ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು

ಬರ ಅಧ್ಯಯನಕ್ಕೆಂದು ತಾಲೂಕಿಗೆ ಆಗಮಿಸಿದ್ದ ವಿರೋಧ ಪಕ್ಷದ ನಾಯಕ ಆ‌ರ್.ಅಶೋಕ ನೇತೃತ್ವದ ತಂಡ ತಾಲೂಕಿ ನಮುತ್ತಿಗಾರಹಳ್ಳಿ ದೇವರ ಎತ್ತುಗಳ ಸ್ಥಳಕ್ಕೆ ಬುಧವಾರ ರಾತ್ರಿ ಆಗಮಿಸಿ ಕತ್ತಲಲ್ಲಿ ಬ್ಯಾಟರಿ ಹಿಡಿದು ದೇವರ ಎತ್ತುಗಳ ಪರಿಸ್ಥಿತಿ ವೀಕ್ಷಣೆ ಮಾಡಿ ಕೆಲವೇ ಕೆಲವು ನಿಮಿಷಗಳಲ್ಲಿ ನಿರ್ಗಮಿಸಿದ್ದು ರೈತರ ಬೇಸರಕ್ಕೆ ಕಾರಣವಾಯಿತು.

ಸದಾ ಬರಕ್ಕೆ ತುತ್ತಾಗುವ ಶಾಶ್ವತ ಬರಪೀಡಿತ ಪ್ರದೇಶವಾಗಿರುವ ಈ ಭಾಗದಲ್ಲಿ ಈ ವರ್ಷವೂ ಮಳೆ ಬಾರದೆ ಬದುಕು ಸಂಕಷ್ಟವಾಗಿದೆ. ಜಾನುವಾರುಗಳ ಪೋಷಣೆ ಕಷ್ಟವಾಗಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಬರುತ್ತಾರೆ. ಅವರ ಬಳಿ ಹೇಳಿಕೊಳ್ಳಬೇಕೆಂದು ಸಾವಿರಾರು ಸಮಸ್ಯೆಗಳನ್ನು ಹರವಿಕೊಂಡು ಕುಳಿತಿದ್ದ ನಮಗೆ ಅವರು ಕತ್ತಲಲ್ಲಿ ಬಂದಿದ್ದು ಬೇಸರವಾಯಿತು. ಬೆಳಕಿನಲ್ಲಿ ಬಂದಿದ್ದರೆ ನಮ್ಮಕಷ್ಟಗಳನ್ನು ತೋಡಿಕೊಳ್ಳುತ್ತಿದ್ದೆವು. ಬಿತ್ತನೆ ಆಗದಿರುವುದನ್ನು, ಬೆಳೆ ಒಣಗುತ್ತಿರುವುದನ್ನು ತೋರಿಸುತ್ತಿದ್ದೆವು. ರಾತ್ರಿ ಬಂದು ಬ್ಯಾಟರಿ ಹಿಡಿದುಕೊಂಡು ಬರ ವೀಕ್ಷಣೆ ಮಾಡಿದರೆ ಅವರಿಗೆ ಸಮಸ್ಯೆ ಅರ್ಥವಾಗುವುದೆಂತು ಎಂದು ಅಲ್ಲಿದ್ದವರಿಂದ ಅಳಲು ಕೇಳಿಬಂತು.

ದೇವರ ಎತ್ತುಗಳ ದೂಡುವ ದೊಡ್ಡಿಗೆ ಬುಧವಾರ ರಾತ್ರಿ ಆಗಮಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರಿಗೆ ಅಲ್ಲಿನ ಕಿಲಾರಿಗಳು (ದೇವರ ಎತ್ತುಗಳ ಪೋಷಕರು) ಮನವಿ ನೀಡಿ, ಮ್ಯಾಸ ನಾಯಕರು ಬುಡಕಟ್ಟು ಹಿನ್ನೆಲೆಯಿಂದ ಬಂದವರು. ಇಂದಿಗೂ ಬುಡಕಟ್ಟು ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ತಲೆ ತಲಾಂತರದಿಂದ ಇಲ್ಲಿನ ದೇವರ ಎತ್ತುಗಳನ್ನು ದೇವರೆಂದು ಪೂಜಿಸಿಕೊಂಡಿದ್ದೇವೆ. ತಾಲೂಕು ಸದಾ ಬರಕ್ಕೆ ತುತ್ತಾಗುತ್ತಿದೆ. ದೇವರ ಎತ್ತುಗಳ ಪೋಷಣೆ ಕಷ್ಟವಾಗುತ್ತಿದೆ. ನಮಗೆ ಪ್ರತ್ಯೇಕ ಗೋಶಾಲೆ ಮತ್ತು ಮೇವು ಬೆಳೆಯಲು ಗೋಮಾಳ ಜಮೀನು ನೀಡಬೇಕು ಎಂದು ಒತ್ತಾಯಿಸಿ ಮನವಿ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಬೈರತಿ ಬಸವರಾಜ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಪಿ.ಎಂ. ಮಂಜುನಾಥ್‌, ಕ್ಷೇತ್ರಾಧ್ಯಕ್ಷ ಕೆ.ಟಿ.ಶ್ರೀರಾಮರೆಡ್ಡಿ, ನೇರ್ಲಹಳ್ಳಿ ಪ್ರಭಾಕರ್, ಪ್ರಭಾಕರ್, ಹರೀಶ್ ಕಡೆತೋಟ ಇದ್ದರು.