ಏಕಪಕ್ಷೀಯ ನಿರ್ಧಾರ ಪ್ರಶ್ನಿಸಿದ್ದೇ ಹಲ್ಲೆಗೆ ಕಾರಣ: ಕಾಂಗ್ರೆಸ್ ಕಾರ್ಯದರ್ಶಿ ಶಿವಕುಮಾರ್‌ ಆರೋಪ

| Published : Feb 15 2024, 01:16 AM IST

ಏಕಪಕ್ಷೀಯ ನಿರ್ಧಾರ ಪ್ರಶ್ನಿಸಿದ್ದೇ ಹಲ್ಲೆಗೆ ಕಾರಣ: ಕಾಂಗ್ರೆಸ್ ಕಾರ್ಯದರ್ಶಿ ಶಿವಕುಮಾರ್‌ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಲಕ್ಷ್ಮೀನಾರಾಯಣ ಮತ್ತು ಜಿಲ್ಲಾ ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್‌ರಿಗೆ ಅಧಿಕಾರ ಕೊಟ್ಟಾಗನಿಂದಲೂ ಪಕ್ಷದಲ್ಲಿ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಕನ್ನಡಪ್ರಭ ವಾರ್ತೆ ಕೋಲಾರ

ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಶಿಷ್ಟಾಚಾರ ಎಂಬ ಪದದ ಅರ್ಥವೇ ಗೊತ್ತಿಲ್ಲದ ರೀತಿ ಅಧ್ಯಕ್ಷ ಲಕ್ಷ್ಮೀ ನಾರಾಯಣ್ ಮತ್ತು ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್ ನಡೆದುಕೊಂಡಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ ಅವರು ಅದನ್ನು ಕೇಳಲಿಕ್ಕೆ ನೀನ್ಯಾರು? ಎಂದು ಏರುಧ್ವನಿಯಲ್ಲಿ ಜೋರು ಮಾಡಿದ್ದಲ್ಲದೇ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ವೈ. ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ರಾಜ್ಯ ಉಸ್ತುವಾರಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಗಲಾಟೆಗೆ ಸಂಬಂಧಿಸಿದಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಲಕ್ಷ್ಮೀನಾರಾಯಣ ಮತ್ತು ಜಿಲ್ಲಾ ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್‌ರಿಗೆ ಅಧಿಕಾರ ಕೊಟ್ಟಾಗನಿಂದಲೂ ಪಕ್ಷದಲ್ಲಿ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಮಂಗಳವಾರದ ಸಭೆಯ ವೇದಿಕೆಯ ಬ್ಯಾನರ್‌ನಲ್ಲಿ ಜಿಲ್ಲೆಯಲ್ಲಿರುವ ಕಾಂಗ್ರೆಸ್ ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್, ರೂಪಕಲಾ ಶಶಿಧರ್, ಎಂಎಲ್ಸಿಗಳಾದ ನಸೀರ್ ಅಹಮದ್, ಎಂ.ಎಲ್. ಅನಿಲ್ ಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ ರವರ ಪೋಟೋ ಕೂಡ ಹಾಕಿಲ್ಲ. ಯಾಕೆ ಹಾಕಿಲ್ಲ ಎಂದು ಅವರನ್ನು ಪ್ರಶ್ನೆ ಮಾಡಿದಾಗ ಹಲ್ಲೆಗೆ ಮುಂದಾದರು ಎಂದು ತಿಳಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸದೇ ಜೆಡಿಎಸ್ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದರು.ಅಂತವರಿಗೆ ಜಿಲ್ಲಾ ಕಾಂಗ್ರೆಸ್ ಪಕ್ಷ ಮೊದಲ ಆದ್ಯತೆ ನೀಡಿದ್ದಾರೆ. ಇದು ಯಾವ ನ್ಯಾಯ ಸ್ವಾಮಿ? ಯಾವುದೇ ಸ್ಥಾನಮಾನವಿಲ್ಲದಿದ್ದರೂ ಪಕ್ಷಕ್ಕೆ ದುಡಿಯುತ್ತಿರುವ ನಿಷ್ಠಾವಂತ ಕಾರ್ಯಕರ್ತರಿಗೆಬೆಲೆಯಿಲ್ಲದಂತಾಗಿದೆ ಎಂದರು.

ಕಾಂಗ್ರೆಸ್ ಪಕ್ಷದ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ತಾರತಮ್ಯ ಮಾಡುತ್ತಿದ್ದಾರೆ, ನಮ್ಮಂತಹ ನಿಷ್ಠಾವಂತ ಕಾರ್ಯಕರ್ತರಲ್ಲಿ ಯಾವುದೇ ಬಣವಿಲ್ಲ, ಇರೋದು ಒಂದೇ ಬಣ, ಅದು ಕಾಂಗ್ರೆಸ್ ಬಣವೆಂದುಕೊಂಡು ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ವಿದ್ಯಾರ್ಥಿ ದೆಸೆಯಿಂದಲೂ ಎನ್‌ಎಸ್‌ಯುಐ, ಯುವ ಕಾಂಗ್ರೆಸ್, ಸೇರಿ ಇವತ್ತು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡಿದ್ದೇನೆ, ಕಾಂಗ್ರೆಸ್ ಸರಕಾರವಿದ್ದರೂ, ಇಲ್ಲದಿದ್ದರೂ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ, ಜಿಲ್ಲೆಯಲ್ಲಿ ಯಾವುದೇ ಕಾಂಗ್ರೆಸ್ ಕಾರ್ಯಕ್ರಮ ನಡೆದರೂ ನಮ್ಮನ್ನು ಕರೆಯುವುದಿಲ್ಲ, ಮಂಗಳವಾರದ ಕಾರ್ಯಕ್ರಮದ ಗಲಾಟೆ ಸೇರಿ ಶಿಷ್ಟಾಚಾರ ಪಾಲನೆಯ ಸಂಪೂರ್ಣ ಹೊಣೆಯನ್ನು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷ ಹೊರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.