ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಗರದ ಕೃಷ್ಣಮೂರ್ತಿಪುರಂನ ರಾಮಯ್ಯರ್ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಟ್ರಸ್ಟ್ ಅಭಿನವ ಮಂತ್ರಾಲಯದಲ್ಲಿ ಆ. 10 ರಿಂದ 12ರವರೆಗೆ ಮೂರು ದಿನಗಳ ಕಾಲ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಲಿದೆ ಎಂದು ಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.ಆರಾಧನೆ ಅಂಗವಾಗಿ ಪ್ರತಿದಿನ ಬೆಳಗ್ಗೆ ಸುಪ್ರಭಾತ ನಿರ್ಮಾಲ್ಯ, ಭಕ್ತರಿಂದ ಪಾದಪೂಜೆ, ಫಲ ಪಂಚಾಮೃತ, ಅಷ್ಟೋತ್ತರ ಪುಷ್ಪಾಲಂಕಾರ, ಪುಷ್ಪಾರ್ಚನೆ, ಮಹಾಮಂಗಳಾರತಿ, ಸಂಜೆ ದೀವಟಿಗೆ ಸೇವೆ, ವೇದಪಾರಾಯಣ, ದೀಪಾಲಂಕಾರ, ಡೋಲೋತ್ಸವ, ರಜತಪಲ್ಲಕ್ಕಿ ಸೇವೆ, ರಜತ ರಥಸೇವೆ, ಅಷ್ಟಾವಧಾನ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ.ಆರಾಧನಾ ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಆ. 10ರ ಸಂಜೆ 6ಕ್ಕೆ ರಾಗಿಣಿ ಸನತ್ ಮತ್ತು ತಂಡದಿಂದ ದಾಸವಾಣಿ, ಆ. 11ರ ಸಂಜೆ 6ಕ್ಕೆ ಪಂಡಿತ ಸುಧಾಂಶು ಆಚಾರ್ಯ ನಾಗರಹಳ್ಳಿ ಅವರಿಂದ ಉಪನ್ಯಾಸ, ಆ. 12ರ ಸಂಜೆ 6ಕ್ಕೆ ಟಿ.ಎಸ್. ಪಟ್ಟಾಭಿರಾಮ್ ಪಂಡಿತ್ ಮತ್ತು ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸುವರು.