ಕೋಲಾರ ಕಾಂಗ್ರೆಸ್ ಸಭೆಯಲ್ಲಿ ಡಿಚ್ಚಿ ಫೈಟ್‌: ಇಬ್ಬರು ಆಸ್ಪತ್ರೆಗೆ!

| Published : Feb 14 2024, 02:19 AM IST

ಸಾರಾಂಶ

ಬ್ಯಾನರ್‌ನಲ್ಲಿ ತಮ್ಮ ನಾಯಕರ ಫೋಟೋ ಹಾಕದ ಕಾರಣಕ್ಕೆ ಆರಂಭಗೊಂಡ ಕಾಂಗ್ರೆಸ್‌ನ ಎರಡು ಬಣಗಳ ನಡುವಿನ ಮಾತಿನ ಚಕಮಕಿ ಪರಸ್ಪರ ಹಲ್ಲೆ ನಡೆಸುವ ಮಟ್ಟಕ್ಕೆ ತಿರುಗಿದ ಘಟನೆ ಮಂಗಳವಾರ ನಡೆದ ಇಲ್ಲಿ ನಡೆದ ಬೂತ್ ಏಜೆಂಟರ ಸಭೆಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಕೋಲಾರಬ್ಯಾನರ್‌ನಲ್ಲಿ ತಮ್ಮ ನಾಯಕರ ಫೋಟೋ ಹಾಕದ ಕಾರಣಕ್ಕೆ ಆರಂಭಗೊಂಡ ಕಾಂಗ್ರೆಸ್‌ನ ಎರಡು ಬಣಗಳ ನಡುವಿನ ಮಾತಿನ ಚಕಮಕಿ ಪರಸ್ಪರ ಹಲ್ಲೆ ನಡೆಸುವ ಮಟ್ಟಕ್ಕೆ ತಿರುಗಿದ ಘಟನೆ ಮಂಗಳವಾರ ನಡೆದ ಇಲ್ಲಿ ನಡೆದ ಬೂತ್ ಏಜೆಂಟರ ಸಭೆಯಲ್ಲಿ ನಡೆದಿದೆ. ಸಚಿವ ಕೆ.ಎಚ್‌.ಮುನಿಯಪ್ಪ ಮತ್ತು ಶಾಸಕ ಕೊತ್ತನೂರು ಮಂಜುನಾಥ್‌ ಬಣದ ನಡುವೆ ಈ ಮಾರಾಮಾರಿ ನಡೆದಿದ್ದು, ಘಟನೆ ಬಳಿಕ ಇಬ್ಬರು ಜಿಲ್ಲಾ ನಾಯಕರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ನಗರದ ಕಾಂಗ್ರೆಸ್‌ ಭವನದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೂತ್‌ ಏಜೆಂಟರ ಸಭೆ ಕರೆಯಲಾಗಿತ್ತು. ರಾಜ್ಯಮಟ್ಟದ ನಾಯಕರು ಉಪಸ್ಥಿತರಿದ್ದ ಈ ಸಭೆಯಲ್ಲಿ ಹಾಕಿದ್ದ ಬ್ಯಾನರ್‌ನಲ್ಲಿ ಶಾಸಕ ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿಗಳಾದ ನಜೀರ್ ಅಹ್ಮದ್, ಎಂ.ಎಲ್.ಅನಿಲ್ ಕುಮಾರ್ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಫೋಟೋ ಹಾಕದಿರುವುದನ್ನು ನಗರಸಭೆ ಸದಸ್ಯ ಅಂಬರೀಷ್‌ ಅವರು ಆರಂಭದಲ್ಲೇ ಪ್ರಶ್ನಿಸಿದ್ದಾರೆ. ಇದಕ್ಕೆ ದನಿಗೂಡಿಸಿದ ಮತ್ತೊಬ್ಬ ಕಾಂಗ್ರೆಸ್ ಮುಖಂಡ ವೈ.ಶಿವಕುಮಾರ್, ಏಕವಚನದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಊರುಬಾಗಿಲು ಶ್ರೀನಿವಾಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರಲ್ಲದೆ ಏಕಾಏಕಿ ವೇದಿಕೆಯತ್ತ ತೆರಳಿ ಅವರ ಕೊರಳಪಟ್ಟಿ ಹಿಡಿದು, ಎಳೆದಾಡಿ ತಲೆಗೆ ಡಿಚ್ಚಿ ಹೊಡೆದಿದ್ದಾರೆ.ಈ ಸಂದರ್ಭದಲ್ಲಿ ಎರಡೂ ಬಣಗಳ ಮುಖಂಡರು ಇಬ್ಬರನ್ನೂ ಸಮಾಧಾನಪಡಿಸಿ ಜಗಳ ಬಿಡಿಸಿದರು. ಆದರೂ ಮುಖಂಡರು ಮುಂದೆ ನುಗ್ಗಿ ಹೋಗುವುದು ಮುಂದುವರಿದೇ ಇತ್ತು. ಸಭೆಯಲ್ಲಿ ಉಪಸ್ಥಿತರಿದ್ದ ಪರಿಷತ್ ಮಾಜಿ ಸದಸ್ಯ ಪಿ.ಆರ್.ರಮೇಶ್ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜ್‌ ಕುಮಾರ್‌ ಅವರು ಆರಂಭದಲ್ಲಿ ಜಗಳ ತಡೆಯಲೆತ್ನಿಸಿದರೂ ನಂತರ ಅಸಹಾಯಕರಾಗಿ ನಿಲ್ಲಬೇಕಾಯಿತು.ಘಟನೆಯಿಂದಾಗಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುಮಾರು 1 ಗಂಟೆಗೂ ಅಧಿಕ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿದ್ದ ಗಲ್‌ಪೇಟೆ ಠಾಣೆ ಪೊಲೀಸರು ಇನ್ನಷ್ಟು ಸಿಬ್ಬಂದಿ ಕರೆಸಿಕೊಂಡು ಪರಿಸ್ಥಿತಿ ತಿಳಿಗೊಳಿಸಿದರು. ಗಾಯಗೊಂಡ ಊರುಬಾಗಿಲು ಶ್ರೀನಿವಾಸ್ ಖಾಸಗಿ ಆಸ್ಪತ್ರೆಗೆ ತೆರಳಿ ದಾಖಲಾದರೆ, ವೈ.ಶಿವಕುಮಾರ್ ಜಿಲ್ಲಾಸ್ಪತ್ರೆಗೆ ದಾಖಲಾದರು.ಮತ್ತೊಂದು ಗಲಾಟೆ:

