ಧ್ರುವನಾರಾಯಣ ಕಾಂಗ್ರೆಸ್ ಆಸ್ತಿಯಾಗಿದ್ದರು

| Published : Aug 01 2025, 12:00 AM IST

ಸಾರಾಂಶ

ಶಾಸಕ ದರ್ಶನ್ ರೂಪದಲ್ಲಿ ಧ್ರುವನಾರಾಯಣ ಅವರನ್ನು ಕಾಣುತ್ತಿದ್ದೇವೆ

ಕನ್ನಡಪ್ರಭ ವಾರ್ತೆ ನಂಜನಗೂಡು ಆರ್‌. ಧ್ರುವನಾರಾಯಣ ವ್ಯಕ್ತಿಯಲ್ಲ, ಶಕ್ತಿಯಾಗಿದ್ದರು, ಕಾಂಗ್ರೆಸ್ ಆಸ್ತಿಯಾಗಿದ್ದರು, ಅವರ ಮಗ ಶಾಸಕ ದರ್ಶನ್ ರೂಪದಲ್ಲಿ ಧ್ರುವನಾರಾಯಣ ಅವರನ್ನು ಕಾಣುತ್ತಿದ್ದೇವೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಗುರುವಾರ ಆರ್‌. ಧ್ರುವನಾರಾಯಣ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಧ್ರುವನಾರಾಯಣ ನನ್ನ ಆತ್ಮೀಯ ಮಿತ್ರ, ನಾನು ಮೊದಲ ಬಾರಿಗೆ ಸಂಸದನಾದಾಗ ಅವರೊಡನೆ ಹೆಚ್ಚಿನ ಒಡನಾಟ ಬೆಳೆಯಿತು, ನಮ್ಮ ಜೊತೆಗೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದರು, ಸಜ್ಜನ ರಾಜಕಾರಣಿಯಾಗಿ ಅಳೆದು ತೂಗಿ ಮಾತನಾಡುತ್ತಿದ್ದರು, ಅಲ್ಲದೆ ನಮ್ಮೆಲ್ಲರಿಗೂ ರಾಜಕೀಯ ಸಲಹೆಗಾರರಾಗಿದ್ದರು, ಅವರು ಬದುಕಿದ್ದಿದ್ದರೆ ರಾಜ್ಯ ಸರ್ಕಾರದಲ್ಲಿ ಹಿರಿಯ ಸಚಿವರಾಗಿ ಕೆಲಸ ಮಾಡುತ್ತಿದ್ದರು, ಅವರ ಆದರ್ಶ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ, ಅವರು ಕಾಲವಾಗಿ ಮೂರು ವರ್ಷ ಕಳೆದಿದ್ದರೂ ಸಹ ಜನರು ಅವರ ಮೇಲೆ ಇರಿಸಿದ್ದ ಪ್ರೀತಿ ಕಡಿಮೆಯಾಗಿಲ್ಲ, ಅವರು ಸದಾ ಕಾಲ ನಮ್ಮ ಕ್ಷೇತ್ರದಲ್ಲಿ ಯುವಕರಿಗೆ ಉತ್ತಮ ಉದ್ಯೋಗ, ಉತ್ತಮ ಶಿಕ್ಷಣ ಸಿಗುವಂತೆ ಮಾಡಬೇಕು ಎಂದು ಸದಾ ಕನಸು ಕಾಣುತ್ತಿದ್ದರು, ಅವರ ಆಶಯದಂತೆ ಶಾಸಕ ದರ್ಶನ್ ಧ್ರುವನಾರಾಯಣ ಕಳೆದ ಮೂರು ವರ್ಷದಿಂದ ಉದ್ಯೋಗ ಮೇಳವನ್ನು ನಡೆಸುವ ಮೂಲಕ ಯುವಕ, ಯುವತಿಯರಿಗೆ ಉದ್ಯೋಗ ದೊರಕಿಸಿಕೊಟ್ಟು ತಂದೆಯ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ ಎಂದು ಹೇಳಿದರು. ಮೇಳದಲ್ಲಿ 90ಕ್ಕೂ ಹೆಚ್ಚು ಕಂಪನಿಗಳು ಭಾಗಿಉದ್ಯೋಗ ಮೇಳದಲ್ಲಿ 90 ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಿವೆ, 8 ಸಾವಿರ ಉದ್ಯೋಗದ ಲಭ್ಯತೆ ಇದೆ, ಕಂಪನಿಗಳು ಕೌಶಲ್ಯ ಹೊಂದಿದವರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ, ನೀವು ಸಂಮೃದ್ಧ ಕರ್ನಾಟಕದಲ್ಲಿ ಹುಟ್ಟಿದ್ದೀರಿ, ನಮ್ಮ ರಾಜ್ಯ ಇಡಿ ರಾಷ್ಟ್ರಕ್ಕೆ ಉದ್ಯೋಗ ನೀಡುವಷ್ಟು ಅವಕಾಶಗಳನ್ನು ಹೊಂದಿದೆ, ಉದ್ಯೋಗ ನಮ್ಮ ಜನರ ಕಾಲ ಕೆಳಗೆ ಇದೆ, ಆದರೆ ನಮ್ಮ ಜನರು ನಮ್ಮ ರಾಜ್ಯದ ಪರ ಊರಿನಲ್ಲಿ ಉದ್ಯೋಗ ಮಾಡಲು ತಯಾರಿಲ್ಲ, ಅವರಿರುವ ಸ್ಥಳದಲ್ಲೇ ಉದ್ಯೋಗ ಸಿಗಬೇಕು ಎಂಬ ಮನೋಭಾವದಿಂದ ಬಿಹಾರ, ಪಶ್ಚಿಮ ಬಂಗಾಳದವರು ಬಂದು ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ, ನಮ್ಮವರಿಗೆ ಇಚ್ಛಾಶಕ್ತಿಯ ಕೊರತೆಯಿದೆ, ಆದ್ದರಿಂದ ವಿದ್ಯಾರ್ಥಿಗಳಲ್ಲಿ ನನ್ನ ವಿದ್ಯಾರ್ಹತೆಗೆ ಅನುಗುಣವಾಗಿ ಕೆಲಸ ಸಿಗಬೇಕು, ನಮ್ಮ ಊರಿನಲ್ಲೇ ಕೆಲಸ ಸಿಗಬೇಕು ಎಂಬ ಮನೋಭಾವನೆ ಹೋಗಬೇಕು, ಸಿಕ್ಕ ಕೆಲಸ ಮಾಡಿ ಅನುಭವ ಪಡೆಯುವಂತಾಗಬೇಕು ಎಂದು ಸಲಹೆ ನೀಡಿದರು. ಸ್ವಂತ ಶಕ್ತಿಯಿಂದ ರಾಜಕೀಯವಾಗಿ ಮೇಲೆ ಬಂದವರುಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ ಧ್ರುವನಾರಾಯಣ ರಾಜಕೀಯ ಹೋರಾಟದಿಂದ ಸ್ವಂತ ಶಕ್ತಿಯಿಂದ ರಾಜಕೀಯವಾಗಿ ಮೇಲೆ ಬಂದವರು, 2016ರಲ್ಲಿ ನಾನು ಶಾಸಕನಾದಾಗ ನನಗೆ ವರುಣ ಕ್ಷೇತ್ರದ ಪರಿಚಯವಿರಲಿಲ್ಲ, ಆಗ ಸಂಸದರಾಗಿದ್ದ ಧ್ರುವನಾರಾಯಣ ನನಗೆ ರಾಜಕೀಯ ಮಾರ್ಗದರ್ಶಕರಾಗಿ ಕ್ಷೇತ್ರದ ಪ್ರತಿ ಹಳ್ಳಿಗೂ ನನ್ನ ಜೊತೆ ಬಂದು ಕಾರ್ಯಕರ್ತರ, ಮುಖಂಡರ ಪರಿಚಯ ಮಾಡಿಕೊಟ್ಟು ಆತ್ಮವಿಶ್ವಾಸ ತುಂಬಿದ್ದರು, ನಮ್ಮಂತಹ ಯುವ ರಾಜಕಾರಣಿಗಳಿಗೆ ಅವರು ಪ್ರೇರಣೆಯಾಗಿದ್ದರು, ದಿನದ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದ, ಜನರೊಂದಿಗೆ ಬೆರತು ಅವರ ಕಷ್ಟ ಸುಖ ಅರಿಯುತ್ತಿದ್ದ ದಣಿವರಿಯದ ರಾಜಕಾರಣಿ ಧ್ರುವನಾರಾಯಣ ಅವರನ್ನು ನಮ್ಮ ಜನ ಮರೆಯುವುದಿಲ್ಲ ಎಂದು ಹೇಳಿದರು. 3ನೇ ಬಾರಿಗೆ ಉದ್ಯೋಗ ಮೇಳಶಾಸಕ ದರ್ಶನ ಧ್ರುವನಾರಾಯಣ ಮಾತನಾಡಿ, ನನ್ನ ತಂದೆ ಆರ್‌ಧ್ರುವನಾರಾಯಣ ಈ ಭಾಗದಲ್ಲಿ ಎರಡು ಬಾರಿ ಸಂಸದ, ಶಾಸಕರಾಗಿ ಪ್ರಾಮಾಣಿಕ ಸೇವೆ ಮಾಡಿದ್ದರು, ಅವರ ಹೆಸರಿನಲ್ಲಿ ಅವರ ಜನ್ಮದಿನದ ನೆನಪಿಗಾಗಿ ಸತತ 3ನೇ ಬಾರಿಗೆ ಉದ್ಯೋಗ ಮೇಳ ನಡೆಸಲಾಗಿದೆ, ಆ ಮೂಲಕ ನೂರಾರು ಯುವಕರು ಉದ್ಯೋಗ ಪಡೆದಿದ್ದಾರೆ, ಈ ವರ್ಷವೂ ಕೂಡ ಸುಮಾರು 800 ಜನರು ಉದ್ಯೋಗ ಆಕಾಂಕ್ಷಿಗಳಾಗಿ ಮೇಳದಲ್ಲಿ ಭಾಗವಹಿಸಿದ್ದಾರೆ.

