ರಾಣಿ ಶುಗರ್ಸ್‌ ಅಭಿವೃದ್ಧಿಪಡಿಸಿ ರಾಣಿಯಂತೆ ಮೆರೆಸಲು ಶ್ರಮ

| Published : Oct 31 2025, 03:30 AM IST

ಸಾರಾಂಶ

ರಾಣಿ ಶುಗರ್ಸ್‌ ಕೇವಲ ಹೆಸರಿನಲ್ಲಿರಬಾರದು, ಅದು ರಾಣಿಯಂತೆಯೇ ಮೆರೆಯಬೇಕು. ಇದನ್ನು ಅಭಿವೃದ್ಧಿಪಡಿಸಿ ರಾಣಿಯಂತೆ ಮೆರೆಸಲು ಶ್ರಮಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ರಾಣಿ ಶುಗರ್ಸ್‌ ಕೇವಲ ಹೆಸರಿನಲ್ಲಿರಬಾರದು, ಅದು ರಾಣಿಯಂತೆಯೇ ಮೆರೆಯಬೇಕು. ಇದನ್ನು ಅಭಿವೃದ್ಧಿಪಡಿಸಿ ರಾಣಿಯಂತೆ ಮೆರೆಸಲು ಶ್ರಮಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಭರವಸೆ ನೀಡಿದರು.

ತಾಲೂಕಿನ ಎಂ.ಕೆ.ಹುಬ್ಬಳ್ಳಿ ಬಳಿವಿರುವ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಗತವೈಭವವನ್ನು ಮತ್ತೆ ಮರುಕಳಿಸುವಂತೆ ಶ್ರಮಿಸಲಾಗುವುದು. ಅಧಿಕಾರ ಗಳಿಸುವುದು ಮುಖ್ಯವಲ್ಲ, ರೈತರಿಗೆ ಅನುಕೂಲಕರ ರೀತಿಯಲ್ಲಿ ಆಡಳಿತ ನಡೆಸಬೇಕು. ಕಾರ್ಮಿಕರಿಗೆ ಬೊನಸ್ ಸೇರಿದಂತೆ ಸೌಲಭ್ಯ ಒದಗಿಸುವುದು, ಷೇರುದಾರರಿಗೆ ರಿಯಾಯತಿ ದರದಲ್ಲಿ ಸಕ್ಕರೆ ವಿತರಿಸುವುದು ಪ್ರಮುಖವಾಗಿದೆ ಎಂದು ತಿಳಿಸಿದರು.ಅತ್ಯಂತ ಹಳೆಯದಾದ, ಹಿರಿಯಣ್ಣನ ರೀತಿಯಲ್ಲಿರುವ 4 ತಾಲೂಕುಗಳ ರೈತರ ಜೀವನಾಡಿಯಾಗಿರುವ ಮಲಪ್ರಭಾ ಸಕ್ಕರೆ ಕಾರ್ಖಾನೆಗೆ ಪುನಶ್ಚೇತನ ನೀಡಿ, ರೈತರ ಮುಖದಲ್ಲಿ ಮಂದಹಾಸ ಮೂಡಿಸುವುದು ನಮ್ಮ ಗುರಿ. ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಮೊದಲ ಕಬ್ಬು ನುರಿಸುವ ಹಂಗಾಮಿಗೆ ಇಂದು ಪೂಜೆ ನೆರವೇರಿಸಲಾಗಿದೆ. ಈ ವರ್ಷ 4 ಲಕ್ಷ ಟನ್ ಮೆಟ್ರಿಕ್ ಟನ್ ಕಬ್ಬು ನುರಿಸಿ, ಕಾರ್ಖಾನೆ ಅಭಿವೃದ್ಧಿ ಮೂಲಕ ಮುಂದಿನ ಸಾಲಿನಿಂದ ಕಾರ್ಮಿಕರಿಗೆ ದೀಪಾವಳಿ ಬೋನಸ್ ಮತ್ತು ಶೇರುದಾರರಿಗೆ ರಿಯಾಯತಿ ದರದಲ್ಲಿ ಸಕ್ಕರೆ ನೀಡಬೇಕು ಎಂದು ಸೂಚಿಸಿದರು.ಅಧಿಕಾರದಿಂದ ಎಷ್ಟು ಜನರ ಕಣ್ಣೀರು ಒರೆಸಿದ್ದೀರಿ ಎನ್ನುವುದು ಬಹಳ ಮುಖ್ಯ. ಮಲಪ್ರಭಾ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಿ ಈಗ ಐದೂವರೆ ದಶಕಗಳಾಗಿವೆ. ನಮ್ಮ ಕುಟುಂಬದ ಹಿರಿಯರೂ ಸೇರಿದಂತೆ ಈ ಭಾಗದ ಅನೇಕ ಮುಖಂಡರ ದೂರದೃಷ್ಟಿಯ ಫಲವಾಗಿ ತಲೆ ಎತ್ತಿರುವ ಕಾರ್ಖಾನೆ ಇದು. ಕಾರ್ಖಾನೆಯನ್ನು ಮತ್ತೊಮ್ಮೆ ಉತ್ತುಂಗಕ್ಕೇರಿಸಿ ಈ ಭಾಗದ ರೈತರ ಬಾಳನ್ನು ಹಸನಾಗಿಸುವ ಜವಾಬ್ದಾರಿ ಹೊಸ ಆಡಳಿತ ಮಂಡಳಿಯ ಹೆಗಲಿಗೆ ಬಂದಿದೆ ಎಂದರು.ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಚನ್ನರಾಜ ಹಟ್ಟಿಹೊಳಿ ಕಾರ್ಖಾನೆ ನಡೆಸಿದ ಅನುಭವ ಹೊಂದಿದ್ದಾರೆ. ಈ ಕಾರ್ಖಾನೆಯನ್ನು ಉತ್ತಮವಾಗಿ ಮುನ್ನಡೆಸುವ ವಿಶ್ವಾಸವಿದೆ. ಎಲ್ಲರೂ ಜೊತೆಯಲ್ಲಿ ಕೂಡಿಕೊಂಡು ಕೆಲಸ ಮಾಡೋಣ, ಗತವೈಭವ ಮರುಕಳಿಸುವಂತೆ ಮಾಡೋಣ ಎಂದರು.ಕಾರ್ಖಾನೆಯ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಎಲ್ಲರ ಸಲಹೆ ತೆಗೆದುಕೊಂಡು ಕೆಲಸ ಮಾಡುತ್ತೇವೆ. ಕಾರ್ಖಾನೆಯನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತೇವೆ. ರೈತರು ನಿರಂತರ ಪ್ರೀತಿ ತೋರಿಸುತ್ತ ಬಂದಿದ್ದಾರೆ. ಬೇರೆ ಕಾರ್ಖಾನೆಗಳ ಜೊತೆಯಲ್ಲೇ ಇಲ್ಲೂ ಕಬ್ಬು ನುರಿಸಲು ನಮ್ಮ ಕಾರ್ಖಾನೆ ಸಿದ್ಧವಾಗಿದೆ ಎಂದು ತಿಳಿಸಿದರು.ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ಬೆಳಗಾವಿ ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮಿಗಳು, ಕಾದರವಳ್ಳಿ ಸೀಮೀಮಠದ ಡಾ.ಪಾಲಾಕ್ಷ ಶಿವಯೋಗಿಶ್ವರ ಸ್ವಾಮೀಜಿ, ಶ್ರೀರಾಮ ಮಂದಿರದ ಗುರುಪುತ್ರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.ಕಾರ್ಖಾನೆಯ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಮೋಹನ ಹಿರೇಮಠ, ನಿರ್ದೇಶಕ ಶಂಕರ ಹೊಳಿ, ಕಾಡಾ ಅಧ್ಯಕ್ಷ ಯುವರಾಜ ಕದಂ, ಶಂಕರಗೌಡ ಪಾಟೀಲ, ಬಸವರಾಜ ಸಾಣಿಕೊಪ್ಪ, ಸುರೇಶ ಇಟಗಿ ಹಾಗೂ ರೈತರು, ಕಾರ್ಮಿಕರು, ನೌಕರರು ಇದ್ದರು.ನಾನು ಮತ್ತು ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಠ್ಠಲ ಹಲಗೇಕರ, ಕಾರ್ಖಾನೆ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ಸರ್ಕಾರದ ಭಾಗವಾಗಿದ್ದೇವೆ. ನಾವೆಲ್ಲ ಸೇರಿ ಸರ್ಕಾರದ ನೆರವನ್ನು ತರುವ ಕೆಲಸವನ್ನು ಮಾಡುತ್ತೇವೆ. ರೈತರ ಕಬ್ಬಿಗೆ ಸಕಾಲಕ್ಕೆ ಯೋಗ್ಯವಾದ ದರವನ್ನು ಪಾವತಿ ಮಾಡುವ ಜೊತೆಗೆ ಮುಂದಿನ ದಿನಗಳಲ್ಲಿ ಕಾರ್ಖಾನೆಯ ಶ್ರೇಯೋಭಿವೃದ್ಧಿಗಾಗಿ ಆಡಳಿತ ಮಂಡಳಿಗೆ ರೈತರ, ಕಾರ್ಮಿಕರು ಸಹಕಾರ ನೀಡಬೇಕು. ಸಂಪೂರ್ಣ ಕಬ್ಬನ್ನು ಮಲಪ್ರಭಾ ಕಾರ್ಖಾನೆಗೆ ಕಳಿಸಬೇಕು. ನಾವು ನಮ್ಮ ಕುಟುಂಬದ 1200 ಟನ್ ಕಬ್ಬನ್ನು ಇದೇ ಕಾರ್ಖಾನೆಗೆ ಹಾಕುತ್ತೇವೆ. ಯಾವುದೇ ವದಂತಿಗಳಿಗೆ ಕಿವಿಗೊಡದೆ ತಾಳ್ಮೆಯಿಂದ ಎಲ್ಲರೂ ಕಾರ್ಖಾನೆಯ ಒಳಿತಿಗಾಗಿ, ಗತವೈಭವ ಮರುಕಳಿಸುವುದಕ್ಕಾಗಿ ಸಹಕಾರ ನೀಡಬೇಕು.

