ಸ್ಥಳೀಯ ರೋಟರಿ ಹಾಗೂ ಇನ್ನರವೀಲ್ ಕ್ಲಬ್, ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆ ಹುಬ್ಬಳ್ಳಿ, ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಡಿ. 27ರಂದು ಬಿಇಎಸ್ ಕಾಲೇಜು ಆವರಣದಲ್ಲಿ ನಡೆಯಿತು.

ಬ್ಯಾಡಗಿ: ಸ್ಥಳೀಯ ರೋಟರಿ ಹಾಗೂ ಇನ್ನರವೀಲ್ ಕ್ಲಬ್, ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆ ಹುಬ್ಬಳ್ಳಿ, ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಡಿ. 27ರಂದು ಬಿಇಎಸ್ ಕಾಲೇಜು ಆವರಣದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಬಿಇಎಸ್ ಸಂಸ್ಥೆಯ ನಿರ್ದೇಶಕ ಡಾ.ಎಸ್.ಎನ್. ನಿಡಗುಂದಿ ಮಾತನಾಡಿ, ಆರೋಗ್ಯದ ವಿಚಾರದಲ್ಲಿ ಸಾಕಷ್ಟು ಜನರು ಮೈಮರೆತು ನಡೆದುಕೊಳ್ಳುತ್ತಿದ್ದಾರೆ. ರೋಗ ಬಂದಾಗ ಉಪಚಾರಕ್ಕಿಂತ ಬರದಂತೆ ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದ ಅವರು, ಬೀಡಿ, ಸಿಗರೇಟ್, ಸಿಗಾರ್, ಗುಟ್ಕಾ, ಖೈನಿ ಯಾವುದೇ ರೂಪದಲ್ಲಿ ತಂಬಾಕು ಬಳಸಬೇಡಿ ಇವೆಲ್ಲವೂ ಕ್ಯಾನ್ಸರನಂತಹ ಮಾರಕ ರೋಗ ಆಹ್ವಾನಿಸಲಿವೆ ಎಂದರು.

ಊಟದಲ್ಲಿ ಅರ್ಧದಷ್ಟು ತರಕಾರಿ ಇರಲಿ: ಊಟದ ತಟ್ಟೆಯಲ್ಲಿ ಅರ್ಧದಷ್ಟು ತರಕಾರಿ ಮತ್ತು ಹಣ್ಣುಗಳಿಂದ ಕೂಡಿರಬೇಕು, ಅದರಲ್ಲೂ ವಿಶೇಷವಾಗಿ ಸೊಪ್ಪುಗಳಿಂದ ಸಿದ್ಧಪಡಿಸಿದ ಆಹಾರವನ್ನೇ ಸೇವಿಸಬೇಕು, ಸಂಸ್ಕರಿಸಿದ ಆಹಾರಕ್ಕಿಂತ (ಇನಸ್ಟಂಟ್) ಬೇಳೆ ಕಾಳುಗಳಿಂದ ಸ್ವತಃ ತಾವೇ ಸಿದ್ಧಪಡಿಸಿದ ಆಹಾರವನ್ನು ಬಳಕೆ ಮಾಡುವುದು ಹೆಚ್ಚುಸೂಕ್ತವೆಂದರು.

ಕೆಂಪು ಮಾಂಸ ಹಾಗೂ ಮದ್ಯಪಾನ ಬೇಡ: ಕೆಂಪು ಮಾಂಸ ಮತ್ತು ಸಂಸ್ಕರಿಸಿದ ಮಾಂಸದೂಟವನ್ನು ಪ್ರತಿಯೊಬ್ಬರು ತ್ಯಜಿಸಬೇಕು, ಮದ್ಯಪಾನದಿಂದ ಬಾಯಿ, ಗಂಟಲು, ಯಕೃತ್ತು, ಸ್ತನ ಮತ್ತು ಕೊಲೋನ್ ಕ್ಯಾನ್ಸರ್ ಗೆ ಕಾರಣಗಳಾಗಿವೆ, ದಿನದಲ್ಲಿ 30 ನಿಮಿಷಗಳ (ನಡಿಗೆ, ಸೈಕ್ಲಿಂಗ್, ಯೋಗ) ದೈಹಿಕ ಚಟುವಟಿಕೆ ಗುರಿಯೊಂದಿಗೆ ವ್ಯಾಯಾಮದೊಂದಿಗೆ ದೈಹಿಕವಾಗಿ ಸಕ್ರಿಯರಾಗಿರುವಂತೆ ಸಲಹೆ ನೀಡಿದರು.