ಸಂಸದ ಬಿ.ಎನ್. ಚಂದ್ರಪ್ಪ, ಮಾಜಿ ಸಂಸದ ಮುದ್ದುಹನುಮೇಗೌಡ, ಶಾಸಕರಾದ ಪುಟ್ಟರಂಗಶೆಟ್ಟಿ, ಅನಿಲ್ ಚಿಕ್ಕಮಾದು, ಗಣೇಶ್ ಪ್ರಸಾದ್, ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ನರೇಂದ್ರ, ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಸಿ.ಎಂ. ಶಂಕರ್, ಶ್ರೀಕಂಠನಾಯಕ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ. ಮಾರುತಿ, ಕಾಡಾ ಅಧ್ಯಕ್ಷ ಮರಿಸ್ವಾಮಿ, ವಾಲ್ಮೀಕಿ ನಿಗಮ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಪ್ರತಿಮಾ ಪ್ರಸಾದ್, ರಾಮಸ್ವಾಮಿ, ಭರತ್ ರಾಮಸ್ವಾಮಿ, ಕಾಂಗ್ರೆಸ್ ಉಸ್ತುವಾರಿ ಸೋಮೇಶ್, ವಿಶ್ವಕರ್ಮ ನಿಗಮ ಮಾಜಿ ಅಧ್ಯಕ್ಷ ನಂದಕುಮಾರ್, ಕೆಪಿಸಿಸಿ ಸದಸ್ಯ ಅಕ್ಬರ್ ಅಲಿ, ದೀಪಂ, ಮಾಜಿ ಸದಸ್ಯೆ ಲತಾಸಿದ್ಧಶೆಟ್ಟಿ, ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್, ನಗರಸಭಾ ಮಾಜಿ ಉಪಾಧ್ಯಕ್ಷ ದೊರೆಸ್ವಾಮಿ, ಮುಖಂಡರಾದ ಇಂದನ್ ಬಾಬು, ಕುಳ್ಳಯ್ಯ, ರಾಜೇಶ್, ನಾಗರಾಜು, ಪ್ರದೀಪ್ ಕುಮಾರ್, ದೊರೆಸ್ವಾಮಿನಾಯಕ, ಮಹದೇವಪ್ಪ, ಅಬ್ದುಲ್ ಖಾದರ್, ಕಾಂಗ್ರೆಸ್ ಕಾರ್ಮಿಕ ವಿಭಾಗ ಅಧ್ಯಕ್ಷ ಗೋವಿಂದರಾಜು, ಅಕ್ರಮ ಸಕ್ರಮ ಸಮಿತಿ ಸದಸ್ಯ ಹಾಡ್ಯ ಜಯರಾಮು, ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷ ಶಿವಣ್ಣ, ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ನಗರಸಭಾ ಸದಸ್ಯರಾದ ಎಸ್.ಪಿ. ಮಹೇಶ್, ಗಂಗಾಧರ್, ಪ್ರದೀಪ್, ಕೆ‌.ಎಂ. ಬಸವರಾಜು, ಇದ್ದರು.