-ಲಕ್ಷ್ಮೀ ಹೆಬ್ಬಾಳಕರ್, ಸಚಿವೆ.

ಕಾರ್ಖಾನೆ ಹೆಚ್ಚು ಕಬ್ಬು ನುರಿಸಿದಾಗ ಮಾತ್ರ, ಬೋನಸ್ ಹಾಗೂ ರಿಯಾಯತಿ ದರದಲ್ಲಿ ಸಕ್ಕರೆ ನೀಡಲು ಸಾಧ್ಯ. ಹಾಗಾಗಿ ಈ ಹಂಗಾಮಿನಲ್ಲಿ 4 ಲಕ್ಷ ಟನ್ ಮೆಟ್ರಿಕ್ ಟನ್ ಕಬ್ಬು ನುರಿಸಲು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಬೇಕು.

-ಬಾಬಾಸಾಹೇಬ ಪಾಟೀಲ, ಕಿತ್ತೂರು ಶಾಸಕರು.

ಕಾರ್ಮಿಕರು ಹಾಗೂ ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು. ಸವಾಲಾಗಿ ಸ್ವೀಕರಿಸಿ ಸುಧಾರಣೆ ಮಾಡುತ್ತೇವೆ. ಕಾರ್ಮಿಕರ ಕ್ವಾಟರ್ಸ್ ದುರಸ್ತಿ ಮಾಡಲು ಹಣ ಮೀಸಲಿಡುತ್ತೇವೆ. ರೈತರು, ಕಾರ್ಮಿಕರ ಒಳಿತಿಗಾಗಿ ಶ್ರಮವಹಿಸಿ ಕೆಲಸ ಮಾಡಲಿದ್ದೇವೆ.

-ಚನ್ನರಾಜ ಹಟ್ಟಿಹೊಳಿ, ಕಾರ್ಖಾನೆಯ ಅಧ್ಯಕ್ಷರು.