂತ್ರಿಕ ಅಧಿಕಾರಿ ರಾಜಶೇಖರ, ಹನಮಸಾಗರ ಕೃಷಿ ಅಧಿಕಾರಿ ಆಕಾಶ ದಾನಿ, ತಾವರಗೇರ ಕೃಷಿ ಅಧಿಕಾರಿಯಾದ ಆಶಾ ರಾಠೋಡ, ಕೃಷಿ ಪರಿಕರ ಮಾರಾಟಗಾರರು, ಪ್ರಾಥಮಿಕ ಕೃಷಿ ಪತ್ತಿನ ಸಂಘದ ಕಾರ್ಯದರ್ಶಿಗಳು ಇದ್ದರು.