ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಅಲೆಮಾರಿ ಹಾಗೂ ಆದಿವಾಸಿ ಸಮುದಾಯದ ಜನರು ನಿವೇಶನ, ಶೌಚಾಲಯ ಮತ್ತು ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಗುರುವಾರ ಹಲವರು ಮನವಿ ಸಲ್ಲಿಸಿದ್ದು, ಈ ಸಮಸ್ಯೆಗಳಿಗೆ ಶೀಘ್ರದಲ್ಲಿ ಪರಿಹಾರ ನೀಡಿ ಬಗೆಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಿಪಂನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಪ.ಜಾತಿ, ಪ.ಪಂಗಡ, ಆದಿವಾಸಿ ಮತ್ತು ಹಿಂದುಳಿದ ವರ್ಗಗಳ ಅಲೆಮಾರಿ ಸಮುದಾಯಗಳ ಜನಾಂಗದವರ ಕುಂದು ಕೊರತೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕುಂದು ಕೊರತೆ ಸಭೆಯಲ್ಲಿ ಜಾತಿ ಪ್ರಮಾಣ ಪತ್ರದ ಸಮಸ್ಯೆ, ಭೂಮಿ ಸಮಸ್ಯೆ, ವಿದ್ಯುತ್ ಸಮಸ್ಯೆ, ರುಧ್ರ ಭೂಮಿ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದ್ದು ಶೀಘ್ರದಲ್ಲಿ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು. ಈ ನಿಟ್ಟಿನಲ್ಲಿ ಮುಂಬರುವ ತಿಂಗಳಲ್ಲಿ ಸಮಸ್ಯೆಗಳ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ, ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಎಲ್ಲಾ ಅಲೆಮಾರಿ ಸಮುದಾಯದವರು ತಮ್ಮ ತಮ್ಮ ಸಮುದಾಯಗಳ ಸಮಸ್ಯೆಯನ್ನು ನಮ್ಮ ಗಮನಕ್ಕೆ ತಂದಿದ್ದೀರಾ. ತಮ್ಮ ಎಲ್ಲಾ ಸಮಸ್ಯೆಗಳನ್ನೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ತಮ್ಮ ಮನವಿಯನ್ನು ಸಂಬಂಧಿಸಿದ ತಹಸೀಲ್ದಾರ್ ಅವರಿಗೆ ಕಳುಹಿಸಲಾಗುವುದು. ತಮ್ಮ ಮನವಿಗೆ ನಂಬರ್ ಕೊಟ್ಟು ಅವುಗಳನ್ನು ಒಂದು ತಿಂಗಳ ಒಳಗೆ ಪರಿಹರಿಸಲಾಗುವುದು. ನಂತರ ಸಭೆ ಕರೆದು ಈ ಸಮಸ್ಯೆಗಳ ಪರಿಹಾರ ಕುರಿತು ಪರಿಶೀಲನಾ ಸಭೆ ನಡೆಸಲಾಗುವುದು ಎಂದರು.ಜಿಲ್ಲೆಯ ಎಲ್ಲಾ ತಾಲೂಕಿನ ತಹಸೀಲ್ದಾರ್ ಹಾಗೂ ಇಒ ಗಳು ತಮ್ಮ ತಮ್ಮ ವ್ಯಾಪ್ತಿಗೆ ಬರುವಂತಹ ಸಮಸ್ಯೆಗಳಿರುವ ಸ್ಥಳಗಳಿಗೆ ಭೇಟಿ ನೀಡಿ ತಮ್ಮ ಹಂತದಲ್ಲಿ ಪರಿಹಾರಗೊಳ್ಳುವ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿ, ಅದರ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಪ.ಜಾತಿ, ಪ.ಪಂಗಡ, ಆದಿವಾಸಿ ಮತ್ತು ಹಿಂದುಳಿದ ವರ್ಗಗಳ ಅಲೆಮಾರಿಯ ಕೊರಜ, ಅಕ್ಕಿ-ಪಿಕ್ಕಿ, ಯಳವ, ದೊಂಬರ, ಕೊರ್ಮ, ಜೇನು ಕುರುಬ, ಸೋಲಿಗ ಸೇರಿದಂತೆ ಇನ್ನಿತರ ಸಮುದಾಯದ ಜನರು ತಮ್ಮಲ್ಲಿರುವ ನಿವೇಶನ, ಕುಡಿಯುವ ನೀರು, ಚರಂಡಿ, ರುದ್ರ ಭೂಮಿ ಹಾಗೂ ವಿದ್ಯುತ್ ಸೇರಿದಂತೆ ಹಲವಾರು ಸಮಸ್ಯೆಗಳ ಅಹವಾಲನ್ನು ಲಿಖಿತ ರೂಪದಲ್ಲಿ ಜಿಲ್ಲಾಧಿಕಾರಿ ನೀಡಿದರು.ಸಭೆಯಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾದ ಗೌರವಾಧ್ಯಕ್ಷ ದ್ವಾರಕನಾಥ್, ಜಿಪಂ ಉಪ ಕಾರ್ಯದರ್ಶಿ ಎಂ.ಕೆ. ಸವಿತಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್. ಬಸವರಾಜು, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಂಗೇಗೌಡ, ಡಿಎಚ್ಒ ಡಾ.ಪಿ.ಸಿ. ಕುಮಾರಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್ ಸೇರಿದಂತೆ ಎಲ್ಲಾ ತಾಲೂಕುಗಳ ತಹಸೀಲ್ದಾರ್ ಹಾಗೂ ಇಒ ಮತ್ತು ಪ.ಜಾತಿ, ಪ.ಪಂಗಡ, ಆದಿವಾಸಿ ಮತ್ತು ಹಿಂದುಳಿದ ವರ್ಗಗಳ ಅಲೆಮಾರಿ ಸಮುದಾಯದ ಜನರು ಇದ್ದರು.