ಸಾರಾಂಶ
ಯಲ್ಲಾಪುರ: ಯಲ್ಲಾಪುರ ಅರಣ್ಯ ವಿಭಾಗದ ವಿವಿಧ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಕಾಡಾನೆಗಳ ದಾಳಿಯಿಂದ ಬೆಳೆಹಾನಿಯಾಗುತ್ತಿದೆ. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ತಜ್ಞರನ್ನು ಕರೆಸಿ, ಅಧ್ಯಯನ ನಡೆಸಲಾಗುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಾಭಾನು ತಿಳಿಸಿದರು.
ಮಾ. ೧೮ರಂದು ಪಟ್ಟಣದ ಅರಣ್ಯ ಉಪ ಸಂರಕ್ಷಣಾಧಿಕಾರಿಗಳ ಕಚೇರಿಗೆ ತೆರೆಗಾಳಿ, ಹಿಟ್ಟಿನಬೈಲು, ಮಾವಳ್ಳಿ ಸೇರಿದಂತೆ ಸುತ್ತಮುತ್ತಲಿನ ೩೦ಕ್ಕೂ ಅಧಿಕ ಸಂಖ್ಯೆಯ ರೈತರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕಾಡಾನೆಗಳಿಂದ ಕೃಷಿ ಜಮೀನಿನ ಬೆಳೆಯನ್ನು ಸಂರಕ್ಷಿಸಿ, ಹಾನಿಯಾದ ಬೆಳೆಗೆ ಸರ್ಕಾರದಿಂದ ದೊರಕಬಹುದಾದ ಪರಿಹಾರ ಒದಗಿಸಿಕೊಡಿ ಮತ್ತು ಪ್ರತಿವರ್ಷವೂ ಆನೆಹಿಂಡು ಬಾರದಂತೆ ಕ್ರಮ ಕೈಗೊಳ್ಳಬೇಕೆಂಬ ರೈತರ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿದರು.ಛತ್ತಿಸ್‌ಘಡದಿಂದ ಆನೆಗಳ ಹಾವಳಿ ತಡೆಯಲು ಪರಿಹಾರ ಕಂಡುಕೊಳ್ಳುವ ಕುರಿತು ತಜ್ಞರಾದ ಸುರೇಂದ್ರ ವರ್ಮ ಮತ್ತು ಪುಣೆಯ ಜೀವವೈವಿಧ್ಯತಾ ಸಂಶೋಧನಾ ಮಂಡಳಿಯ ಶ್ರೀಹರಿ ಹೆಗಡೆ, ಭಾವುಕ್‌ವಿಜಯ, ಪ್ರಜ್ವಲಕುಮಾರ ಅವರನ್ನು ಅಧ್ಯಯನಕ್ಕಾಗಿ ಆಯ್ಕೆ ಮಾಡಿದ್ದೇವೆ ಎಂದರು.
ಯಲ್ಲಾಪುರ ವಿಭಾಗದ ಮುಂಡಗೋಡ ತಾಲೂಕಿನ ಚಿಪಗೇರಿ, ಉಚಗೇರಿ, ಚಳಗೇರಿ, ಚಿಟಗೇರಿ, ಕಂಚಿಕೊಪ್ಪ, ಕಾತೂರು, ಜಕ್ಕೊಳ್ಳಿ, ದೊಡ್ಡಬೇಣ, ಬಿಬ್ಬನಹಳ್ಳಿ, ಭರಣಿ, ಹೆಮ್ಮಾಡಿಗಳಿಗೆ ವರ್ಷಂಪ್ರತಿ ಕಾಡಾನೆಗಳು ಬರುತ್ತಿವೆಯಾದರೂ, ಈ ವರ್ಷ ಯಲ್ಲಾಪುರದ ಮಾವಳ್ಳಿ, ಹಿಟ್ಟಿನಬೈಲ್, ತೆರೆಗಾಳಿ, ಮದನೂರು, ಕಿರವತ್ತಿ ಭಾಗಗಳಲ್ಲಿಯೇ ಕಳೆದ ಒಂದೂವರೆ ತಿಂಗಳಿನಿಂದ ಬೀಡು ಬಿಟ್ಟಿವೆ. ೫ ಆನೆ, ೨ ಒಂಟಿ ಸಲಗ, ೧ ಮರಿ ಸೇರಿದಂತೆ ಒಟ್ಟೂ ೮ ಆನೆಗಳು ಪ್ರಸ್ತುತ ಈ ಭಾಗದಲ್ಲಿ ಇವೆ ಎಂದು ರೈತರು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಪುಣೆಯ ಸಂಶೋಧನಾ ಸಂಸ್ಥೆಯ ಅಧ್ಯಯನಕಾರರಾದ ಭಾವುಕ್‌ವಿಜಯ ಮಾತನಾಡಿ, ಸುಮಾರು ₹೮೦೦ ಮೌಲ್ಯದ ''''''''ಟ್ರಿಪ್ ಅಲಾರಾಂ''''''''ನ್ನು ನಮ್ಮ ಸಂಸ್ಥೆಯಿಂದ ರೈತರಿಗೆ ಉಚಿತವಾಗಿ ನೀಡುತ್ತಿದ್ದೇವೆ. ಅಲ್ಲದೇ ಲಾಲಗುಳಿ, ಕಣ್ಣೀಗೇರಿ ಪ್ರದೇಶಗಳಲ್ಲಿ ಈ ಉಪಕರಣವನ್ನು ಈಗಾಗಲೇ ಅಳವಡಿಸಲಾಗಿದ್ದು, ಯಶಸ್ಸು ಲಭಿಸಿದೆ ಎಂದರು.
