ಸಾರಾಂಶ
ಮಲ್ಪೆ ತೊಟ್ಟಂನ ಶ್ರೀ ಮಂಜುನಾಥೇಶ್ವರ ಕುಣಿತ ಭಜನಾ ತಂಡದ ವತಿಯಿಂದ ಹಮ್ಮಿಕೊಂಡ ಕುಣಿತ ಭಜನೆಯ ಸಮಾರೋಪ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಿತು. ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ದಾಸರು ಹೇಳಿದಂತೆ ಕುಳಿತು ಪಾಡಲು ನಿಲುವ, ನಿಂತರೆ ನಲಿವ, ನಲಿದರೆ ನಿಮಗೆ ಒಲಿವೆನೆಂಬ ಮಾತಿನಂತೆ ಕುಣಿತ ಭಜನೆಯಿಂದ ಭಗವಂತನ ಅನುಗ್ರಹ ಶೀಘ್ರ ಪ್ರಾಪ್ತಿಯಾಗುತ್ತದೆ. ಮುಂದಿನ ದಿನಗಳಲ್ಲಿ ಜಾನಪದ ಪರಿಷತ್ ವತಿಯಿಂದಲೂ ಕುಣಿತ ಭಜನೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಅವರು ಶುಕ್ರವಾರ ಮಲ್ಪೆ ತೊಟ್ಟಂನ ಶ್ರೀ ಮಂಜುನಾಥೇಶ್ವರ ಕುಣಿತ ಭಜನಾ ತಂಡದ ವತಿಯಿಂದ ಹಮ್ಮಿಕೊಂಡ ಕುಣಿತ ಭಜನಾ ಸಮಾರೋಪ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹಿಂದೆ ಮನೆಮನೆಯಲ್ಲಿ ನಡೆಯುತ್ತಿದ್ದ ಭಜನೆ ಅನೇಕ ಕಾರಣಗಳಿಂದಾಗಿ ಮರೆಯಾಗುತ್ತಿದೆ. ಆದರೆ ಉತ್ಸಾಹಿ ತಂಡಗಳಿಂದ ಕುಣಿತ ಭಜನೆಗೆ ಪ್ರೋತ್ಸಾಹ ಸಿಗುತ್ತಿರುವುದು ಸಂತೋಷದ ವಿಚಾರ. ಜಾನಪದ ಪರಿಷತ್ತಿನ ಆಶ್ರಯದಲ್ಲಿ ೧೫ಕ್ಕೂ ಅಧಿಕ ಕಡೆಗಳಲ್ಲಿ ಕುಣಿತ ಭಜನಾ ಕಾರ್ಯಕ್ರಮವನ್ನು ಮಾಡಲಾಗಿದೆ. ಭಜನೆಯಿಂದ ಏನು ಸಿಗುತ್ತದೆ ಎಂದು ಕೇಳಿದರೆ, ಯಕ್ಷಗಾನದಂತೆ ಕುಣಿತ ಭಜನೆಯಿಂದ ಆರೋಗ್ಯ ಭಾಗ್ಯದ ಜೊತೆಗೆ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ ಎಂದ ಅವರು, ಪ್ರತೀ ನಿತ್ಯ ಭಜನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ಜಾನಪದ ಪರಿಷತ್ತು ಮುಂದಿನ ದಿನಗಳಲ್ಲಿ ಕುಣಿತ ಭಜನೆಗೆ ಹೆಚ್ಚಿನ ಒತ್ತು ನೀಡಲಿದೆ ಎಂದು ಹೇಳಿದರು.ಈ ಸಂದರ್ಭ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಭಜನಾ ತರಬೇತುದಾರ ಶಂಕರದಾಸ್ ಚೆಂಡ್ಕಳ ಅವರನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮಹಾಲಿಂಗ ಕೋಟ್ಯಾನ್, ಉದ್ಯಮಿ ಶಾನ್‌ರಾಜ್ ತೊಟ್ಟಂ, ನಗರಸಭೆ ಸದಸ್ಯ ಯೋಗೀಶ್ ಸಾಲ್ಯಾನ್, ಪ್ರಮುಖರಾದ ಸಂಕಿ ತೊಟ್ಟಂ, ಪ್ರಶಾಂತ್ ಸಾಲ್ಯಾನ್, ಮಹೇಶ್ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು.