ರಬಕವಿ ಚಾವಡಿಗೆ ಬಂದೀತೆ ಹಳೆಯ ವೈಭವ?

| Published : Feb 10 2025, 01:46 AM IST

ಸಾರಾಂಶ

ರಬಕವಿ-ಬನಹಟ್ಟಿ ತಾಲೂಕು ಘೋಷಣೆಯಾಗಿ ಎರಡು ದಶಕ ಕಳೆದರೂ ಇಲ್ಲಿನ ಸರ್ಕಾರಿ ಕಟ್ಟಡಗಳು ಮಾತ್ರ ಅನಾಥವಾಗಿವೆ. ನೂತನ ತಾಲೂಕಿಗೆ ಬೇಕಾದ ಕಚೇರಿಗಳು ಆರಂಭವಾಗುತ್ತಿಲ್ಲ ಎಂದು ನಾಗರಿಕರು ಒಂದೆಡೆ ದೂರುತ್ತಿದ್ದರೆ, ಒಂದು ಕಾಲದಲ್ಲಿ ವೈಭವದಿಂದ ಮೆರೆದ ಸರ್ಕಾರಿ ಕಟ್ಟಡಗಳು ಇಂದು ಬಳಕೆಯಾಗದೇ ಪಾಳು ಬಿದ್ದಿವೆ.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಬಕವಿ-ಬನಹಟ್ಟಿ ತಾಲೂಕು ಘೋಷಣೆಯಾಗಿ ಎರಡು ದಶಕ ಕಳೆದರೂ ಇಲ್ಲಿನ ಸರ್ಕಾರಿ ಕಟ್ಟಡಗಳು ಮಾತ್ರ ಅನಾಥವಾಗಿವೆ. ನೂತನ ತಾಲೂಕಿಗೆ ಬೇಕಾದ ಕಚೇರಿಗಳು ಆರಂಭವಾಗುತ್ತಿಲ್ಲ ಎಂದು ನಾಗರಿಕರು ಒಂದೆಡೆ ದೂರುತ್ತಿದ್ದರೆ, ಒಂದು ಕಾಲದಲ್ಲಿ ವೈಭವದಿಂದ ಮೆರೆದ ಸರ್ಕಾರಿ ಕಟ್ಟಡಗಳು ಇಂದು ಬಳಕೆಯಾಗದೇ ಪಾಳು ಬಿದ್ದಿದ್ದು, ತಹಸೀಲ್ದಾರ್‌ ಕಚೇರಿ ಸೇರಿದಂತೆ ಕೆಲವು ಕಚೇರಿಗಳು ಬೇರೆ ಇಲಾಖೆಗಳ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಅವಳಿ ನಗರದ ಬನಹಟ್ಟಿ ಹಳೇ ಪೊಲೀಸ್‌ ಠಾಣೆ, ನಗರಸಭೆ ಕಚೇರಿಯ ಹಳೇ ಕಟ್ಟಡ, ರಬಕವಿಯ ಚಾವಡಿ ಗಲ್ಲಿಯಲ್ಲಿದ್ದ ಸರ್ಕಾರಿ ಚಾವಡಿ ಕಟ್ಟಡ ಸಂಪೂರ್ಣ ಕುಸಿದಿದೆ. ನಗರ ಭೂಮಾಪನ ಇಲಾಖೆ ಕಚೇರಿ, ನಗರ ಯೋಜನಾ ಪ್ರಾಧಿಕಾರ, ರಬಕವಿ ಕಂದಾಯ ಇಲಾಖೆಯ ಚಾವಡಿ ಸೇರಿದಂತೆ ಅನೇಕ ಕಚೇರಿಗಳು ಬೇರೆ ಇಲಾಖೆ ಇಲ್ಲವೇ ಬಾಡಿಗೆ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿವೆ.

ರಬಕವಿ ನಗರದಲ್ಲಿ ಪಾಸ್‌ಪೋರ್ಟ್ ಸೇರಿ ಯಾವುದೇ ಪೊಲೀಸ್‌ ಕೆಲಸಗಳಿಗೆ ದೂರದ ತೇರದಾಳ ಪಟ್ಟಣಕ್ಕೆ ತೆರಳಬೇಕಿದೆ. ರಬಕವಿ ಉಪಠಾಣೆಯಲ್ಲಿ ಸಾಮಾನ್ಯ ಪ್ರಕರಣಗಳ ದೂರು ಸ್ವೀಕರಿಸುವುದಿಲ್ಲ. ಚಂದ್ರಕಾಂತ ದುರಡಿ ರಬಕವಿ ಪೊಲೀಸ್‌ ಠಾಣೆ ಮತ್ತು ಸಿಬ್ಬಂದಿ ನಿವಾಸಕ್ಕೆಂದು ದೇಣಿಗೆಯಾಗಿ ನೀಡಿದ್ದ ಕೋಟ್ಯಂತರ ಬೆಲೆಬಾಳುವ ಜಾಗೆಯಲ್ಲಿ ಬೋರ್ಡ್‌ ಹಾಕಿದ್ದು ಬಿಟ್ಟರೆ ಆಳೆತ್ತರ ಗಿಡಗಂಟಿಗಳು ಬೆಳೆದು ನಿಂತಿವೆ. ಕೂಗಳತೆ ದೂರದಲ್ಲಿರುವ ಬನಹಟ್ಟಿ ಪೊಲೀಸ್‌ ಠಾಣೆ ವ್ಯಾಪ್ತಿಗೆ ರಬಕವಿಯನ್ನು ಸೇರ್ಪಡೆ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಪರಿಣಾಮ ಶೂನ್ಯ. ಬನಹಟ್ಟಿಯ ಹಳೇ ಪೊಲೀಸ್‌ ಠಾಣೆ ಜಾಗೆಯಲ್ಲಿ ಕಟ್ಟಡ ನಿರ್ಮಿಸಿ ನಗರಸಭೆ ವ್ಯಾಪ್ತಿಯ ಪ್ರದೇಶವಾದ ರಬಕವಿ-ಬನಹಟ್ಟಿ, ರಾಮಪುರ, ಹೊಸೂರ ಪ್ರದೇಶಗಳನ್ನು ಸೇರಿಸಿ ನಗರ ಠಾಣೆ ಮತ್ತು ನೂತನ ಕಟ್ಟಡದಲ್ಲಿ ಗ್ರಾಮೀಣ ಠಾಣೆ ಆರಂಭಿಸಿದಲ್ಲಿ ರಬಕವಿ ಜನತೆಗೆ ದೂರದ ತೇರದಾಳಕ್ಕೆ ತೆರಳುವ ದಂಡ ಮತ್ತು ಶಿಕ್ಷೆ ತಪ್ಪಲಿದೆಎಂಬುದು ಪ್ರಜ್ಞಾವತರ ಅನಿಸಿಕೆ.

