ಸಿಎಂ ರಾಜೀನಾಮೆ ಬಳಿಕ ಕಾಂಗ್ರೆಸ್‌ನಲ್ಲಿ ಸಿಎಂ ಆಗಲು ರೇಸ್!..

| Published : Aug 29 2024, 12:46 AM IST

ಸಾರಾಂಶ

ಚಾಮರಾಜನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸದಸ್ಯತಾ ಅಭಿಯಾನ ಜಿಲ್ಲಾ ಮಟ್ಟದ ಕಾರ್ಯಾಗಾರಕ್ಕೆ ಮಾಜಿ ಸಂಸದ ಮುನಿಸ್ವಾಮಿ ಚಾಲನೆ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮುಖ್ಯಮಂತ್ರಿ ಸಿದ್ದರಾಮಯ್ಯ ಆ.೨೯ರಂದು ನ್ಯಾಯಾಲಯದ ತೀರ್ಪು ಹೊರಬರುತ್ತಿದ್ದಂತೆ ರಾಜೀನಾಮೆ ನೀಡಲಿದ್ದಾರೆ. ನಂತರ ಕಾಂಗ್ರೆಸ್ ಮನೆಯ ಕತೆ ಮೂರು ಬಾಗಿಲಲ್ಲ. ೧೨ ಬಾಗಿಲು ಆಗಲಿದೆ ಎಂದು ಮಾಜಿ ಸಂಸದ ಹಾಗೂ ಜಿಲ್ಲಾ ಬಿಜೆಪಿ ಉಸ್ತುವಾರಿ ಮುನಿಸ್ವಾಮಿ ವ್ಯಂಗ್ಯವಾಡಿದರು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸದಸ್ಯತಾ ಅಭಿಯಾನ ಜಿಲ್ಲಾ ಮಟ್ಟದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ದಲಿತರ ಪರ, ಹಿಂದುಳಿದ ವರ್ಗಗಳ ಮೇರು ನಾಯಕ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಆ ವರ್ಗಗಳಿಗೆ ಮೀಸಲಿಟ್ಟಿದ್ದ ಹಣವನ್ನು ನುಂಗಿ ಹಾಕಿದ್ದಾರೆ. ಎಸ್‌ಇಪಿ, ಟಿಎಸ್‌ಪಿ ಯೋಜನೆಗೆ ೨೭ ಸಾವಿರ ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗೆ ಬಳಸಿ, ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಬಡವರಿಗೆ ದೊರೆಯಬೇಕಾಗಿದ್ದ ಸವಲತ್ತುಗಳಿಗೆ ಕತ್ತರಿ ಹಾಕಿದ್ದಾರೆ. ಇಂಥವರ ಬಗ್ಗೆ ಕಾಂಗ್ರೆಸ್‌ನ ಬಿಸ್ಕೆಟ್ ದಲಿತ ನಾಯಕರು ಅವರ ಪರವಾಗಿ ನಿಂತು ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಇದು ಅಕ್ಷಮ್ಯ. ಇಷ್ಟಾಗಿಯೂ ಇಂದು ಸಿಎಂ ವಿರುದ್ಧ ದಲಿತರು ಜಾಗೃತರಾಗಿ ಪ್ರತಿಭಟನೆ ಮಾಡಿದ್ದಾರೆ. ಇಂಥವರು ಅಧಿಕಾರದಲ್ಲಿ ಮುಂದುವರಿಯಬೇಕಾ?ಎಂದು ಮುನಿಸ್ವಾಮಿ ಖಾರವಾಗಿ ಪ್ರಶ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್‌ಗೆ ಹೈಕೋಟ್‌ನಲ್ಲಿ ಅನುಮತಿ ದೊರೆಯಲಿದೆ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ಖಚಿತ ಎಂದು ಸ್ವತಃ ಕಾಂಗ್ರೆಸ್‌ನಲ್ಲಿರುವ ನಾಯಕರಿಗೆ ಗ್ಯಾರಂಟಿಯಾಗಿದೆ. ಹೀಗಾಗಿ ಕಾಂಗ್ರೆಸ್‌ನಲ್ಲಿ ಒಂದು ಮನೆ ಮೂರು ಬಾಗಿಲು ಎಂಬ ಗಾದೆಯಂತೆ ಕೇವಲ ಶಿವಕುಮಾರ್, ಖರ್ಗೆ, ಪರಮೇಶ್ವರ್ ಅವರು ಸಿಎಂ ಅಲ್ಲ. ಇದರೊಂದಿಗೆ ಡಜನ್‌ಗಟ್ಟಲೆ ನಾಯಕರು ಹೊಸ ಡ್ರೆಸ್ ಹೊಲಿಸಿಕೊಂಡು ಕಾಯುತ್ತಿದ್ದಾರೆ. ಈ ಸಾಲಿನಲ್ಲಿ ಪ್ರಿಯಾಂಕ ಖರ್ಗೆ, ಸತೀಶ್ ಚಾರಕಿ ಹೊಳಿ, ಎಂ.ಬಿ. ಪಾಟೀಲ್, ಎಚ್.ಸಿ.ಮಹದೇವಪ್ಪ ಸೇರಿದಂತೆ ೧೨ ಮಂದಿ ಸಿಎಂ ರೇಸ್‌ನಲ್ಲಿದ್ದಾರೆ ಎಂದರು. ಇನ್ನು ಮೂರು ವರ್ಷಕ್ಕೆ ಚುನಾವಣೆ ಬರುವುದಿಲ್ಲ. ಯಾವ ಸಂದರ್ಭದಲ್ಲಾದರೂ ಚುನಾವಣೆ ಬರಬಹುದು. ನಮ್ಮ ಪಕ್ಷದ ಕಾರ್ಯಕರ್ತರು ಜಾಗೃತರಾಗಿ ಸಂಘಟಿತರಾಗಬೇಕು. ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಿ, ಕಾಂಗ್ರೆಸ್ ಜನವಿರೋಧಿ ನೀತಿ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಬೇಕು ಎಂದು ಮುನಿಸ್ವಾಮಿ ತಿಳಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್. ನಿರಂಜನ್‌ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿಯನ್ನು ಸದೃಢವಾಗಿ ಸಂಘಟಿಸಲು ಸದಸ್ಯತ್ವ ಅಭಿಯಾನ ಉತ್ತಮ ವೇದಿಕೆಯಾಗಿದೆ. ಸೆ.೧ ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸದಸ್ಯತ್ವವನ್ನು ಪಡೆದುಕೊಳ್ಳುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಸೆ.೨ ರಿಂದ ದೇಶಾದ್ಯಂತ ಅಭಿಯಾನ ಆರಂಭವಾಗಲಿದೆ. ಮಿಸ್ಡ್ ಕಾಲ್ ಮಾಡಿ, ಸದಸ್ಯತ್ವ ಪಡೆಯಬೇಕು. ಕಾರ್ಯಕರ್ತರು ಸಕ್ರಿಯ ಸದಸ್ಯರಾಗುವ ಮೂಲಕ ಹೊಸ ಮತದಾರರನ್ನು ಪಕ್ಷಕ್ಕೆ ನೋಂದಣಿ ಮಾಡಿಸಬೇಕು. ಪ್ರತಿ ಬೂತ್‌ನಲ್ಲಿ ಕನಿಷ್ಟ ೩೦೦ ಸದಸ್ಯರನ್ನು ನೋಂದಣಿ ಮಾಡಬೇಕು. ಆ ಮೂಲಕ ಜಿಲ್ಲೆಯಲ್ಲಿ ಪಕ್ಷನ್ನು ಸದೃಢಗೊಳಿಸಲು ಮುಂದಾಗಬೇಕು ಎಂದರು. ಸದಸ್ಯತಾ ಅಭಿಯಾನದ ಸಂಚಾಲಕ ಹೊನ್ನೂರು ಮಹದೇವಸ್ವಾಮಿ, ಸದಸ್ಯತಾ ಅಭಿಯಾನ ಕುರಿತು ಮಾಹಿತಿಗಳನ್ನು ನೀಡಿದರು. ಕಾರ್ಯಾಗಾರದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್, ಮಾಜಿ ಶಾಸಕ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಎಸ್.ಬಾಲರಾಜು, ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಓಬಿಸಿ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ನೂರೊಂದುಶೆಟ್ಟಿ, ಮಾಜಿ ಅಧ್ಯಕ್ಷರಾದ ನಾರಾಯಣಪ್ರಸಾದ್, ಆರ್. ಸುಂದರ್, ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ, ಡಾ. ಎ.ಆರ್. ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್ ಇದ್ದರು.