ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಚರ್ಮ ರೋಗದ ಬಗ್ಗೆ ಅನೇಕರು ನಿರ್ಲಕ್ಷ್ಯ ತೋರುತ್ತಿದ್ದು, ಕಾಂತಿಯುತ ಚರ್ಮ ಸೌಂದರ್ಯ ಅಷ್ಟೇ ಅಲ್ಲ ಆರೋಗ್ಯದ ಲಕ್ಷಣವಾಗಿದೆ. ಚರ್ಮ ರೋಗವನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂದು ಅಥಣಿಯ ಹಿರಿಯ ವೈದ್ಯ ಡಾ.ಸಿ.ಎ.ಸಂಕ್ರಟ್ಟಿ ಹೇಳಿದರು.ಪಟ್ಟಣದ ಸಂಕ್ರಟ್ಟಿ ಚರ್ಮರೋಗ ಗೀತಾಲಯ ಹಾಗೂ ರೋಟರಿ ಕ್ಲಬ್ ಅಥಣಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಚರ್ಮರೋಗ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಚರ್ಮವು ನಮ್ಮ ದೇಹದ ಅತೀ ದೊಡ್ಡ ಅಂಗವಾಗಿದ್ದು, ಸ್ವಚ್ಛತೆ ಇಲ್ಲದಿರುವುದು ಚರ್ಮದ ಅನೇಕ ಕಾಯಿಲೆಗಳಿಗೆ ಮೂಲವಾಗಿದೆ ಎಂದರು.ಚರ್ಮರೋಗದಲ್ಲಿ ಅನೇಕ ವಿಧಗಳಿವೆ. ಕೆಲವೊಂದು ಅನುವಂಶಿಯವಾಗಿ ರಕ್ತದಲ್ಲಿ ಬಂದರೇ ಇನ್ನು ಕೆಲವು ವಾತಾವರಣದಲ್ಲಿನ ಮಾಲಿನ್ಯದಿಂದ ಕೆಲವೊಂದು ಸಸ್ಯ, ಇತರೆ ವಸ್ತುಗಳಿಂದ ಸಹ ಚರ್ಮದ ಅಲರ್ಜಿಗೆ ಕಾರಣವಾಗುತ್ತವೆ. ಚರ್ಮದಲ್ಲಿ ಅಲರ್ಜಿ ಕಾಣಿಸಿಕೊಂಡಾಗ ತಾತ್ಸಾರ ಮಾಡದೇ ನೆರೆಹೊರೆಯವರು ಹೇಳಿದ ಯಾವುದೋ ಸ್ವಯಂ ಔಷಧಿ ಬಳಸದೇ ಹಾಗೂ ಮೂಢನಂಬಿಕೆಗಳಿಗೆ ಮಾರು ಹೋಗದೇ ಚರ್ಮ ರೋಗ ತಜ್ಞರಿಂದ ಸಲಹೆ ಪಡೆದು ಚಿಕಿತ್ಸೆ ಪಡೆದರೇ ಬೇಗ ಪರಿಣಾಮ ಹೊಂದಲು ಸಾಧ್ಯವಿದೆ ಎಂದು ವಿವರಿಸಿದರು.ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿ ಆರೋಗ್ಯ ಸಂಪತ್ತು ಬಹಳ ಮುಖ್ಯವಾದದ್ದು, ಯಾವುದೇ ಕಾಯಿಲೆಯನ್ನು ನಿರ್ಲಕ್ಷಿಸಬಾರದು. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ರಾಸಾಯನಿಕ ಸೌಂದರ್ಯ ವರ್ಧಕಗಳ ಬಳಕೆ, ತೋಟದಲ್ಲಿ ಕೃಷಿ ಮಾಡುವ ರೈತರು ಕೂಡ ಹೆಚ್ಚಾಗಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುತ್ತಿರುವುದರಿಂದ ಚರ್ಮ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ. ರೋಟರಿ ಸಂಸ್ಥೆಯಿಂದ ಈ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಅಥಣಿ ಹಾಗೂ ಸುತ್ತ-ಮುತ್ತಲಿನ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಚರ್ಮರೋಗ ತಜ್ಞೆ ಡಾ.