ಸಾರಾಂಶ
ಸೋಮರಡ್ಡಿ ಅಳವಂಡಿ ಕೊಪ್ಪಳ
ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ ಹಾಲು ಒಕ್ಕೂಟದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಮೊದಲ ಸಭೆ ಆ. 8ರಂದು ನಿಗದಿಯಾಗಿದ್ದು, ಡೆಲಿಗೆಟ್ಸ್ ( ಕೆಎಂಎಫ್ ಪ್ರತಿನಿಧಿ) ಆಯ್ಕೆ ಚರ್ಚೆ ಮುನ್ನೆಲೆಗೆ ಬಂದಿದೆ.ರಾಬಕೊವಿ ಅಧ್ಯಕ್ಷರಾಗಿ ಶಾಸಕ ರಾಘವೇಂದ್ರ ಹಿಟ್ನಾಳ ಆಯ್ಕೆಯಾದ ಮೇಲೆ ನಡೆಯುತ್ತಿರುವ ಮೊದಲ ಸಭೆ ಇದಾಗಿದ್ದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿ ಕೊನೆಗೆ ಚುನಾವಣೆಯ ವೇಳೆಗೆ ಸ್ಪರ್ಧೆಯಿಂದ ಹಿಂದೆ ಸರಿದ ಮಾಜಿ ಶಾಸಕ ಭೀಮಾ ನಾಯ್ಕ ರಾಬಕೊವಿ ಡೆಲಿಗೆಟ್ಸ್ ಆಯ್ಕೆಗಾಗಿ ಭಾರಿ ಕಸರತ್ತು ನಡೆಸಿದ್ದು, ಮೊದಲ ಸಭೆಯಲ್ಲಿಯೇ ಈ ಚರ್ಚೆ ಮುನ್ನೆಲೆಗೆ ಬರುತ್ತಾ ಎನ್ನುವ ಕುತೂಹಲ ಕೆರಳಿಸಿದೆ.ಮಾಜಿ ಶಾಸಕ ಭೀಮಾ ನಾಯ್ಕ ಚುನಾವಣೆಗೂ ಮುನ್ನವೇ ಹೇಳಿಕೆ ನೀಡಿ, ನನಗೆ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯುವಂತೆ ಸೂಚಿಸಿದ್ದಾರೆ. ಆದರೆ, ಡೆಲಿಗೆಟ್ಸ್ ಆಯ್ಕೆ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದರು. ಆದರೆ, ಚುನಾವಣೆಯ ಬಳಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಈ ಮಾತುಕತೆಯ ಒಪ್ಪಂದವನ್ನು ತಳ್ಳಿ ಹಾಕಿದ್ದರು. ಅಂಥ ಯಾವುದೇ ಒಪ್ಪಂದ ಆಗಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಹೀಗಾಗಿ, ಈಗ ಆ. 8ರಂದು ಸಭೆ ನಿಗದಿಯಾಗಿರುವುದರಿಂದ ಡೆಲಿಗೆಟ್ಸ್ ಆಯ್ಕೆಯ ಕುರಿತು ಚರ್ಚೆ ಮತ್ತೆ ಮನ್ನೆಲೆಗೆ ಬಂದಿದೆ.
ಕೆಎಂಎಫ್ ಚುನಾವಣೆ ವೇಳೆ:ಡೆಲಿಗೆಟ್ಸ್ ಆಯ್ಕೆ ಮಾಡುವುದು ಕೆಎಂಎಫ್ ಅಧ್ಯಕ್ಷ ಚುನಾವಣೆ ನಡೆಯುವ ವೇಳೆಗೆ ಡೆಲಿಗೆಟ್ಸ್ ಆದವರಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವ ಹಾಗೂ ಮತ ಚಲಾಯಿಸುವ ಹಕ್ಕು ಬರುತ್ತದೆ. ಹೀಗಾಗಿ, ಡೆಲಿಗೆಟ್ಸ್ ಹುದ್ದೆಗೆ ಭಾರಿ ಡಿಮಾಂಡ್ ಬಂದಿದೆ.
