ಸಾರಾಂಶ
ತುಮಕೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೇಲಿನ ಸಿಬಿಐ ಕೇಸ್ ವಾಪಾಸ್ ಪಡೆಯುವುದರೊಂದಿಗೆ ಕರ್ನಾಟಕ ಸರ್ಕಾರ ಇಡೀ ಕ್ಯಾಬಿನೆಟ್ ಅನ್ನು ದುರುಪಯೋಗಪಡಿಸಿಕೊಂಡಿದೆ ಎಂದು ವಿರೋಧ ಪಕ್ಷ ನಾಯಕ ಆರ್. ಅಶೋಕ ವಾಗ್ದಾಳಿ ನಡೆಸಿದರು.
ಶಿರಾ ತಾಲೂಕಿನಲ್ಲಿ ಬರ ಅಧ್ಯಯನ ಪ್ರವಾಸ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಎಂ.ಬಿ ಪಾಟೀಲ್ ಮಗನ ಮದುವೆ ನೆಪದಲ್ಲಿ ಕೇಂದ್ರ ನಾಯಕರ ತಂಡ ಹೊಟೇಲ್ ನಲ್ಲಿ ಉಳಿದುಕೊಂಡು ಕ್ಯಾಬಿನೆಟ್ ನಲ್ಲಿ ಡಿಕೆಶಿ ವಿರುದ್ಧದ ಕೇಸ್ ಹಿಂಪಡೆಯುವ ಕೆಲಸ ಮಾಡಿದೆ. ಈ ಮೂಲಕ ಒಂದು ಕೆಟ್ಟ ಸಂಪ್ರದಾಯವನ್ನು ಕಾಂಗ್ರೆಸ್ ನವರು ಹುಟ್ಟುಹಾಕಿದ್ದಾರೆ ಎಂದರು.ಹಿಂದೆ ಲೋಕಾಯುಕ್ತ ಸಂಸ್ಥೆಯನ್ನು ಇದೇ ಸಿದ್ದರಾಮಯ್ಯ ಮುಚ್ಚಿದ್ದರು. ಕ್ಯಾಬಿನೆಟ್ ನಲ್ಲಿ ಸಿಬಿಐ ಕೇಸ್ ವಾಪಸ್ ಪಡೆದರೆ ಸಿದ್ದರಾಮಯ್ಯರನ್ನು ಭ್ರಷ್ಟಾಚಾರದ ರಾಯಭಾರಿ ಅಂತ ಕರಿಬೇಕಾಗುತ್ತದೆ. ಜನಾರ್ಧನ ರೆಡ್ಡಿ ಅವರು ಸರ್ಕಾರಕ್ಕೆ ಒಂದು ಪ್ರಶ್ನೆ ಕೇಳಿದ್ದಾರೆ. ಸಚಿವ ನಾಗೇಂದ್ರನಿಗೆ ಒಂದು ನ್ಯಾಯ, ಕೆಪಿಸಿಸಿ ಅಧ್ಯಕ್ಷರಿಗೆ ಒಂದು ನ್ಯಾಯಾನಾ ಅಂತ ಕೇಳಿದ್ದಾರೆ. ನಾಗೇಂದ್ರನ ಮೇಲೆ 25 ಸಿಬಿಐ ಕೇಸ್ ಇದೆ ಅದನ್ನು ಯಾಕೆ ತೆಗೆಯಲಿಲ್ಲ ಅಂತ ಕೇಳಿದ್ದಾರೆ ಎಂದರು.
ಡಿಕೆ ಶಿವಕುಮಾರ್ ಅವರ ಕೇಸು 2013ರಲ್ಲಿ ಕೊಟ್ಟಿದ್ದು. ಈಗ 2023ರಲ್ಲಿದ್ದಾರೆ. ಇಷ್ಟು ವರ್ಷ ಏನು ಮಾಡ್ತಾ ಇದ್ದರು ಎಂದ ಅವರು ಇವರಿಗೆ ಈಗ ಜ್ಞಾನೋದಯವಾಗಿದೆ. 10 ವರ್ಷ ಇವರೇನು ಮಣ್ಣು ತಿನ್ನುತ್ತಿದ್ದರಾ ಎಂದ ಅಶೋಕ್ ಕೇಸ್ ವಜಾಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ವಜಾ ಮಾಡುವುದಿಲ್ಲ ಅಂತಾ ಹೇಳಿತು ಎಂದರು.ನ್ಯಾಯಾಲಯ ಆದೇಶವನ್ನು ಧಿಕ್ಕರಿಸುವುದು ಕ್ಯಾಬಿನೆಟ್ ಕೆಲಸನಾ. ಕ್ಯಾಬಿನೆಟ್ ನ್ಯಾಯಾಲಯಕ್ಕಿಂತ ದೊಡ್ಡದಾ ಎಂದು ಪ್ರಶ್ನಿಸಿದರು.
