ಸಾರಾಂಶ
ಕನ್ನಡಪ್ರಭ ವಾರ್ತೆ ಸಿರಿಗೆರೆಬರುವ ಶೈಕ್ಷಣಿಕ ವರ್ಷದಿಂದ ಸಿರಿಗೆರೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ವಿಭಾಗವನ್ನು ತೆರೆಯಲಾಗುವುದು ಎಂದು ಚಿತ್ರದುರ್ಗದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಹೇಳಿದರು.ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪೋಷಕರು ಇಂಗ್ಲಿಷ್ ಮಾಧ್ಯಮ ವಿಭಾಗಕ್ಕೆ ಬೇಡಿಕೆ ಇಟ್ಟಿದ್ದಾರೆ. ಇಲಾಖೆಯು ಈ ಬಗ್ಗೆ ಚಿಂತನ ನಡೆಸಿ ಸಿರಿಗೆರೆಯ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ವಿಭಾಗ ವನ್ನು ಆರಂಭಿಸಲು ಅನುಮತಿ ಕೋರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ ಎಂದರು.
ಸಿರಿಗೆರೆಯಲ್ಲಿ ನಡೆಯುತ್ತಿರುವ ಎರಡು ಸರ್ಕಾರಿ ಶಾಲೆಗಳ ಮಕ್ಕಳ ಬೌದ್ಧಿಕ ಗುಣಮಟ್ಟ ಚೆನ್ನಾಗಿದೆ. ಹಲವು ಸ್ಪರ್ಧೆಗಳಲ್ಲಿ ಅವರು ತಮ್ಮ ಪ್ರತಿಭೆಯನ್ನು ತೋರಿ ಸುತ್ತಿದ್ದಾರೆ. ಇದು ಇಲಾಖೆಯಲ್ಲಿ ಕೆಲಸ ಮಾಡುವ ಎಲ್ಲರಿಗೂ ಸಂತೋಷದ ವಿಷಯ ಎಂದರು.ವಿದ್ಯಾಕಾಶಿಯಂತಿರುವ ಸಿರಿಗೆರೆಯಲ್ಲಿನ ಎರಡೂ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅವುಗಳನ್ನು ಅಭಿವೃದ್ಧಿ ಮಾಡಲಾಗುವುದು. ಮೂಲ ಭೂತ ಸೌಕರ್ಯ ಅಭಿವೃದ್ಧಿಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಗ್ರಾಮ ಪಂಚಾಯ್ತಿ ಸದಸ್ಯ ಎಂ.ಜಿ.ದೇವರಾಜ್ ೧೯೩೮ರಲ್ಲಿ ತರಳಬಾಳು ಮಠದ ಗುರುಶಾಂತರಾಜ ದೇಶಿಕೇಂದ್ರ ಸ್ವಾಮೀಜಿ ಈ ಶಾಲೆ ನಿರ್ಮಾಣ ಮಾಡಿದರು. ಇಲ್ಲಿ ಕಲಿಯುವ ಮಕ್ಕಳ ಸಂಖ್ಯೆ ೨೦೦ ದಾಟಿದೆ. ಈ ಶಾಲೆಯಲ್ಲಿ ಬರುವ ಶೈಕ್ಷಣಿಕ ವರ್ಷದಲ್ಲಿ ಆಂಗ್ಲ ಮಾಧ್ಯಮ ವಿಭಾಗ ಆರಂಭಿಸಬೇಕು. ಇಲ್ಲವಾದಲ್ಲಿ ಗ್ರಾಪಂ ವತಿಯಿಂದ ಧರಣಿ ಕೂರಬೇಕಾಗುತ್ತದೆ ಎಂದು ಎಚ್ಚರಿಸಿದರು.ಉಪನ್ಯಾಸಕ ಎಂ.ಈ.ರಾಜಶೇಖರಯ್ಯ ತಂತ್ರಜ್ಞಾನ ಆಧಾರಿತ ಶಿಕ್ಷಣದ ಪ್ರಯೋಜನ ಪಡೆದುಕೊಳ್ಳುವಂತೆ ಮಕ್ಕಳಿಗೆ ಮನವಿ ಮಾಡಿದರು.ಶಾಲೆಯಲ್ಲಿ ಶಿಕ್ಷಣ ಪಡೆದು ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಡಾ. ಅಶ್ವಿನಿ, ನಿವೃತ್ತ ಹಿಂದಿ ಶಿಕ್ಷಕ ಎಸ್. ಸೋಮಶೇಖರಯ್ಯ, ಕೆನರಾ ಬ್ಯಾಂಕ್ ಹಿರಿಯ ಪ್ರಬಂಧಕ ಎಲ್.ಸಿ. ಸಂತೋಷ್, ನಿವೃತ್ತ ಶಿಕ್ಷಕಿ ಎಸ್. ವಿಜಯಮ್ಮ, ಉಪನ್ಯಾಸಕಿ ಎಂ.ರಂಜಿತ ಅವರನ್ನು ಅಭಿನಂದಿಸಲಾಯಿತು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹಾಲಮ್ಮ ಭೈರಪ್ಪ ಮುಖ್ಯ ಅತಿಥಿಗಳಾಗಿದ್ದರಲ್ಲದೆ, ಶಾಲಾ ಮಕ್ಕಳು, ಸಮಿತಿ ಮತ್ತು ಗಣ್ಯರಿಗೆ ವಾರ್ಷಿಕೋತ್ಸವ ಅಂಗವಾಗಿ ಸಿಹಿ ಊಟದ ವ್ಯವಸ್ಥೆ ಮಾಡಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಎಸ್.ಚಿದಾನಂದ್ ಮಾತನಾಡಿ, ಶಾಲೆಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಇಲಾಖೆಯು ನೀಡ ಬೇಕು. ಹೆಚ್ಚುವರಿ ವಿಭಾಗ ತೆರೆಯಲು ಕೊಠಡಿಗಳ ನಿರ್ಮಾಣ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಜಾನ್‌ಮೈನ್ಸ್ ಸಹಾಯಕ ವ್ಯವಸ್ಥಾಪಕ ಎನ್. ರಣದೀವೆ, ಸಿಎಸ್‌ಆರ್ ಮುಖ್ಯಸ್ಥ ಕೆ.ಎಸ್. ಮಂಜುನಾಥ್, ಗ್ರಾಪಂ ಸದಸ್ಯರಾದ ಕೆ.ಬಿ. ಮೋಹನ್,, ಕೆ.ಬಿ. ಮಂಜುಳಾ, ವಿ. ನಾಗರಾಜ್, ಎಂ.ಈ. ಶ್ರೀಧರ್, ಸಿ.ಎಚ್.ಶೋಭಾ, ಎಚ್.ಜೆ. ದೇವಿಕಾ, ನಿರ್ಮಲಾ, ಮನ್ಸೂರು, ಸಮನ್ವಯಾಧಿಕಾರಿ ಪಿ. ಸಂಪತ್ ಕುಮಾರ್, ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಟಿ. ತಿಮ್ಮಾರೆಡ್ಡಿ, ಬಿ. ವೀರೇಶ್, ಬಿ.ಟಿ. ಹನುಂತಪ್ಪ, ಬಿ. ಕೃಷ್ಣಮೂರ್ತಿ, ಸಿ. ಬಸವರಾಜ್ ಮುಂತಾದವರು ಉಪಸ್ಥಿತರಿದ್ದರು.