ರಾಬಕೊವಿ ಅಧ್ಯಕ್ಷನಾಗಿ ಆಯ್ಕೆಯಾಗಿರುವ ಶಾಸಕ ರಾಘವೇಂದ್ರ ಹಿಟ್ನಾಳ ಸಹ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಮಾಡುವ ಆಕಾಂಕ್ಷಿಯಾಗಿರುವುದರಿಂದ ಡೆಲಿಗೆಟ್ಸ್ ಹುದ್ದೆಗೆ ಸಹಜವಾಗಿಯೇ ಮಹತ್ವ ಬಂದಿದೆ. ಆದರೆ, ಈ ವಿಷಯದಲ್ಲಿ ಮಾಜಿ ಶಾಸಕ ಭೀಮಾ ನಾಯ್ಕ ಶತಾಯ ಪ್ರಯತ್ನಪಡುತ್ತಿದ್ದಾರೆ. ಅಧ್ಯಕ್ಷ ಸ್ಥಾನ ಬಿಟ್ಟು ಕೊಟ್ಟಿರುವುದರಿಂದ ಡೆಲಿಗೆಟ್ಸ್ ಹುದ್ದೆಗಾದರೂ ಅವಕಾಶ ನೀಡುವಂತೆ ಸರ್ಕಾರದ ಮಟ್ಟದಲ್ಲಿ ಶಕ್ತಿಮೀರಿ ಶ್ರಮಿಸುತ್ತಿದ್ದಾರೆ.ಹೀಗಾಗಿ, ಬಳ್ಳಾರಿಯಲ್ಲಿ ನಡೆಯುವ ಮೊದಲ ಸಭೆಗೆ ಮಹತ್ವ ಬಂದಿದೆ. ಈ ನಡುವೆ ಕೆಲವು ಸದಸ್ಯರು ಸಹ ಡೆಲಿಗೆಟ್ಸ್ ಹುದ್ದೆಯ ಆಕಾಂಕ್ಷಿಯಾಗಿದ್ದು, ಮೊದಲ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯದೇ ಇದ್ದರೂ ಚರ್ಚೆಯಂತೂ ಆಗುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.
ನೇಮಕಾತಿ ಕುರಿತು ಚರ್ಚೆ: ರಾಬಕೊವಿ ಒಕ್ಕೂಟದಲ್ಲಿ ಖಾಲಿ ಇದ್ದ 65 ಹುದ್ದೆಗಳಿಗೆ ಈಗಾಗಲೇ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಅದು ಇನ್ನು ಪೂರ್ಣಗೊಂಡಿಲ್ಲ. ಹೀಗಾಗಿಯೇ ಅಧ್ಯಕ್ಷ ಸ್ಥಾನಕ್ಕೆ ಅಷ್ಟೊಂದು ಪೈಪೋಟಿಯಾಗಿ ಕೋಟಿ ಕೋಟಿ ವ್ಯವಹಾರ ಲೆಕ್ಕಾಚಾರ ನಡೆದಿದ್ದು ಮತ್ತು ಚರ್ಚೆಯಾಗಿದ್ದು. ಅದರಲ್ಲೂ ಈಗಾಗಲೇ ನೇಮಕಾತಿ ಪ್ರಕ್ರಿಯೆ ನಡೆದು ಸಂದರ್ಶನ ಹಂತದಲ್ಲಿರುವ ನೇಮಕಾತಿಗಳನ್ನು ಮುಂದುವರಿಸಬೇಕೇ ಅಥವಾ ಮತ್ತೆ ಹೊಸದಾಗಿ ಅರ್ಜಿ ಕರೆಯುವ ಸಾಧ್ಯತೆ ಕುರಿತು ಚರ್ಚೆಯಾಗಲಿದೆ ಎಂದು ಹೇಳಲಾಗಿದೆ.ಬಹುತೇಕ ಸದಸ್ಯರು ನೇಮಕಾತಿ ಪ್ರಕ್ರಿಯೆ ವಿಸ್ತರಣೆ ಮಾಡಿ, ಮತ್ತೊಮ್ಮೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡುವಂತೆಯೇ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಈ ಬಗ್ಗೆ ಕಾನೂನು ಅವಕಾಶಗಳು ಏನು ಎನ್ನುವುದು ಮುಖ್ಯವಾಗುತ್ತದೆ.
ರಾಬಕೊವಿ ಸಾಮಾನ್ಯ ಸಭೆಯನ್ನು ಆ. 8ರಂದು ನಿಗದಿ ಮಾಡಲಾಗಿದ್ದು, ಸಭೆಯಲ್ಲಿ ನಿರ್ದೇಶಕರ ಸಲಹೆ, ಸೂಚನೆ ಪಡೆದು ಅಗತ್ಯ ಚರ್ಚೆ ಮಾಡಲಾಗುವುದು ಎಂದು ಶಾಸಕರು ಹಾಗೂ ಅಧ್ಯಕ್ಷರು ರಾಬಕೊವಿ ರಾಘವೇಂದ್ರ ಹಿಟ್ನಾಳ ತಿಳಿಸಿದ್ದಾರೆ.