ಹಿಂದೂ ಮುಸ್ಲಿಮರು ಭಾವೈಕ್ಯದಿಂದ ಆಚರಿಸುವ ಮೊಹರಂ

| Published : Jul 02 2025, 11:53 PM IST

ಹಿಂದೂ ಮುಸ್ಲಿಮರು ಭಾವೈಕ್ಯದಿಂದ ಆಚರಿಸುವ ಮೊಹರಂ
Share this Article
  • FB
  • TW
  • Linkdin
  • Email

ಸಾರಾಂಶ

ಡಂಬಳ ಹೋಬಳಿ ಭಾಗದಲ್ಲಿ ಭಾವೈಕ್ಯತೆಯ ಮೊಹರಂ ಹಬ್ಬ ಈಗಾಗಲೇ ಆರಂಭವಾಗಿದ್ದು, ಇಲ್ಲಿ ಹಿಂದೂ ಮುಸ್ಲಿಮರು ಏಕತೆಯಿಂದ, ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದಾರೆ. ಅಲಾಯಿ ದೇವರು ತಡರಾತ್ರಿ ಮಸೀದಿಯಿಂದ ಹೊರಗಡೆ ಬಂದು ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತವೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ: ಹೋಬಳಿ ಭಾಗದಲ್ಲಿ ಭಾವೈಕ್ಯತೆಯ ಮೊಹರಂ ಹಬ್ಬ ಈಗಾಗಲೇ ಆರಂಭವಾಗಿದ್ದು, ಇಲ್ಲಿ ಹಿಂದೂ ಮುಸ್ಲಿಮರು ಏಕತೆಯಿಂದ, ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದಾರೆ.

ಈಗಾಗಲೇ ಅಲಾಯಿ ದೇವರು ಸ್ಥಾಪನೆ ಆಗಿದ್ದು, ಗುರುವಾರ ತಡರಾತ್ರಿ ಅಲಾಯಿ ದೇವರು ಸವಾರಿ ಮಾಡುತ್ತಾರೆ. ಅಲ್ಲದೆ ಕೆಲವು ಭಾಗದಲ್ಲಿ ಮೊಹರಂ ಹಬ್ಬ ಅತ್ಯಂತ ವೈಶಿಷ್ಟ್ಯತೆಯಿಂದ ಜರುಗುತ್ತಿದ್ದು, ಕೆಲವು ಗ್ರಾಮದಲ್ಲಿ ಮುಸ್ಲಿಮರು ಇಲ್ಲದಿದ್ದರೂ ಹಿಂದೂಗಳೇ ಆಚರಿಸುತ್ತಾರೆ. ಆಲಾಯಿ ದೇವರ ಸ್ಥಾಪಿಸುತ್ತಾರೆ.

ಡಂಬಳ‌ ಗ್ರಾಮದಲ್ಲಿ ಅಲಾಯಿ ದೇವರ ಸ್ಥಾಪನೆಯನ್ನು ಬೀಬಿಫಾತಿಮಾ, ಗೌಳಗೇರ ದೇವರು, ಕಾಸಿಂ ದೇವರು, ಚಾಂದಪೀರಾ, ಸರ್ಕಾವಾಸ, ವಲ್ಲೇನವರ ಅಲಾಯಿ ದೇವರು ಹೀಗೆ ಆರು ಕಡೆಗಳಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಅಲ್ಲದೆ ಪ್ರತಿ ವರ್ಷದಂತೆ ಗ್ರಾಮದ ಗೌಳಗೇರ ಅಲಯಿ ನಿಮಿತ್ತವಾಗಿ ಗುರುವಾರ ದತ್ತರಶಾವಲಿ ದರಗಾದಲ್ಲಿ ಗಂಜಿ ಮತ್ತು ಅನ್ನಸಂತರ್ಪಣೆ ಜರುಗುತ್ತದೆ.

