ಸಾರಾಂಶ
ರಬಕವಿ-ಬನಹಟ್ಟಿ : ಖಾಸಗಿ ಶಾಲೆಯಲ್ಲಿ ಮಕ್ಕಳ ಪ್ರವೇಶಕ್ಕಾಗಿ ಪಾಲಕರು ಶಾಲೆ ಮುಂದೆ ಕ್ಯೂ ನಿಂತಿರುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಸರ್ಕಾರಿ ಶಾಲೆಯಲ್ಲೂ ಮಕ್ಕಳ ದಾಖಲಾತಿಗಾಗಿ ಪೋಷಕರು ರಾತ್ರಿಯೇ ಶಾಲೆ ಮುಂದೆ ಸಾಲುಗಟ್ಟಿ ನಿಂತಿದ್ದು ವಿಶೇಷ.
ಹೌದು, ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಪೂರ್ವ ಪ್ರಾಥಮಿಕ ವಿಭಾಗದ ಆಂಗ್ಲ ಮಾಧ್ಯಮ) ಸರ್ಕಾರಿ ಶಾಲೆಯಾಗಿದ್ದರೂ ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲ ಎಂಬಂತೆ ಶಿಕ್ಷಣ ನೀಡುತ್ತಿದೆ. ಹೀಗಾಗಿ ಈ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಈ ಬಾರಿ ರಾತ್ರಿಯೇ ಶಾಲೆಯ ಮುಂದೆ ಕ್ಯೂ ನಿಂತಿದ್ದಾರೆ.
ಸರ್ಕಾರದ ನಿಯಮದ ಪ್ರಕಾರ ಆಂಗ್ಲ ಮಾಧ್ಯಮದಲ್ಲಿ 30 ಸೀಟುಗಳ ಭರ್ತಿಗೆ ಮಾತ್ರ ಅವಕಾಶವಿದೆ. ಬೇಡಿಕೆ ಹೆಚ್ಚಿದ್ದು ಸೀಟು ಕಡಿಮೆ ಇರುವುದರಿಂದ ಮೊದಲು ಬಂದವರಿಗೆ ಮೊದಲ ಅವಕಾಶ ಎಂಬಂತೆ ಇಲ್ಲಿ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ. ಹೀಗಾಗಿ ಈ ಶಾಲೆಗೆ ಮಕ್ಕಳನ್ನು ಸೇರಿಸಲು ಗ್ರಾಮೀಣ ಭಾಗದ ಪೋಷಕರು ಉತ್ಸಾಹ ತೋರಿಸುತ್ತಿದ್ದಾರೆ. ಎಂಟು ವರ್ಷಗಳ ಹಿಂದೆ ಆರಂಭವಾದ ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.