ಊರುಬಾಗಿಲು ಶ್ರೀನಿವಾಸ್ ಹಾಗೂ ವೈ.ಶಿವಕುಮಾರ್ ನಡುವಿನ ಜಗಳ ಒಂದು ಕಡೆಯಾದರೆ, ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಆಪ್ತ, ಕಾಂಗ್ರೆಸ್‌ನ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್ ಹಾಗೂ ಕಾಂಗ್ರೆಸ್‌ ಕಾರ್ಯಕರ್ತ ವೆಂಕಟೇಶ್‌ ನಡುವೆ ಇದೇ ಸಂದರ್ಭದಲ್ಲಿ ಮತ್ತೊಂದು ಗಲಾಟೆ ನಡೆಯಿತು. ವೆಂಕಟೇಶ್‌ ಅವರು ನನ್ನನ್ನು ಕೆಟ್ಟದಾಗಿ ನಿಂದಿಸಿದ್ದಾರೆಂದು ಜಯದೇವ್ ಅವರು ಜೋರುಧ್ವನಿಯಲ್ಲಿ ವಾಗ್ವಾದ ನಡೆಸಿದ್ದು, ಬಳಿಕ ಇಬ್ಬರೂ ನಾಯಕರು ಪರಸ್ಪರ ಕೈ ಕೈ ಮಿಲಾಯಿಸಿಕೊಂಡರು.