ಕಾನೂನಿಗೆ ಮಣ್ಣು ಎರಚುವ ಕೆಲಸವನ್ನ ಮಾಡುತ್ತಿದ್ದಾರೆ. ನ್ಯಾಯಾಲಯ ಕೇಸ್ ನಾ ಕಂಟಿನ್ಯೂ ಮಾಡಿ ಅಂತ ಹೇಳಿದೆ. ಜಡ್ಜ್ಮೆಂಟ್ ಕೊಡ್ತಿವಿ ಅಂತನೂ ಹೇಳಿದೆ. ಒಂದು ವಾರದ ಹಿಂದೆ ಆರ್ಗ್ಯುಮೆಂಟ್ ಇದ್ದಾಗ ಯಾಕೆ ಪೋಸ್ಟ್ ಮನ್ ಮಾಡಿಕೊಂಡಿರಿ ಎಂದ ಅಶೋಕ್ ಸಿಬಿಐ ಕೂಡಾ ತಯಾರಿತ್ತು. ಈಗ 29ಕ್ಕೆ ಕೇಸ್ ಇದೆ. ನ್ಯಾಯಾಧೀಶರರು ಜಡ್ಜ್ ಮೆಂಟ್ ಕೊಡಬೇಕು. ಅವರಿಗಿನ್ನ ಮೊದಲೇ ನೀವೆ ಜಡ್ಜ್ ಮೆಂಟ್ ಕೊಟ್ಟರೆ ನ್ಯಾಯಾಲಯಕ್ಕೆ ಏನು ಗೌರವ ಎಂದಿದ್ದಾರೆ.ಬೇಡ ಬೇಡ ಅಂದರೂ ಅಸ್ತ್ರಗಳನ್ನು ಕೊಟ್ಟಿದ್ದಾರೆ. ಡಿಕೆಶಿ ಇಶ್ಯೂ ಇದೆ, ಕರೆಂಟ್ ಇಶ್ಯೂ ಇದೆ. ಜಮೀರ್ ಖಾನ್ ಇಶ್ಯೂ ಇದೆ. ಜಮೀರ್ ಖಾನ್, ಎಲ್ಲಾ ಹಿಂದುಗಳು ಹಾಗೂ ಬಿಜೆಪಿಯವರೆಲ್ಲಾ ಹೋಗಿ ನಮ್ಮ ಮುಸ್ಲಿಂಗೆ ಸೆಲ್ಯೂಟ್ ಹೊಡೆಯಬೇಕು ಅಂತ ಹೇಳಿದ್ದಾರೆ. ಸಂವಿಧಾನದ ಆಶಯದಂತೆ ಪ್ರಮಾಣ ತಗೊಂಡಿದ್ದರು. ಪ್ರಮಾಣ ತಗೊಳುವಾಗ ಅದ್ಯಾವ ಭಾಷೆಯಲ್ಲಿ ಪ್ರಮಾಣ ತಗೊಂಡ್ರೋ ಗೊತ್ತಾಗಿಲ್ಲ ಎಂದರು.
ಈಗ ಹಿಂದೂಗಳಿಗೆ ಹಾಗೂ ಬಿಜೆಪಿ ಅವರಿಗೆ ಅವಮಾನವಾಗುವಂತಹ ಹೇಳಿಕೆ ಕೊಟ್ಟಿದ್ದಾರೆ. ನಾನು ಬಿಜೆಪಿಯಲ್ಲಿ ಹೋರಾಟದಿಂದ ಬಂದವನು. ಯಾವ ರೀತಿಯಾಗಿ ಹೋರಾಟ ಮಾಡಬೇಕು ಆ ರೀತಿಯಾಗಿ ಮಾಡುವುದಾಗಿ ತಿಳಿಸಿದರು. ಪಕ್ಷಕ್ಕೆ ಯಾರನ್ನು ಕರೆದುಕೊಳ್ಳಬೇಕು ಎಂಬುದನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ತೀರ್ಮಾನ ಮಾಡುತ್ತಾರೆ. ರಾಜ್ಯಾಧ್ಯಕ್ಷ ಹಾಗೂ ವಿರೋಧಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಪಕ್ಷ ಸಧೃಢವಾಗಿದೆ ಎಂದರು.