ಮೇಘನಾ ಸಂಕ್ರಟ್ಟಿ ಮಾತನಾಡಿ, ಚರ್ಮರೋಗಗಳಲ್ಲಿ ಅನೇಕ ವಿಧಗಳಿವೆ. ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ 3-4 ಬಾರಿ ಸ್ವಚ್ಛತೆ, ಹಣ್ಣು ಮತ್ತು ತರಕಾರಿ ಸೇವನೆ ಮಾಡುವುದು ಅಗತ್ಯ. ಚರ್ಮ ಸಂಬಂಧಿ ಕಾಯಿಲೆಗಳು ಕಂಡು ಬಂದಾಗ ನಿರ್ಲಕ್ಷ್ಯ ಮಾಡದೇ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ವೈದ್ಯ ಹಾಗೂ ಪತ್ರಿಕಾ ದಿನಾಚರಣೆಯ ಅಂಗವಾಗಿ ಪಟ್ಟಣದ ವಿವಿಧ ವೈದ್ಯರನ್ನು, ಪತ್ರಕರ್ತರನ್ನು ರೋಟರಿ ಸಂಸ್ಥೆಯಿಂದ ಸನ್ಮಾನಿಸಲಾಯಿತು. ಈ ವೇಳೆ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ ಸಚಿನ ದೇಸಾಯಿ, ನಿಕಟ ಪೂರ್ವ ಅಧ್ಯಕ್ಷ ಅರುಣ ಸೌದಗರ, ಕಾರ್ಯದರ್ಶಿ ಶೇಖರ್ ಕೋಲಾರ, ಸಹಾಯಕ ಪ್ರಾಂತಪಾಲ ಮೇಘರಾಜ್ ಪರಮಾರ, ಖಜಾಂಚಿ ಸಂತೋಷ ಬೊಮ್ಮಣ್ಣವರ, ಅರುಣ್ ಯಲಗುದ್ರಿ, ಅನಿಲ್ ದೇಶಪಾಂಡೆ, ಶ್ರೀಕಾಂತ ಅಥಣಿ, ಶಿವು ಶಂಕ್ರಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಅಥಣಿ ಪಟ್ಟಣದಲ್ಲಿ ಡಾ.ಮೇಘನಾ ಸಂಕ್ರಟ್ಟಿ ಚಿಕಿತ್ಸಾಲಯ ಆರಂಭಗೊಂಡಿದ್ದು, ಸಂಬಂಧಪಟ್ಟ ಕಾಯಿಲೆಯವರು ಆಸ್ಪತ್ರೆಗೆ ಭೇಟಿ ನೀಡಿ ಸಲಹೆ, ಚಿಕಿತ್ಸೆ ಪಡೆದುಕೊಳ್ಳಬೇಕು.
-ಡಾ.ಸಿ.ಎ.ಸಂಕ್ರಟ್ಟಿ, ಅಥಣಿಯ ಹಿರಿಯ ವೈದ್ಯರು.ಚರ್ಮರೋಗಗಳಲ್ಲಿ ಅನೇಕ ವಿಧಗಳಿವೆ. ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ 3-4 ಬಾರಿ ಸ್ವಚ್ಛತೆ, ಹಣ್ಣು ಮತ್ತು ತರಕಾರಿ ಸೇವನೆ ಮಾಡುವುದು ಅಗತ್ಯ. ಚರ್ಮ ಸಂಬಂಧಿ ಕಾಯಿಲೆಗಳು ಕಂಡು ಬಂದಾಗ ನಿರ್ಲಕ್ಷ್ಯ ಮಾಡದೇ ವೈದ್ಯರ ಸಲಹೆ ಪಡೆದುಕೊಳ್ಳಬೇಕು.
-ಡಾ.ಮೇಘನಾ ಸಂಕ್ರಟ್ಟಿ, ಚರ್ಮರೋಗ ತಜ್ಞರು.