ಪ್ರಸ್ತುತ ಇಲ್ಲಿಗೆ ಆಗಮಿಸಿದ ಆನೆಗಳನ್ನು ಇಲ್ಲಿಂದ ಓಡಿಸಿ ಎಂದು ರೈತರು ವಿನಂತಿಸಿದಾಗ, "೨- ೩ ದಿನಗಳಲ್ಲಿ ಇಲಾಖೆ ರೈತರ ಸಹಯೋಗದೊಂದಿಗೆ ಆನೆಗಳನ್ನು ಅವುಗಳ ಮೂಲ ನಿವಾಸವಾದ ದಾಂಡೇಲಿ ಅರಣ್ಯದೆಡೆ ಕಳುಹಿಸಿಕೊಡಲಾಗುವುದು " ಎಂದು ಡಿಸಿಎಫ್ ಭರವಸೆ ನೀಡಿದರು.ರೈತರ ಪರವಾಗಿ ಮಾರುತಿ ಘಟ್ಟಿ ಮಾತನಾಡಿ, ನಮ್ಮ ಜಮೀನಿಗೆ ಬಂದ ಆನೆಗಳನ್ನು ಓಡಿಸಲು ಮುಂದಾದರೆ ಅವು ನಮ್ಮನ್ನೇ ಗದರಿಸಲು ಬರುತ್ತವೆ. ನಮ್ಮ ಜಮೀನಿನ ಅಡಕೆ, ತೆಂಗು, ಬಾಳೆ, ಕಬ್ಬು ಮುಂತಾದ ಬೆಳೆಗಳನ್ನು ಧ್ವಂಸ ಮಾಡಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶ್ರೀಪತಿ ಭಟ್ಟ ಹಿಟ್ಟಿನಬೈಲ್ ಮಾತನಾಡಿ, ಪರಿಹಾರಕ್ಕಾಗಿ ನಾವು ಅರಣ್ಯ ಹಾಗೂ ತೋಟಗಾರಿಕಾ ಇಲಾಖೆಗೆ ಅಲೆದು ಸುಸ್ತಾಗಿದೆ. ಯಾವುದೇ ಇಲಾಖೆಯ ಸ್ಪಂದನ ಸಮರ್ಪಕವಾಗಿ ಸಿಗುತ್ತಿಲ್ಲ. ಇದೀಗ ನೀವಾದರೂ ಅಗತ್ಯ ಪರಿಹಾರ ದೊರೆಯಲು ಸಹಾಯ ಮಾಡಿ ಎಂದರು.ತಿಮ್ಮಣ್ಣ ಭಟ್ಟ ಜಡ್ಡಿಗದ್ದೆ, ಚಂದ್ರಶೇಖರ ಭಟ್ಟ ತೆರೆಗಾಳಿ, ಎಂ.ಎಸ್. ಹೆಗಡೆ ಮಾವಳ್ಳಿ ತಮ್ಮ ಕಷ್ಟದ ಅಳಲು ತೋಡಿಕೊಂಡರು. ಮಹಾಬಲೇಶ್ವರ ಭಟ್ಟ ಹಿಟ್ಟಿನಬೈಲು, ಶಿವರಾಮ ಹೆಗಡೆ, ಗಣಪತಿ ಹೆಗಡೆ, ನಾರಾಯಣ ಹೆಗಡೆ, ಗೋಪಾಲ ಮರಾಠೆ, ವಿಠೋಬಾ ಮರಾಠಿ, ನಾರಾಯಣ ಮರಾಠಿ ಸೇರಿದಂತೆ ೩೦ಕ್ಕೂ ಹೆಚ್ಚು ರೈತರು ಉಪಸ್ಥಿತರಿದ್ದರು.