ಸಾರಾಂಶ
ಕಾಪು: ೧೬ನೇ ಶತಮಾನದಲ್ಲಿ ಕರಾವಳಿಯ ತುಳುನಾಡನ್ನು ಆಳಿದ, ಪೋರ್ಚುಗೀಸ್ ವಸಾಹತುಶಾಹಿಯ ವಿರುದ್ಧ ಹೋರಾಡಿದ ಧೀರ ಮಹಿಳೆ ಉಳ್ಳಾಲದ ರಾಣಿ ಅಬ್ಬಕ್ಕ, ಅಚಲವಾದ ದೇಶಭಕ್ತಿ, ಮಹಿಳಾ ಜಾಗೃತಿ, ಸ್ತ್ರೀಸಬಲೀಕರಣಕ್ಕೆ ಪ್ರತೀಕ ಎಂದು ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರಜ್ಞಾ ಮಾರ್ಪಳ್ಳಿ ಹೇಳಿದರು.ಅವರು ಇಲ್ಲಿನ ಶಿರ್ವದ ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗ ಮತ್ತು ಕಾಲೇಜಿನ ಸಾಹಿತ್ಯ ಸಂಘ ಹಾಗೂ ಮಾನವಿಕ ಸಂಘಗಳ ಆಶ್ರಯದಲ್ಲಿ ಏರ್ಪಡಿಸಿದ ‘ಅಬ್ಬಕ್ಕ - ೫೦೦ ಪ್ರೇರಣಾದಾಯಿ ಉಪನ್ಯಾಸ ಸರಣಿ -೨೭’ ಕಾರ್ಯಕ್ರಮದಲ್ಲಿ ಮಾತನಾಡಿದರು.ರಾಣಿ ಅಬ್ಬಕ್ಕರ ೫೦೦ನೇ ಜನುಮದಿನದ ವರ್ಷಾಚರಣೆಯ ಈ ಶುಭಾವಸರದಲ್ಲಿ ಮಹಿಳೆಯರಲ್ಲಿ ಆತ್ಮಾಭಿಮಾನ, ದೌರ್ಜನ್ಯ ತಡೆಗಟ್ಟಲು ಅಬ್ಬಕ್ಕನ ಜೀವನ ಪ್ರೇರಣೆ ಆಗಬೇಕು ಎಂದರು.ಕಾರ್ಯಕ್ರಮವನ್ನು ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಉದ್ಘಾಟಿಸಿ, ರಾಣಿ ಅಬ್ಬಕ್ಕಳಂತಹ ಮಹಾಪುರುಷರ, ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಮಕ್ಕಳಲ್ಲಿ ಕಥೆಗಳ ರೂಪದಲ್ಲಿ ತಿಳಿಸಿ, ಈ ಮೂಲಕ ಭವಿಷ್ಯದ ಭಾರತವನ್ನು ಕಟ್ಟಲು ಪ್ರೇರಣೆ ನೀಡಬೇಕು ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಮಿಥುನ್ ಚಕ್ರವರ್ತಿ ವಹಿಸಿದ್ದರು. ನಿಟ್ಟೆ ಎನ್‌ಎಂಎಎಂಐಟಿ ಪ್ರಾಧ್ಯಾಪಕ ಡಾ.ಸುರೇಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಆರ್‌ಎಂಎಸ್ ಆಯೋಜಕ ಡಾ.ಭೈರವಿ ಪಾಂಡ್ಯ ನಿರೂಪಿಸಿ, ಸ್ವಾಗತಿಸಿದರು. ಇತಿಹಾಸ ಮತ್ತು ಪುರಾತತ್ವ ವಿಭಾಗದ ಉಪನ್ಯಾಸಕಿ ಪ್ರಶಾಂತಿ, ಕನ್ನಡ ವಿಭಾಗದ ವರಮಹಾಲಕ್ಷ್ಮೀ ವಂದಿಸಿದರು.