ಕರ್ಬಲಾ ಯುದ್ಧ ಹಝ್ರತ್ ಹುಸೈನ್‌ರ ಹತ್ಯೆ: ಮೊಹರಂ ತಿಂಗಳಲ್ಲಿ ನಡೆದ ಇನ್ನೊಂದು ಘಟನೆ ಕರ್ಬಲಾ ಯುದ್ಧ. ಪ್ರವಾದಿ ಮುಹಮ್ಮದ್ ಅವರ ಮರಣದ ಬಳಿಕ ಆಬೂಬಕರ್, ಉಮರ್‌ಬಿನ್ ಖತ್ತಾಬ್, ಉಸ್ಮಾನ್ ಬಿನ್ ಅಫ್ಘಾನ್ ಹಾಗೂ ಅಲೀ ಬಿನ್ ಅಬೀತಾಲಿಬ್ ಅರೇಬಿಯಾದಲ್ಲಿ ಆಳ್ವಿಕೆ ನಡೆಸುತ್ತಾರೆ. ಅವರ ಆಡಳಿತವು ಖಲೀಫಾ ಆಡಳಿತ ಎಂದೇ ಖ್ಯಾತಿ ಗಳಿಸಿತ್ತು. ಅವರ ಆಡಳಿತ ಕೊನೆಗೊಂಡ ಬಳಿಕ ಮುಆವಿಯಾ ಎಂಬುವರು ಅಧಿಕಾರಕ್ಕೇರುತ್ತಾರೆ. ಮುಅವಿಯಾ ಪ್ರಜಾಸತ್ತಾತ್ಮಕ, ಸರ್ವ ಧರ್ಮಕ್ಕೂ ಸಮಾನತೆ ಸಾರುವ ಆಡಳಿತವನ್ನು ನಡೆಸಿ, ಇತರರಿಗೆ ಮಾದರಿಯಾಗುತ್ತಾರೆ.

ಮುಆವಿಯಾ ತಮ್ಮ ಅಧಿಕಾರದ ಬಳಿಕ ಮಗ ಯಝೀದನಿಗೆ ಪಟ್ಟ ಕಟ್ಟುವುದಕ್ಕೆ ಮುಂದಾಗುತ್ತಾರೆ. ಈ ಮೂಲಕ ಅಲ್ಲಿಯ ತನಕವಿದ್ದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬದಲಾಗಿ, ವಂಶಾಡಳಿತಕ್ಕೆ ಒತ್ತು ಕೊಡುತ್ತಾರೆ. ಆದರೆ ಪ್ರವಾದಿ ಮುಹಮ್ಮದರ ಮೊಮ್ಮಗ ಹುಸೈನರು ಇದನ್ನು ವಿರೋಧಿಸುತ್ತಾರೆ. ಪ್ರವಾದಿ ಮತ್ತು ಖಲೀಫಾಗಳು ತೋರಿಸಿಕೊಟ್ಟ ಮಾದರಿ ಆಡಳಿತವು ವಂಶಾಡಳಿದತ್ತ ಹೋಗುವುದನ್ನು ವಿರೋಧಿಸಿ ಬಂಡೇಳುತ್ತಾರೆ. ಇದರ ಹೊರತಾಗಿಯೂ ಯಝೀದ್‌ಗೆ ಪಟ್ಟ ಕಟ್ಟಲಾಗುತ್ತದೆ. ಆ ವೇಳೆಯಲ್ಲಿ ಯಝೀದ್ ವಿರುದ್ಧ ಹುಸೈನರು ಸಮರ ಸಾರುತ್ತಾರೆ. ಅನ್ಯಾಯದ ವಿರುದ್ಧ ಹೋರಾಡಿದ ಹುಸೈನರು ದುರಾದೃಷ್ಟವಶಾತ್ ಕರ್ಬಲಾ ಎಂಬಲ್ಲಿ ನಡೆದ ಯುದ್ಧದಲ್ಲಿ ಹುತಾತ್ಮರಾಗುತ್ತಾರೆ. ಈ ಘಟನೆ ಇಸ್ಲಾಮಿನ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ.

