ಸಾರಾಂಶ
ಹೊನ್ನಾವರ:
ತಾಲೂಕಿನ ಕಾವೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿವೇಕ ಕೊಠಡಿ ಉದ್ಘಾಟನೆ ಹಾಗೂ ಪ್ರತಿಭಾ ಸಿಂಚನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ವಿವೇಕ ಕೊಠಡಿ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಇಂದು ಎಲ್ಲರಿಗೂ ಶಿಕ್ಷಣ ಅಗತ್ಯ, ಅನಿವಾರ್ಯವು ಆಗಿದೆ. ನನ್ನ ಕ್ಷೇತ್ರದಲ್ಲಿ ಯಾವೊಬ್ಬ ವಿದ್ಯಾರ್ಥಿಯು ಶಿಕ್ಷಣದಿಂದ ವಂಚಿತರಾಗಲು ಬಿಡುವುದಿಲ್ಲ. ಶೈಕ್ಷಣಿಕ ಕೊಡುಗೆ ನೀಡಲು ದಾನಿಗಳು, ಸರ್ಕಾರ ಇದೆ. ಪ್ರತಿಯೊಬ್ಬರು ಶಿಕ್ಷಣವಂತರಾಗಿ ಇನ್ನೊಬ್ಬರಿಗೆ ಮಾರ್ಗದರ್ಶಕರಾಗಿ ಸಹಾಯ, ಸಹಕಾರ ಮಾಡುವ ಹಾಗೆ ಆಗಬೇಕು. ಇನ್ನೊಬ್ಬರ ಹತ್ತಿರ ಸಹಾಯ ಕೇಳುವ ಹಾಗೆ ಆಗಬಾರದು ಎಂದರು.ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ಇಂದು ಬಯಿಸಿದ ಯಾವುದೇ ಶಿಕ್ಷಣ ಬೇಕಾದರೂ ಪಡೆಯಲು ಸಾಧ್ಯವಿದೆ ಎಂದ ಅವರು, ಶಾಲೆಗೆ ಅಗತ್ಯವಿರುವ ಹೆಚ್ಚುವರಿ ಕೊಠಡಿ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಿಕೊಡುತ್ತೇನೆ. ಶಿಕ್ಷಣ ಹಾಗೂ ಕ್ಷೇತ್ರದ ಜತೆ ಸದಾ ಇರುತ್ತೇನೆ ಎಂದು ಸಚಿವರು ಭರವಸೆ ನೀಡಿದರು.ಹಸ್ತಪತ್ರಿಕೆ ಬಿಡುಗಡೆಗೊಳಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ, ಸಚಿವ ಮಂಕಾಳ ವೈದ್ಯರು ಶೈಕ್ಷಣಿಕವಾಗಿ ಯಾವುದೇ ಸಹಾಯ, ಸಹಕಾರ ಬೇಕಿದ್ದರು ಅಗತ್ಯ ನೆರವು ನೀಡುತ್ತಿದ್ದಾರೆ. ಸರ್ಕಾರಿ ಶಾಲೆ ಎಂದರೆ ಅವರಿಗೆ ಅಪಾರ ಗೌರವವಿದೆ. ಶಿಕ್ಷಣದ ಮೇಲೆ ಅವರು ಹೊಂದಿರುವ ಕಾಳಜಿ ನಿಜಕ್ಕೂ ಶ್ಲಾಘನೀಯ ಎಂದರು. ಅಚ್ಚುಕಟ್ಟಾಗಿ ವ್ಯವಸ್ಥಿತ ರೀತಿಯಲ್ಲಿ ಕಾರ್ಯಕ್ರಮ ಸಂಘಟನೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಾಂಸ್ಕೃತಿಕ ಹಾಗೂ ಆಟೋಟ ಸ್ವರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಸಚಿವ ಮಂಕಾಳ ವೈದ್ಯ, ಬಿಇಒ ಜಿ.ಎಸ್. ನಾಯ್ಕ ಸೇರಿದಂತೆ ಪ್ರಮುಖ ಅತಿಥಿಗಳನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ ಗೌಡ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ, ಶಾಲಾ ಮುಖ್ಯಾಧ್ಯಾಪಕ ಶೇಖರ್ ನಾಯ್ಕ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗಣಪಯ್ಯ ಗೌಡ, ಗ್ರಾಪಂ ಸದಸ್ಯರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಬ್ಯಾಂಡ್ ವಾದ್ಯ ಜತೆ ಪೂರ್ಣಕುಂಭ ಸ್ವಾಗತದ ಮೂಲಕ ಸಚಿವ ಮಂಕಾಳ ವೈದ್ಯ ಅವರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಪ್ರತಿಭಾ ಪ್ರದರ್ಶನ ನಡೆಯಿತು. ಯುವಜನ ಕ್ರೀಡಾಧಿಕಾರಿ ಸುಧೀಶ್ ನಾಯ್ಕ ನಿರೂಪಿಸಿದರು. ಮುಖ್ಯಾಧ್ಯಾಪಕ ಶೇಖರ್ ನಾಯ್ಕ ಸ್ವಾಗತಿಸಿದರು. ಮಹದೇವ ಭಂಡಾರಿ ವರದಿ ವಾಚಿಸಿದರು. ಶಿಕ್ಷಕಿ ರೇಣುಕಾ ಶೆಟ್ಟಿ ವಂದಿಸಿದರು.