ನಗರ ಯೋಜನಾ ಪ್ರಾಧಿಕಾರದ ಕಚೇರಿ ಬನಹಟ್ಟಿಯ ಖಾಸಗಿ ಒಡೆತನದ ಜಾಗೆಯಲ್ಲಿದ್ದು, ಮಾಸಿಕ ಬಾಡಿಗೆ ತುಂಬಲಾಗುತ್ತದೆ. ನಗರ ಭೂಮಾಪನ ಕಚೇರಿ ನಗರಸಭೆ ಒಡೆತನದ ಜಾಗೆಯಲ್ಲಿದೆ. ಹಳೇ ನಗರಸಭೆ ಕಟ್ಟಡ ಇಲ್ಲವೇ ರಬಕವಿ ಸರ್ಕಾರಿ ಹಳೇ ಚಾವಡಿ ಜಾಗೆಯಲ್ಲಿ ಕಟ್ಟಡ ನಿರ್ಮಿಸಿದರೆ ಅನುಕೂಲವಾಗಲಿದೆ. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಎರಡು ದಶಕಗಳಿಂದ ಸುಸಜ್ಜಿಯ ಕಚೇರಿಗಳಿಲ್ಲದೇ ಜನರು ಪರದಾಡುವಂತಾಗಿದೆ.ಸರ್ಕಾರದ ಮಟ್ಟದಲ್ಲಿ ಎರಡು ದಶಕಗಳಿಂದ ಪ್ರತ್ಯೇಕ ಪೊಲೀಸ್‌ ಠಾಣೆ ಮಂಜೂರು ಮಾಡಲು ಹಲವಾರು ಬಾರಿ ಮನವಿ ಮಾಡಿದ್ದರೂ ಫಲಕಾರಿಯಾಗಿಲ್ಲ. ತಾಲೂಕು ಕೇಂದ್ರವಾಗಿದ್ದರೂ ಅವಳಿ ನಗರಗಳಿಗೆ ಬೇಕಾದ ಕಚೇರಿಗಳು ಆರಂಭವಾಗಿಲ್ಲ. ಸಂಘಟಿತ ಹೋರಾಟಕ್ಕಿಳಿಯುವುದೇ ನಾಗರಿಕರ ನಿರ್ಧಾರವಾಗಿದೆ.

- ಸಂಜಯ ವೀರಪ್ಪ ತೆಗ್ಗಿ ಮಾಜಿ ನಗರಾಧ್ಯಕ್ಷರು, ನಗರಸಭೆ ಸದಸ್ಯರು ರಬಕವಿಅವಳಿ ನಗರಗಳ ಸರ್ಕಾರಿ ಕಟ್ಟಡಗಳ ನಿರ್ವಹಣೆಗೆ ಪ್ರತ್ಯೇಕ ಅನುದಾನ ಬೇಕು. ರಬಕವಿ ನಗರಕ್ಕೆ ಪೊಲೀಸ್‌ ಠಾಣೆ ಮಂಜೂರಾತಿ ಇಲ್ಲವೇ ರಬಕವಿ ನಗರವನ್ನು ಬನಹಟ್ಟಿ ಠಾಣೆಯಲ್ಲಿ ಸೇರ್ಪಡೆಗೊಳಿಸಲು ಹಲವಾರು ಬಾರಿ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಆದರೂ ಆಡಳಿತಾತ್ಮಕ, ತಾಂತ್ರಿಕ ಸಮಸ್ಯೆಗಳಿಂದ ಜನತೆಯ ಬೇಡಿಕೆ ಪೂರ್ಣಗೊಂಡಿಲ್ಲ. ತಾಲೂಕಿನ ಎಲ್ಲ ಕಚೇರಿಗಳ ಆರಂಭಕ್ಕೆ ಸರ್ಕಾರದ ಗಮನಕ್ಕೆ ತಂದು ಆಗ್ರಹಿಸಿದ್ದೇವೆ.

-ಸಿದ್ದು ಕೆ.ಸವದಿ ಶಾಸಕರು, ತೇರದಾಳ ವಿಧಾನಸಭಾ ಕ್ಷೇತ್ರ