ಹುಲಿ ವೇಷಧಾರಣೆ: ಅಲಾಯಿ ಹಬ್ಬ ಬಂತೆಂದರೆ ಹುಲಿವೇಷಧಾರಿಗಳಾದ ಯುವಕರು, ಮಕ್ಕಳನ್ನು ಕಾಣಬಹುದು. ಅಲಾಯಿ ದೇವರಿಗೆ ಹರಕೆ ಹೊತ್ತುಕೊಂಡ ಜನರು ಹುಲಿ ವೇಷ ಧರಿಸಿ ತಮ್ಮ ಹರಕೆ ತೀರಿಸುತ್ತಾರೆ. ಸಂಪ್ರದಾಯಕ್ಕಾಗಿ ಹುಲಿವೇಷ ಧರಿಸುವವರು ಒಂದುಕಡೆಯಾದರೆ ಇನ್ನು ಮನರಂಜನೆ, ಹೊಟ್ಟೆಪಾಡಿಗಾಗಿ ಹುಲಿವೇಷ ಧರಿಸುವ ತಕ ವರೂ ಇದ್ದಾರೆ. ಹುಲಿವೇಷ ಧರಿಸಿದವರು ಬಿಸಿಲು, ಮಳೆ, ಚಳಿಯಲ್ಲಿ ಬರಿಮೈಯಲ್ಲಿ ನಿಂತು ಕುಣಿದು ಕುಪ್ಪಳಿಸುತ್ತಾರೆ.

ಸಕ್ಕರೆ ನೈವೇದ್ಯ: ಇನ್ನೂ ಮಸೀದಿಯಲ್ಲಿ ಸ್ಥಾಪನೆಯಾದ ಅಲಾಯಿ ದೇವರಿಗೆ ಜಾತಿ, ಮತ, ಪಂಥ ಭೇದವಿಲ್ಲದೆ ಜನರು ಸಕ್ಕರೆ ನೈವೇದ್ಯ ಸಮರ್ಪಿಸುತ್ತಾರೆ. ಹರಕೆ ಹೊತ್ತ ಜನರು ದೀಡ್ ನಮಸ್ಕಾರ ಹಾಕುತ್ತಾರೆ. ಮೊಹರಂ ಪ್ರಯುಕ್ತ ಕೆಲವು ಕಡೆ ಅನ್ನ ಸಂತರ್ಪಣೆ ಹಾಗೂ ನಾನಾ ಕಾರ್ಯಕ್ರಮಗಳು ಸಹ ಜರುಗುತ್ತವೆ.

ರಾತ್ರಿ ಬರುವ ದೇವರು: ಅಲಾಯಿ ದೇವರು ತಡರಾತ್ರಿ ಮಸೀದಿಯಿಂದ ಹೊರಗಡೆ ಬಂದು ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತವೆ. ರಾತ್ರಿ ಜನರು ದೇವರು ಹೊರಗಡೆ ಬರುವುದನ್ನು ಕಾಯುತ್ತಾ ಇರುತ್ತಾರೆ. ಕೆಲವು ಕಡೆ ಅಲಾಯಿ ದೇವರು ಹೊರಗಡೆ ಬಂದ ನಂತರ ಬೆಂಕಿಯಲ್ಲಿ ಹಾರುವುದು, ನಾನಾ ಪವಾಡಗಳು ಜರುಗುತ್ತವೆ. ಇನ್ನೂ ಕೆಲವು ಕಡೆ ಜನರು ಅಲಾಯಿ ದೇವರನ್ನು ತಮ್ಮ ಕಷ್ಟ, ನಷ್ಟಗಳಿಗೆ ಪರಿಹಾರ ಕೋರಿ ಹರಕೆ ಸಹ ಹೊರುತ್ತಾರೆ.

ಡಂಬಳ ಗ್ರಾಮ ಎಂದರೆ ಭಾವೈಕ್ಯತೆಯ ತಾಣವಾಗಿದ್ದು, ಮೊಹರಂ ಹಬ್ಬವನ್ನು ಪ್ರತಿವರ್ಷ ಗ್ರಾಮದ ಎಲ್ಲ ಜನರು ಸೇರಿಕೊಂಡು ಆಚರಿಸುತ್ತಾರೆ. ಗ್ರಾಮದಲ್ಲಿ ಹಿಂದೂ-ಮುಸ್ಲಿಮರು ಸೇರಿಕೊಂಡು ಹಬ್ಬವನ್ನು ಸಂಭ್ರಮಿಸುತ್ತಾರೆ ಎಂದು ಡಂಬಳ ಗ್ರಾಮದ ಹಿರಿಯ ಮಹಮ್ಮದ ರಫೀಕ ಅಲ್ಲಾವುದ್ದೀನ್‌ ಹೊಸಪೇಟೆ ಹೇಳಿದರು.