ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಗಮನ ಸೆಳೆದ ರಾಧಾ- ಕೃಷ್ಣ ವೇಷಧಾರಿಗಳು

| Published : Aug 17 2025, 01:40 AM IST

ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಗಮನ ಸೆಳೆದ ರಾಧಾ- ಕೃಷ್ಣ ವೇಷಧಾರಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಭಾರತೀಯ ಸಂಸ್ಕೃತಿಯನ್ನು ನಾವೆಲ್ಲರೂ ಉಳಿಸಿಕೊಳ್ಳಬೇಕು. ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅನೇಕ ವರ್ಷಗಳಿಂದ ದೇಶದಲ್ಲಿ ಆಚರಿಸಲಾಗುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ, ಹರಿದಿನಗಳಿಗೆ ವಿಶೇಷ ಮಹತ್ವವಿದೆ. ಭಗವಾನ್‌ ಶ್ರೀ ಕೃಷ್ಣರು ಸತ್ಯ, ನ್ಯಾಯ, ನೀತಿ ಮತ್ತು ಧರ್ಮದ ರಕ್ಷಕರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಕೃಷ್ಣ ಜನ್ಮಾಷ್ಟಮಿ ಆಚರಣೆಯು ನಮ್ಮೆಲ್ಲರಿಗೂ ಒಂದು ಸಂಭ್ರಮ, ನಮ್ಮ ಮಕ್ಕಳಿಗೆ ರಾಧೆ- ಕೃಷ್ಣರ ವೇಷಭೂಷಣಗಳನ್ನು ತೊಡಿಸಿ ಪ್ರೀತಿ ಸ್ವರೂಪಿ ಭಗವಂತನನ್ನು ಕಾಣುತ್ತೇವೆ. ಅಷ್ಟೇ ಅಲ್ಲದೆ ದೇಶ ಕಂಡ ಮಹಾನ್‌ ನಾಯಕರನ್ನು ಪರಿಚಯಿಸಿ ಅವರ ವೇಷಭೂಷಣಗಳನ್ನು ತೊಡಿಸಿ ಅವರ ಆದರ್ಶ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಬೇಕು ಎಂದು ಶಾಲೆಯ ಪ್ರಾಂಶುಪಾಲ ಎಂ.ವಿ.ಚಿಕ್ಕಜ್ಜಪ್ಪ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಬಿಜಿಎಸ್ ಶಾಲೆಯಲ್ಲಿ ಶನಿವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಧೆ- ಕೃಷ್ಣರ ವೇಷಧಾರಿಗಳಾದ ಮಕ್ಕಳು ಮತ್ತು ಅತಿಥಿಗಳು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.

ನಮ್ಮ ಭಾರತೀಯ ಸಂಸ್ಕೃತಿಯನ್ನು ನಾವೆಲ್ಲರೂ ಉಳಿಸಿಕೊಳ್ಳಬೇಕು. ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅನೇಕ ವರ್ಷಗಳಿಂದ ದೇಶದಲ್ಲಿ ಆಚರಿಸಲಾಗುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ, ಹರಿದಿನಗಳಿಗೆ ವಿಶೇಷ ಮಹತ್ವವಿದೆ. ಭಗವಾನ್‌ ಶ್ರೀ ಕೃಷ್ಣರು ಸತ್ಯ, ನ್ಯಾಯ, ನೀತಿ ಮತ್ತು ಧರ್ಮದ ರಕ್ಷಕರಾಗಿದ್ದಾರೆ ಎಂದು ತಿಳಿಸಿದರು.

ಮುಖ್ಯ ಶಿಕ್ಷಕರಾದ ಮಂಜೇಶ್‌ ರೆಡ್ಡಿ ಮಾತನಾಡಿ, ಶ್ರೀ ಕೃಷ್ಣನ ಜನನವು ಕಂಸನ ಸೆರೆಮನೆಯಲ್ಲಿ ಆಯ್ತು, ಆದರೆ ಬೆಳೆದಿದ್ದು ನಂದನವನದ ಯಶೋಧೆಯ ಪಾಲನೆಯಲ್ಲಿ, ನಂದ ಮಹಾರಾಜನ ಪಿತೃತ್ವದಲ್ಲಿ. ಬೃಂದಾವನದ ಸರ್ವರ ಪ್ರೀತಿ ಪಾತ್ರನಾಗಿ ಬೆಳೆದು ಹಲವಾರು ರಾಕ್ಷಸರನ್ನು ಸಂಹರಿಸಿದ ವಿಶ್ವ ರೂಪಿ ಶ್ರೀಕೃಷ್ಣ ಪರಮಾತ್ಮ. ಶ್ರೀ ಕೃಷ್ಣನ ಆಗರ್ಭ ಶ್ರೀಮಂತಿಕೆ, ಕುಚೇಲನ ಕಡು ಬಡತನ ಇವೆರಡು ಅವರ ಸ್ನೇಹಕ್ಕೆ ಎಂದೂ ಅಡ್ಡಿಯಾಗಲಿಲ್ಲ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮುಖ್ಯಶಿಕ್ಷಕಿ ಸುಶೀಲಮ್ಮ, ಶ್ರೀಕೃಷ್ಣ ಧರ್ಮದ ಪ್ರತೀಕ. ಅಧರ್ಮ ಹೆಚ್ಚಾದ ಕಡೆ ಕೃಷ್ಣ ಅವತರಿಸಿ ಧರ್ಮ ಮರು ಸ್ಥಾಪಿಸುತ್ತಾನೆ. ಶ್ರೀ ಕೃಷ್ಣನ ನೆನೆದರೆ ಎಲ್ಲಾ ಕಷ್ಟಗಳು ಪರಿಹಾರಗೊಳ್ಳುತ್ತವೆ ಎಂದು ಹೇಳಿದರು.

ಶಾಲೆಯಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಕೃಷ್ಣ ಹಾಗೂ ರಾಧೆ ವೇಷ ಧರಿಸಿದ ಮಕ್ಕಳು ಗಮನ ಸೆಳೆದರು. ನಂತರ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಿಹಿ ಹಂಚಲಾಯಿತು.

ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ- ಶಿಕ್ಷಕಿಯರು, ವಿದ್ಯಾರ್ಥಿಗಳು ಮತ್ತು ಪೋಷಕರು ಹಾಜರಿದ್ದರು.