ರೋಟರಿ ಆರೋಗ್ಯ ವಾಹಿನಿ: ಮಾಜಿ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ ಮಾತನಾಡಿ, ಹುಬ್ಬಳ್ಳಿ ರೋಟರಿ ಕ್ಲಬ್ ಮತ್ತು ರೋಟರಿ ಇಂಟರನ್ಯಾಷನಲ್ ಫೌಂಡೇಶನ್ ಗ್ಲೋಬಲ್ ಜಂಟಿ ಅನುದಾನದಲ್ಲಿ ₹ 2 ಕೋಟಿ ವೆಚ್ಚದ ರೋಟರಿ ಆರೋಗ್ಯ ವಾಹಿನಿ ಬಸ್ ಸಿದ್ಧಪಡಿಸಲಾಗಿದ್ದು, ರಾಜ್ಯದ ಎಲ್ಲಾ ಕಡೆಗಳಲ್ಲಿ ಉಚಿತ ಸೇವೆ ಕಲ್ಪಿಸಲು ಸದರಿ ವಾಹನವನ್ನು ಹುಬ್ಬಳ್ಳಿಯ ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ಇದರಲ್ಲಿ ವಿಶೇಷವಾಗಿ ಮಹಿಳೆಯರ ಸ್ಥನ ಕ್ಯಾನ್ಸರ್, ಗರ್ಭಕೋಶ, ಗರ್ಭಾಶಯ ಹಾಗೂ ಸರ್ವಿಕಲ್ ಕ್ಯಾನ್ಸರ್ ಪತ್ತೆ ಹಚ್ಚಲು ಅವಶ್ಯವಿರುವ ಉಪಕರಣವನ್ನು ಹೊಂದಿದೆ ಎಂದರು.

ಶಿಬಿರದಲ್ಲಿ ಸುಮಾರು 60 ಜನ ಚೆಕ್ ಅಪ್ ಮಾಡಿಸಿಕೊಂಡಿದ್ದು 16 ಮಹಿಳೆಯರು ಸ್ಥನ ಕ್ಯಾನ್ಸ್ ರ (ಮೊಮೊಗ್ರಾಫಿ) ತಪಾಸಣೆ ಮಾಡಿಸಿಕೊಂಡರು. ಬಿಇಎಸ್ ಕಾಲೇಜು ಪ್ರಾಚಾರ್ಯ ಡಾ.ಎನ್.ಎಸ್. ಪ್ರಶಾಂತ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಡಾ. ಪ್ರಭು ದೊಡ್ಮನಿ, ರೋಟರಿ ಕ್ಲಬ್ ಅಧ್ಯಕ್ಷ ಅನಿಲಕುಮಾರ ಬೊಡ್ಡಪಾಟಿ, ಬಸವರಾಜ ಸುಂಕಾಪುರ, ಕಿರಣ ಮಾಳೇನಹಳ್ಳಿ, ಪ್ರಕಾಶ ಛತ್ರದ, ರಮೇಶ ಕಲ್ಯಾಣಿ, ಪವಾಡೆಪ್ಪ ಆಚನೂರ, ಮಹಾಂತೇಶ ಸುಂಕದ, ಇನ್ನರವೀಲ್ ಅಧ್ಯಕ್ಷೆ ಪ್ರತಿಭಾ ಮೇಲಗಿರಿ, ಕಾರ್ಯದರ್ಶಿ ಲಕ್ಷ್ಮಿ ಉಪ್ಪಾರ, ಕವಿತಾ ಸೊಪ್ಪಿನಮಠ, ರೂಪ ಕಡೇಕೊಪ್ಪ, ಸಂಧ್ಯಾರಾಣಿ ದೇಶಪಾಂಡೆ, ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರಾದ ಡಾ. ಉಮೇಶ ಹಳ್ಳಿಕೇರಿ, ಡಾ. ಪ್ರಸನ್ನ, ಡಾ.ಪಿಯೂಷ್ ಬಾಯಿ, ಡಾ.ಶ್ರವಣ್ ಸತೀಶ ಮತ್ತು ಗರ್ಭಕೋಶ ತಜ್ಞ ವೈದ್ಯ ರಾಜಶ್ರೀ ಹಾಗೂ ಸೋನೋಗ್ರಾಫಿ ಮೊಮ್ಮೋಗ್ರಫಿ ತಜ್ಞರು ಮತ್ತು ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು. ಬಿಇಎಸ್ ಕಾಲೇಜಿನ ಬಿಂದುಶ್ರೀ ಪ್ರಾರ್ಥಿಸಿದರು. ಪ್ರೊ.ವಾಣಿಶ್ರೀ ಬಂಕೊಳ್ಳಿ ಸ್ವಾಗತಿಸಿದರು. ಉಪನ್ಯಾಸಕಿ ನಿವೇದಿತ ವಾಲಿಶೆಟ್ಟರ ನಿರೂಪಿಸಿದರು. ಉಪನ್ಯಾಸಕ ಶಿವನಗೌಡ ಪಾಟೀಲ ವಂದಿಸಿದರು.