ಯಲಬುರ್ಗಾ: ಪಟ್ಟಣದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಸುವರ್ಣ ಮಹೋತ್ಸವ ನಿಮಿತ್ತ ಮೂರು ದಿನಗಳ ಕಾಲ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದೆ. ಪ್ರತಿಯೊಬ್ಬರೂ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂದು ಬ್ರಾಹ್ಮಣ ಸಮಾಜದ ತಾಲೂಕಾಧ್ಯಕ್ಷ ಸುನೀಲ್ ಕುಲಕರ್ಣಿ,ಕಾರ್ಯದರ್ಶಿ ಸುಧೀರ ಕೊರ್ಲಹಳ್ಳಿ ಮನವಿ ಮಾಡಿದರು.
ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸುವರ್ಣ ಮಹೋತ್ಸವ ನಿಮಿತ್ತ ಬುಧವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ಏ. ೧೦ರಿಂದ ೧೨ರವರೆಗೆ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.೧೯೭೬ರಲ್ಲಿ ರಾಘವೇಂದ್ರ ಸ್ವಾಮಿಗಳ ಮಠ ಸ್ಥಾಪನೆಯಾಗಿದೆ.ಈಗ ಸುವರ್ಣ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಸುಮಾರು ೮ ಸಾವಿರ ಭಕ್ತರು ಪಾಲ್ಗೊಳ್ಳಲಿದ್ದಾರೆ. ಸರ್ವ ಸಮುದಾಯದವರು ಸಮಾರಂಭದಲ್ಲಿ ಭಾಗಯಾಗಲಿದ್ದಾರೆ ಎಂದರು.
ಮಹೋತ್ಸವ ನಿಮಿತ್ತ ಸುಪ್ರಭಾತ, ಹೋಮ, ದಾಸವಾಣಿ, ಅನ್ನ ಸಂತರ್ಪಣೆ ಹೀಗೆ ನಾನಾ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀಗಳಿಗೆ ತುಲಾಭಾರ ಸೇವೆ, ಆಶೀರ್ವಚನ, ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದರು.ಅದ್ಧೂರಿ ಮೆರವಣಿಗೆ: ಪಟ್ಟಣದ ಶ್ರೀ ಪಾಂಡುರಂಗ ದೇವಸ್ಥಾನದಿಂದ ಶ್ರೀರಾಘವೇಂದ್ರ ಸ್ವಾಮಿಗಳ ಮಠದವರೆಗೆ ಏ.೧೦ರಂದು ಸಂಜೆ ೬ಕ್ಕೆ ಮಂತ್ರಾಲಯದ ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಗುವುದು. ನಂತರ ಶ್ರೀಗಳು ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.ಈ ಸಮಾರಂಭಕ್ಕೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸೇರಿದಂತೆ ಗಣ್ಯರು, ಪಂಡಿತರು, ವಿದ್ವಾಂಸರು, ಅನೇಕರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ಸಮುದಾಯದ ಪ್ರಮುಖರಾದ ಅಪ್ಪಣ್ಣ ಜೋಶಿ, ಗುರುರಾಜ ತೊಂಡಿಹಾಳ, ಶೇಷಗಿರಿರಾವ್ ಪಟವಾರಿ, ಗುರುರಾಜ ಆಚಾರ್ ಪುರೋಹಿತ ಸೇರಿದಂತೆ ಇತರರು ಇದ್ದರು.